
ಬೆಂಗಳೂರು: ಮಾಗಡಿ ರಸ್ತೆಯ ಟೋಲ್ಗೇಟ್ ಅಂಡರ್ಪಾಸ್ ಮೇಲಿದ್ದ ನಟ ಸಾಹಸ ಸಿಂಹ ವಿಷ್ಣುವರ್ಧನ್ ಪ್ರತಿಮೆಯನ್ನು ನಿನ್ನೆ ರಾತ್ರಿ ತೆಗೆಯಲಾಗಿದ್ದು, ಇದರಿಂದ ಕೆರೆಳಿರುವ ವಿಷ್ಣುವರ್ಧನ್ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಟೋಲ್’ಗೇಟ್ ಸರ್ಕಲ್ ಬಳಿ ಶ್ರೀ ಬಾಲ ಗಂಗಾಧರ ಸ್ವಾಮೀಜಿ ವೃತ್ತ ಎಂದು ಹೆಸರಿಡಲಾಗಿದ್ದು, ವಿಷ್ಣುವರ್ಧನ್ ಅವರ ಪ್ರತಿಮೆ ಇರುವ ಸ್ಥಳದಲ್ಲಿ ಬಾಲಗಂಗಾಧರ ಸ್ವಾಮೀಜಿ ಪ್ರತಿಮೆ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿಯೇ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ ಎಂಬ ಆರೋಪಗಳು ಇದೀಗ ಕೇಳಿ ಬಂದಿವೆ.
ಈ ನಡುವೆ ವಿಚಾರ ತಿಳಿಯುತ್ತಿದ್ದಂತೆಯ ಸ್ಥಳಕ್ಕೆ ಜಮಾಯಿಸಿರುವ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಮೆ ಮರುಸ್ಥಾಪನೆ ಮಾಡುವಂತೆ ಆಗ್ರಹಿಸಿದ್ದಾರೆ.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಚಿವ ವಿ.ಸೋಮಣ್ಣ ಅವರು, ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಮಾತುಕತೆ ಮೂಲಕವೇ ತೆರವು ಮಾಡಲಾಗಿದೆ. ಆದರೆ, ಯಾವ ಕಾರಣಕ್ಕೆ ಪ್ರತಿಭಟನೆ ನಡೆಯುತ್ತಿದೆ ಎಂಬುದು ತಿಳಿಯುತ್ತಿಲ್ಲ. ಕೂಡಲೇ ವಿಷ್ಣುವರ್ಧನ್ ಅವರ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆಂದು ವರದಿಗಳು ಹೇಳಿವೆ.
Comments are closed.