
(ಸಾಂದರ್ಭಿಕ ಚಿತ್ರ)
ಮಂಗಳೂರು, ಡಿಸೆಂಬರ್.25: ಮಂಗಳೂರಿನಲ್ಲಿ ಬಾಲಕನ ಸಹಿತಾ ಕಾರನ್ನು ಟೋಯಿಂಗ್ ಮಾಡಿಕೊಂಡು ಎಳೆದೊಯ್ದ ಪ್ರಕರಣದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಣೆ ನೀಡಿದ್ದಾರೆ.
ಕಾರನ್ನು ಫುಟ್ಪಾತ್ ಮೇಲೆ ಪಾರ್ಕ್ ಮಾಡಿದ್ದರಿಂದ ಟೋಯಿಂಗ್ ಮಾಡಲಾಗಿದೆ. ಇದಕ್ಕೂ ಮೊದಲು ತಮ್ಮ ಸಿಬ್ಬಂದಿ ಕಾರು ನಿಂತ ಸ್ಥಳ, ಕಾರಿನ ದೃಶ್ಯ ಸೆರೆ ಹಿಡಿದಿದ್ದಾರೆ. ಪೊಲೀಸರು 15 ನಿಮಿಷ ಕಾಲ ಕಾದು ಅನಂತರ ಲಾಕ್ ಹಾಕಿದ್ದರು. ಅದುವರೆಗೂ ಯಾರೂ ಬಂದಿರಲಿಲ್ಲ. ಕಾರಿಗೆ ಟಿಂಟ್ ಗ್ಲಾಸ್ ಹಾಕಿದ್ದರಿಂದ ಒಳಗಿರುವವರು ಕಂಡುಬಂದಿಲ್ಲ. ಎಲ್ಲವನ್ನು ಪರಿಶೀಲಿಸಿಯೇ ಕಾರನ್ನು ಟೊಯಿಂಗ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಘಟನೆ ವಿವರ :
ಮಿಜಾರಿನ ದಿವ್ಯಾ ಅವರು ಚಾಲಕ ಮತ್ತು ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಮಲ್ಲಿಕಟ್ಟೆಗೆ ಬಂದಿದ್ದರು. ಕಾರನ್ನು ವಸತಿ ಸಮುಚ್ಚಯವೊಂದರ ಪಕ್ಕದಲ್ಲಿ ನಿಲ್ಲಿಸಿ ದಿವ್ಯಾ ಮತ್ತು ಅವರ ಓರ್ವ ಮಗ ಅಂಗಡಿಗೆ ತೆರಳಿದ್ದರು. ಚಾಲಕ ಮತ್ತು ದಿವ್ಯಾ ಅವರ ಕಿರಿಯ ಪುತ್ರ, ನಾಲ್ಕನೇ ತರಗತಿ ವಿದ್ಯಾರ್ಥಿ ಪ್ರಖ್ಯಾತ್ ಕಾರಿನಲ್ಲೇ ಇದ್ದರು. ದಿವ್ಯಾ ಅವರು ಮೊಬೈಲನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದನ್ನು ಗಮನಿಸಿದ ಚಾಲಕ ಅದನ್ನು ದಿವ್ಯಾರಿಗೆ ನೀಡಲೆಂದು ತೆರಳಿದ್ದಾಗ ಪೊಲೀಸರು ಕಾರಿನಲ್ಲಿದ್ದ ಮಗುವಿನ ಸಹಿತ ಕ್ಷಣಮಾತ್ರದಲ್ಲಿ ಕಾರನ್ನು ಟೋಯಿಂಗ್ ಮಾಡಿದ್ದರು.
ಶಾಪಿಂಗ್ ನಿಂದ ವಾಪಸ್ ಬಂದ ಮಹಿಳೆ ಮತ್ತು ಕಾರ್ ಚಾಲಕ ಗಾಬರಿಗೊಂಡು ಮಗುವಿಗಾಗಿ ಹಲವೆಡೆ ಹುಡುಕಾಡಿದ್ದಾರೆ. ಸ್ಥಳೀಯರು ಟೋಯಿಂಗ್ ಬಗ್ಗೆ ತಿಳಿಸಿದ್ದಾರೆ. ಬಳಿಕ ಸ್ಥಳೀಯರ ಸಹಕಾರದಿಂದ ಒಂದು ಕಡೆ ಸಿಸಿ ಕೆಮರಾ ಪರಿಶೀಲಿಸಿದಾಗ ಕದ್ರಿ ಪೊಲೀಸರು ಟೋಯಿಂಗ್ ಮಾಡಿರುವುದು ಗೊತ್ತಾಯಿತು. ಕೂಡಲೇ ಕದ್ರಿ ಠಾಣೆಗೆ ತೆರಳಿದಾಗ ವಾಹನದೊಳಗೆ ಮಗು ಮಲಗಿರುವುದು ಗೊತ್ತಾಗಿದೆ ಈ ಘಟನೆ ತಿಳಿಯುತ್ತಿದ್ದಂತೆ ಪೊಲೀಸರ ವರ್ತನೆಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಷ ವ್ಯಕ್ತವಾಗಿತ್ತು.
ಮಾತ್ರವಲ್ಲದೇ ನಗರದ ಮಲ್ಲಿಕಟ್ಟೆಯಲ್ಲಿ ಬಾಲಕನಿದ್ದ ಕಾರನ್ನು ಟೋಯಿಂಗ್ ಮಾಡಿಕೊಂಡು ಎಳೆದೊಯ್ದ ಆರೋಪ ಮಂಗಳೂರು ಪೂರ್ವ (ಕದ್ರಿ) ಸಂಚಾರ ಪೊಲೀಸರ ವಿರುದ್ಧ ಕೇಳಿ ಬಂದಿತ್ತು
ಉಜಿರೆಯಲ್ಲಿ ಇತ್ತೀಚೆಗೆ ನಡೆದ ಬಾಲಕನ ಅಪಹರಣ ಪ್ರಕರಣದ ಬಗ್ಗೆ ನನ್ನ ಮಕ್ಕಳಿಗೆ ಹೇಳಿದ್ದೆ. ಅಪರಿಚಿತರು ಬಂದರೆ ಹೇಗಿರಬೇಕು ಎಂದು ತಿಳಿಸಿದ್ದೆ. ಅದರಂತೆಯೇ ನನ್ನ ಮಗ ಕಾರಿನ ಬಾಗಿಲು ತೆರೆಯಲಿಲ್ಲ. ನಾವು ಕೂಡ ಭಯಭೀತರಾದೆವು. ಪೊಲೀಸರು ಅವರಿಗೆ ಖುಷಿ ಬಂದಂತೆ ಮಾಡುತ್ತಿದ್ದಾರೆ. ದಂಡ ಪಾವತಿಸಲು ಹೇಳಿದ್ದಾರೆ. ಆದರೆ ನಾನು ದಂಡ ಕಟ್ಟಲು ನಿರಾಕರಿಸಿದ್ದೇನೆ.
ಕಾರು ನೋ ಪಾರ್ಕಿಂಗ್ ಸ್ಥಳದಲ್ಲಿ ಇರಲಿಲ್ಲ. ಅದು ರಸ್ತೆ ಕೂಡ ಆಗಿರಲಿಲ್ಲ. ನೋ ಪಾರ್ಕಿಂಗ್ ಪ್ರದೇಶದಲ್ಲಿ ಕಾರು ನಿಲ್ಲಿಸಿದರೆ ಪೊಲೀಸರು ಹೊತ್ತೂಯ್ಯುತ್ತಾರೆ ಎಂಬುದು ನನಗೆ ಗೊತ್ತಿತ್ತು. ಹಾಗಾಗಿಯೇ ನೋ ಪಾರ್ಕಿಂಗ್ ಅಲ್ಲದ ಜಾಗದಲ್ಲಿ ನಿಲ್ಲಿಸಿದ್ದೆವು’ ಎಂದು ಮಗುವಿನ ತಾಯಿ ದಿವ್ಯಾ ಅವರು ತಿಳಿಸಿದ್ದಾರೆ. ಕೊನೆಗೆ ಟಿಂಟ್, ನೋ ಪಾರ್ಕಿಂಗ್ ಕೇಸ್ ದಾಖಲಿಸಿ ಕಾರ್ ಬಿಟ್ಟು ಕಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Comments are closed.