ಕರ್ನಾಟಕ

ರಾಜ್ಯದಲ್ಲಿ ಇಂದಿನಿಂದ ರಾತ್ರಿ ಕರ್ಫ್ಯೂ; ಸರಕಾರದ ನಿರ್ಧಾರಕ್ಕೆ ವ್ಯಾಪಕ ಟೀಕೆ

Pinterest LinkedIn Tumblr

ಬೆಂಗಳೂರು: ಬ್ರಿಟನ್​ನ ಹೊಸ ರೂಪಾಂತರದ ಕೊರೋನಾ ವೈರಸ್​ ಆತಂಕದ ಹಿನ್ನಲೆ ರಾಜ್ಯದಲ್ಲಿ ಇಂದಿನಿಂದ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿದ್ದು, ಸರಕಾರದ ಈ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿಜೆಪಿ ಮುಖಂಡ ಬಸವನ ಗೌಡ ಪಾಟೀಲ್ ಯತ್ನಾಳ್, ಎಂಎಲ್ಸಿ ವಿಶ್ವನಾಥ್, ಖ್ಯಾತ ಚಿತ್ರ ಸಾಹಿತಿ ಕವಿರಾಜ್ ಸೇರಿದಂತೆ ಹಲವಾರು ಸರಕಾರದ ನೈಟ್​ ಕರ್ಫ್ಯೂ ಜಾರಿ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೋನಾ ವೈರಸ್ ರಾಜ್ಯದಲ್ಲಿ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಗುರುವಾರ ರಾತ್ರಿ 11 ಗಂಟೆಯಿಂದ ಜನವರಿ 1ರವರೆಗೆ ಪ್ರತಿನಿತ್ಯ ರಾತ್ರಿ 11ರಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಜಾರಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಹೊಸ ಕೊರೋನಾ ವೈರಸ್ ಹರಡದಂತೆ ಪರಿಣಾಮಕಾರಿಯಾಗಿ ತಡೆಗಟ್ಟುವ ಸಂಬಂಧ ಆರೋಗ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ುನ್ನತ ಮಟ್ಟದ ಸಭೆ ನಡೆಸಿದ್ದೇನೆ. ಹೊಸ ವೈರಾಣುವಿಗೆ ವೇಗವಾಗಿ ಹರಡುವ ಲಕ್ಷಣ ಇರುವುದರಿಂದ ರಾಜ್ಯದಲ್ಲಿ ಇದನ್ನು ಸಮರ್ಥವಾಗಿ ನಿಯಂತ್ರಿಸಲು ಜನವರಿ 1ರವರೆಗೆ ರಾತ್ರಿ ಕರ್ಫ್ಯೂ ಘೋಷಿಸಲಾಗುತ್ತಿದೆ. ಹೀಗಾಗಿ ಅಗತ್ಯ ಸೇವೆ, ತುರ್ತು ಅಗತ್ಯಗಳಿಗೆ ಹೊರತುಪಡಿಸಿ ಅನಗತ್ಯವಾಗಿ ಯಾರೂ ರಾತ್ರಿ ವೇಳೆ ಸಂಚಾರ ಮಾಡುವಂತಿಲ್ಲ. ಈ ಬಗ್ಗೆ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯನ್ನು ಪ್ರತೀಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದ್ದರು.

ಈ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯ ಸರ್ಕಾರ ತನಗೆ ಇಚ್ಛೆ ಬಂದಂತೆ ನಿರ್ಧಾರ ತೆಗೆದುಕೊಳ್ಳುತ್ತಿದೆ. ಹಗಲು ವೇಳೆ ಕೊರೋನಾ ಸೋಂಕು ಹರಡುವುದಿಲ್ಲವೇ? ಹಗಲು ವೇಳೆ ಎಲ್ಲ ತೆರೆದು, ರಾತ್ರಿ ಕರ್ಫೂ ಜಾರಿ ಮಾಡಿರುವುದು ಯಾವ ರೀತಿಯ ಕ್ರಮ?’ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರದ ಈ ನಿರ್ಧಾರ ಪ್ರಕಟಗೊಳ್ಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಲು ಆರಂಭವಾಗಿವೆ. ರಾತ್ರಿ ಕರ್ಫ್ಯೂ ಜಾರಿ ಮಾಡುವುದರಿಂದ ಯಾವ ರೀತಿಯ ಪ್ರಯೋಜನವಾಗುತ್ತದೆ ಎಂದು ವಿವರಿಸವಂತೆ ಸಾಕಷ್ಟು ಜನರು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸುತ್ತಿದ್ದಾರೆ.

ಖ್ಯಾತ ಚಿತ್ರ ಸಾಹಿತಿ ಕವಿರಾಜ್ ಅವರೂ ಕೂಡ ಸರ್ಕಾರದ ನಿರ್ಧಾರವನ್ನು ಅಣಕಿಸಿದ್ದು, ರಾತ್ರಿ ಮಾತ್ರ ಕರ್ಫ್ಯೂ ಅಂತೆ. ಕೊರೊನಾನೇನು ಗೂಬೆ ಅನ್ಕೊಂಡಿದಾರ?’ ಎಂದಿದ್ದಾರೆ.

ಮಾಧ್ಯಮಗಳ ಒತ್ತಡಕ್ಕೆ ಮಣಿದು ಸರ್ಕಾರ ಈ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈಗಾಗಲೇ ಜನರು ಪರಿಸ್ಥಿತಿಯೊಂದಿಗೆ ಹೊಂದಿಕೊಂಡು ಹೋಗುವುದನ್ನು ಕಲಿತಿದ್ದಾರೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಹಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದಾರೆ. ಇದನ್ನೇ ಪಾಲನೆ ಮಾಡಿದರೆ ಸಾಕು. ಕೊರೋನಾ ರಾತ್ರಿ ಹೊತ್ತು ಮಾತ್ರ ಓಡಾಡುತ್ತದೆಯೇ? ಎಂದು ವ್ಯಂಗ್ಯವಾಡುತ್ತಿದ್ದಾರೆ.

Comments are closed.