ಕರಾವಳಿ

ನೆರೆಮನೆಯವನಿಂದಲೇ ಕೊಲೆಯತ್ನ-ವೃದ್ಧೆ ಗಂಭೀರ: ಕೊಲ್ಲೂರು ಸಮೀಪ ಘಟನೆ

Pinterest LinkedIn Tumblr

ಕುಂದಾಪುರ: ಬೈಂದೂರು ತಾಲೂಕು ಜಡ್ಕಲ್ ಗ್ರಾಮ ಗುಡ್ಕಲ್ ಸೆಳ್ಕೋಡು ಎಂಬಲ್ಲಿ ವಯೋವೃದ್ಧೆಯ ಕೊಲೆ ಯತ್ನ ನಡೆದಿದ್ದು, ಮಹಿಳೆ ಜೀವನ್ಮರಣ ಸ್ಥಿತಿಯಲ್ಲಿ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕೊಲ್ಲೂರು ಸಮೀಪದ ಜಡ್ಕಲ್ ಗ್ರಾಮದ ಸೆಳ್ಕೋಡು ನಿವಾಸಿಯಾದ 85 ವರ್ಷದ ವೃದ್ಧೆಯೊಬ್ಬರಿಗೆ ಅವರದ್ದೇ ನೆರೆಮನೆ ನಿವಾಸಿ ಚಂದ್ರ ನಾಯ್ಕ್ (70) ಕೊಲೆ ಯತ್ನ ನಡೆಸಿದ್ದಾನೆ. ವಯೋವೃದ್ಧ ತಾಯಿ ಜೊತೆ ವಾಸ ಮಾಡುತ್ತಿರುವ ರಾಮ ನಾಯ್ಕ ಎಂಬವರು ಡಿ.21 ರಂದು ತೆಂಗಿನ ಕಾಯಿ ಕೀಳುವ ಕೆಲಸಕ್ಕೆ ಬೇರೆ ಕಡೆ ಹೋದ ಸಂದರ್ಭದಲ್ಲಿ ಘಟನೆ ನಡೆದಿದೆ.

ಮನೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ತಾಯಿ ಬಗ್ಗೆ ರಾಮ ನಾಯ್ಕಗೆ ಅತ್ತಿಗೆ ದೂರವಾಣಿ ಮೂಲಕ ತಿಳಿಸಿದ್ದರು. ರಾಮ ನಾಯ್ಕ ಮನೆಗೆ ಬಂದು ನೋಡಿದಾಗ ತಾಯಿ ಗಂಭೀರ ಸ್ಥಿತಿಯಲ್ಲಿ ಇದ್ದರು. ನಿತ್ರಾಣಗೊಂಡು ಮನೆಯ ಚಾವಡಿಯಲ್ಲಿ ಮಲಗಿದ್ದು ತಾಯಿ ವಿಚಾರಿಸಿದಾಗ ನೆರೆಮನೆಯ ಚಂದ್ರನಾಯ್ಕ ಎಂಬುವರು ಒಳಗೆ ಬಂದು ಎಳೆದು ದೂಡಿ ಹಾಕಿದ್ದು, ತಲೆಯ ಹಿಂಭಾಗಕ್ಕೆ ಪೆಟ್ಟಾಗಿದ್ದನ್ನು ನೋಡಿ ಹಿಂದಿನ ಬಾಗಿಲಿಂದ ಓಡಿ ಹೋಗಿದ್ದಾನೆ ಎಂಬ ಮಾಹಿತಿ ನೀಡಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ತಾಯಿಗೆ ಸೆಳ್ಕೋಡು ವೈದ್ಯರ ಮನೆಗೆ ಕರೆಯಿಸಿ, ಹೆಚ್ಚಿನ ಚಿಕಿತ್ಸೆಗೆ ವಂಡ್ಸೆ ಖಾಸಗಿ ಕ್ಲಿನಿಕ್ ವೈದ್ಯರಿಗೆ ತೋರಿಸಿ, ಮನೆಗೆ ಕರೆದುಕೊಂಡು ಬಂದಿದ್ದರು. ಡಿ. 22, ರಂದು ಆರೋಗ್ಯ ಬಿಗಡಾಯಿಸಿದ್ದರಿಂದ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ವೃದ್ಧೆ ಅರೆಪ್ರಜ್ಞಾ ವ್ಯವಸ್ಥೆಯಲ್ಲಿದ್ದಾರೆ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments are closed.