
ಕಾಂಚೀಪುರಂ: ತಮಿಳುನಾಡು ವಿಧಾನಸಭೆಗೆ ‘ಮಕ್ಕಳ್ ನೀದಿ ಮಯ್ಯಂ'(ಎಂಎನ್ಎಂ) ಪಕ್ಷದಿಂದ ಚುನಾವಣಾ ಕಣಕ್ಕೆ ಇಳಿದಿರುವ ಖ್ಯಾತ ನಟ ಕಮಲ್ ಹಾಸನ್ ಅವರ ಚುನಾವಣಾ ಪ್ರಣಾಳಿಕೆಯಲ್ಲಿ ಇರುವ ಭರವಸೆ ಸದ್ಯ ಭಾರಿ ಸುದ್ದಿ ಮಾಡುತ್ತಿದೆ. ಏಕೆಂದರೆ ಈ ಪ್ರಣಾಳಿಕೆ ಓದಿದ ಗೃಹಿಣಿಯರು ಅರ್ಥಾತ್ ಮನೆಯಲ್ಲಿಯೇ ಕೆಲಸ ಮಾಡಿಕೊಂಡಿರುವ ಮಹಿಳೆಯರಂತೂ ಬಹಳ ಖುಷಿಯಾಗಿದ್ದಾರೆ.
ಇದಕ್ಕೆ ಕಾರಣ, ಮನೆಯಲ್ಲಿ ನಿತ್ಯ ಕೆಲಸಗಳನ್ನು ಮಾಡುವ ಮಹಿಳೆಯರಿಗೂ ವೇತನ ಸಿಗುವಂತೆ ಮಾಡುವುದಾಗಿ ಘೋಷಿಸಿದ್ದಾರೆ ಈ ನಟ. ಹೊರಗಡೆ ಉದ್ಯೋಗ ಮಾಡಿ ದುಡಿದರಷ್ಟೇ ಅದು ದುಡಿಮೆ, ದಿನಪೂರ್ತಿ ಮನೆಯಲ್ಲಿ ದುಡಿದು ಕುಟುಂಬಸ್ಥರ ಕಾಳಜಿ ವಹಿಸುವ ಗೃಹಿಣಿಗೆ ಸಂಬಳವೂ ಇಲ್ಲ, ಪ್ರಶಂಸೆಯ ಮಾತೂ ಇಲ್ಲ ಎನ್ನುವ ನೋವು ಇದೆ. ಇದನ್ನು ಸುಳ್ಳು ಮಾಡಿ, ಗೃಹಿಣಿಯರಿಗೂ ವೇತನ ಸಿಗುವಂತೆ ಮಾಡುತ್ತೇನೆ ಎಂದಿದ್ದಾರೆ ಕಮಲ್ ಹಾಸನ್.
ಗೌರವಧನ ರೂಪದಲ್ಲಿ ವೇತನ ನೀಡುವ ಮೂಲಕ ಅವರಿಗೆ ಸಲ್ಲತಕ್ಕ ಘನತೆಯನ್ನು ನಮ್ಮ ಪಕ್ಷ ನೀಡಲಿದೆ. ಇದರ ಜತೆಗೆ ಪ್ರತಿಯೊಂದು ಮನೆಗೆ ಆಪ್ಟಿಕಲ್ ಫೈಬರ್ ಮೂಲಕ ಹೈಸ್ಪೀಡ್ ಇಂಟರ್ನೆಟ್ ಒದಗಿಸಲಾಗುವುದು. ಈ ಮೂಲಕ ಮಹಿಳಾ ಸಬಲೀಕರಣಕ್ಕೆ ತಮ್ಮ ಪಕ್ಷ ಆಡಳಿತಕ್ಕೆ ಬಂದಾಗಿನಿಂದ ಶ್ರಮಿಸಲಿದೆ ಎಂದಿದ್ದಾರೆ ಕಮಲ್.
ಇವೂ ಸೇರಿದಂತೆ ಒಟ್ಟು 7 ಸೂತ್ರಗಳ ಅಜೆಂಡಾಗಳನ್ನು ಹೊಂದಿರುವ ಅವರ ಪ್ರಣಾಳಿಕೆಯೊಂದಿಗೆ ಸದ್ಯ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.
Comments are closed.