ಮಂಗಳೂರು / ಬೆಳ್ತಂಗಡಿ, ಡಿಸೆಂಬರ್.18: ಉದ್ಯಮಿಯೊಬ್ಬರ ಪುತ್ರನನ್ನು ತಂಡವೊಂದು ಅಪಹರಿಸಿ ಕೋಟ್ಯಂತರ ಹಣದ ಬೇಡಿಕೆ ಇರಿಸಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಮುಂದೆ ಇರುವ ಉಜಿರೆಯ ರಥಬೀದಿ ಅಶ್ವತ್ಥ ಕಟ್ಟೆ ಸಮೀಪ ಆಟವಾಡುತ್ತಿದ್ದ 8 ವರ್ಷದ ಮಗುವೊಂದನ್ನು ಬಿಳಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಸಿನಿಮೀಯ ರೀತಿಯಲ್ಲಿ ಅಪಹರಣ ನಡೆಸಿ 17 ಕೋ.ರೂ. ಗೆ ಬೇಡಿಕೆಯಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ರಥಬೀದಿಯ ಅಶ್ವತ್ಥಕಟ್ಟೆ ಸಮೀಪದ ನಿವಾಸಿ ಉದ್ಯಮಿ ಬಿಜೋಯ್ ಏಜೆನ್ಸಿಸ್ ಮಾಲಕ ಬಿಜೋಯ್ ಅವರ ಪುತ್ರ ಅನುಭವ್ (8) ಅಪಹರಣಕ್ಕೀಡಾದ ಬಾಲಕ.
ಬಾಲಕನ ಅಜ್ಜ ಎ.ಕೆ ಶಿವನ್ ಸಂಜೆ ವಾಕಿಂಗ್ ಹೋಗಿದ್ದು, ಮೊಮ್ಮಗ ಅನುಭವ್ ಆಟವಾಡಿ ಅಜ್ಜನ ಎದುರಿನಿಂದ ಮನೆ ಕಡೆಗೆ ತೆರಳುತ್ತಿದ್ದ ಎನ್ನಲಾಗಿದೆ. ಈ ವೇಳೆ ಬಿಳಿ ಬಣ್ಣದ ಕಾರಿನಿಂದ ಇಬ್ಬರು ಅಪರಿಚಿತರು ಇಳಿದು ಅನುಭವ್ ನನ್ನು ಬಲವಂತದಿಂದ ಕಾರಿನಲ್ಲಿ ಕುಳ್ಳಿರಿಸಿದ್ದಾರೆ. ಶಿವನ್ ಓಡಿ ಕಾರಿನ ಬಳಿಗೆ ತಲುಪುವ ವೇಳೆಗೆ ಕಾರನ್ನು ಚಲಾಯಿಸಿಕೊಂಡು ರಥ ಬೀದಿ ಕಡೆಗೆ ತೆರಳಿದ್ದಾರೆ.
ಬಳಿಕ ಮಗುವಿನ ತಾಯಿಗೆ ಕರೆ ಮಾಡಿ 100 ಬಿಟ್ ಕಾಯಿನ್ ಅಂದರೆ 17 ಕೋಟಿ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಈ ಬಗ್ಗೆ ಬಾಲಕನ ಅಜ್ಜ ಎ.ಕೆ. ಶಿವನ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿ್ದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪೊಲೀಸರಿಂದ ವ್ಯಾಪಕ ಕಾರ್ಯಾಚರಣೆ: ಬದಲಾಗುತ್ತಿರುವ ಮೊಬೈಲ್ ನೆಟ್ವರ್ಕ್
ಬಾಲಕನ ಅಪಹರಣದ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾದ ಬೆಳ್ತಂಗಡಿ ಪೊಲೀಸರು ಕೂಡಲೇ ಎಲ್ಲ ಮಾಹಿತಿಗಳನ್ನೂ ಕಲೆಹಾಕಿ ಹುಡುಕಾಟ ಆರಂಭಿಸಿದ್ದಾರೆ. ಹಿರಿಯ ಪೋಲೀಸ್ ಅಧಿಕಾರಿಗಳು ಬೆಳ್ತಂಗಡಿಗೆ ಭೇಟಿ ನೀಡಿದ್ದು ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಪೊಲೀಸರು ರಾತ್ರಿಯಿಡೀ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭಿಸಿಲ್ಲ ಎಂದು ತಿಳಿದುಬಂದಿದೆ.
ಬಂಟ್ವಾಳ ಡಿವೈಎಸ್ ಪಿ ವೆಲೆಂಟೈನ್ ಡಿಸೋಜ ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಉಪನಿರೀಕ್ಷಕ ನಂದಕುಮಾರ್, ಧರ್ಮಸ್ಥಳ ಠಾಣೆ ಉಪನಿರೀಕ್ಷಕ ಪವನ್ ಕುಮಾರ್ ತಂಡ ರಚಿಸಿ ತನಿಖೆ ಕೈಗೊಂಡಿದ್ದಾರೆ.
ಬಿಳಿ ಬಣ್ಣದ ಇಂಡಿಕಾ ಕಾರಿನಲ್ಲಿ ನಾಲ್ವರು ಮನೆಮುಂದೆ ಮಗು ಅಪಹರಣ ಆಗುವ 10 ನಿಮಿಷದಿಂದ ನಿಂತಿರುವುದನ್ನು ಮನೆ ಮಂದಿ ಗಮನಿಸಿದ್ದರು. ಬಳಿಕ ಸಂಜೆ 6.30 ರ ಸುಮಾರಿಗೆ ಅಪಹರಣ ನಡೆಸಿ ಚಾರ್ಮಾಡಿ ಅಥವಾ ಧರ್ಮಸ್ಥಳ ಮಾರ್ಗವಾಗಿ ಸಂಚರಿಸಿರುವ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಅಪಹರಣಕಾರರ ಮೊಬೈಲ್ ನೆಟ್ವರ್ಕ್ ಒಂದು ಬಾರಿ ಹಾಸನ, ಮತ್ತೊಮ್ಮೆ ಅಲೂರು ದಾಟಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ತಕ್ಷಣ ಮುಂಡಾಜೆ ಹಾಗೂ ಕೊಟ್ಟಿಗೆಹಾರದಲ್ಲಿ ನಾಕಾಬಂದಿ ವಿಧಿಸಲಾಗಿತ್ತು.
ಅಪಹರಣಕಾರರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ಕುರಿತು ಮನೆ ಮಂದಿ ದೂರಿನಲ್ಲಿ ತಿಳಿಸಿದ್ದಾರೆ. ಕಳೆದ ಒಂದು ವಾರಗಳಿಂದ ರಥಬೀದಿ ಸಮೀದಲ್ಲೆ ಬಿಳಿ ಇಂಡಿಕಾದಲ್ಲಿ ಅನುಮಾನಸ್ಪದ ವ್ಯಕ್ತಿಗಳು ಇರುತ್ತಿದ್ದ ಕುರಿತು ಮೈದಾನದಲ್ಲಿ ಆಟವಾಡುತ್ತಿದ್ದ ಯುವಕರು ಮಾಹಿತಿ ಸ್ಪಷ್ಟಪಡಿಸಿದ್ದಾರೆ. ಅಪಹರಣಗೊಳಿಸಿದ ಕಾರು ಹಳದಿ ನಂಬರ್ ಪ್ಲೇಟ್ ಇರುವುದಾಗಿ ಮನೆಮಂದಿ ಗಮನಿಸಿದ್ದಾರೆ.
Comments are closed.