
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಆರ್ ರೋಷನ್ ಬೇಗ್‌ಗೆ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರತಿ ತಿಂಗಳ 2ನೇ ಮತ್ತು 4ನೇ ವಾರ ಸಿಬಿಐ ಕಚೇರಿಗೆ ಹಾಜರಾಗಬೇಕು, ಪಾಸ್‌ಪೋರ್ಟ್‌ನ್ನು ಸರೆಂಡರ್ ಮಾಡಬೇಕು, ಸಾಕ್ಷಿಗಳ ಮೇಲೆ ಒತ್ತಡ, ಬೆದರಿಕೆ ಹಾಕಬಾರದು ಮತ್ತು ವಿಳಾಸ ಬದಲಿಸಿದರೆ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಷರತ್ತು ವಿಧಿಸಲಾಗಿದೆ.
ನ.22ರಂದು ರೋಷನ್ ಬೇಗ್‌ರನ್ನು ಬಂಧಿಸಿದ್ದ ಸಿಬಿಐ ಅಧಿಕಾರಿಗಳ ತಂಡ, ಮರುದಿನವೇ ಕೋಲ್ಸ್ ಪಾರ್ಕ್ ಪ್ರದೇಶದಲ್ಲಿರುವ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದತ್ತು. ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಚಾರಣೆಗಾಗಿ ವಶಕ್ಕೆ ಪಡೆದಿದ್ದ ಸಿಬಿಐ, ನಂತರ ವಾಪಸ್ ಜೈಲಿಗೆ ಕಳುಹಿಸಿತ್ತು. ಜೈಲು ಮತ್ತು ಸಿಬಿಐ ವಶದಲ್ಲಿದ್ದ ಸಂದರ್ಭದಲ್ಲಿ ತಮಗೆ ಎದೆ ನೋವು ಮತ್ತಿತರ ಆರೋಗ್ಯ ಸಮಸ್ಯೆಗಳು ಇವೆ ಎಂದು ರೋಷನ್ ಬೇಗ್ ನ್ಯಾಯಾಲಯಕ್ಕೆ ತಿಳಿಸಿದ್ದರು.
ತಮ್ಮ ಕಕ್ಷಿದಾರರಿಗ ವಯಸ್ಸಾಗಿರುವ ಜೊತೆಗೆ ಆರೋಗ್ಯ ಸಮಸ್ಯೆಗಳು ಇವೆ. ಪ್ರಕರಣದ ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದ್ದಾರೆ. ಈ ಪ್ರಕರಣದಲ್ಲಿ ಐಎಂಎ ಕಂಪನಿಯ ಸಿಇಒ ಮತ್ತು ಎಂಡಿ ಹೊರತುಪಡಿಸಿ ಉಳಿದೆಲ್ಲರಿಗೆ ಜಾಮೀನು ದೊರಕಿದೆ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು ಎಂದು ರೋಷನ್ ಬೇಗ್ ಪರ ವಕೀಲರು ವಾದಿಸಿದ್ದರು.
ಕಳೆದ ವರ್ಷ ಜೂನ್‌ನಲ್ಲಿ ಬೆಳಕಿಗೆ ಬಂದಿದ್ದ ಸುಮಾರು 2,900 ಕೋಟಿ ರೂ. ವಂಚನೆಯ ಐಎಂಎ ಪ್ರಕರಣದಲ್ಲಿ ವಂಚಕ ಕಂಪನಿಯಿಂದ ರೋಷನ್ ಬೇಗ್ ಅವರು 400 ಕೋಟಿ ರೂ. ಪಡೆದಿದ್ದಾರೆಂದು ಐಎಂಎ ಎಂ.ಡಿ ಮನ್ಸೂರ್ ಖಾನ್ ಆರೋಪಿಸಿದ್ದರು. ರೋಷನ್ ಬೇಗ್ ಅವರಿಗೆ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಪರಪ್ಪನ ಅಗ್ರಹಾರ ಜೈಲಿನ ಬಳಿ ತೆರಳಿ ಬರಮಾಡಿಕೊಂಡರು.
Comments are closed.