ಕರ್ನಾಟಕ

ಗುರುವಾರ ಸಂಪುಟ ವಿಸ್ತರಣೆ?; ಮುಖ್ಯಮಂತ್ರಿ ಭೇಟಿ ಮಾಡಿದ ಕಟೀಲ್​, ಬಿಎಲ್​ ಸಂತೋಷ್​​

Pinterest LinkedIn Tumblr


ಬೆಂಗಳೂರು: ಸಂಪುಟ ವಿಸ್ತರಣೆ ಕುರಿತು ಇಂದು (ಮಂಗಳವಾರ) ಮುಖ್ಯಮಂತ್ರಿ ಯಡಿಯೂರಪ್ಪ ಕಾವೇರಿ ನಿವಾಸಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್​ ಸಂತೋಷ್​ , ಬಿವೈ ವಿಜಯೇಂದ್ರ ಭೇಟಿ ನೀಡಿ ಚರ್ಚೆ ನಡೆಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಇವರ ಬೆನ್ನೆಲ್ಲೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೂಡ ಸಿಎಂ ಜೊತೆ ಸುಮಾರು 35 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಪಕ್ಷದ ಮುಖಂಡರ ಈ ಭೇಟಿ ಸಚಿವರ ಆಯ್ಕೆ ಕುರಿತಾದ ಮಾತುಕತೆ ಎಂಬ ಮಾತು ಕೇಳಿಬಂದಿದೆ. ಸಂಪುಟ ವಿಸ್ತರಣೆ ಚರ್ಚೆ ಕುರಿತು ಕಳೆದೆರಡು ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಬಂದ ಸಿಎಂ ಬಿಎಸ್​ವೈ ಈ ಕುರಿತು ಮೌನವಹಿಸಿದ್ದಾರೆ. ಈ ಕುರಿತು ಯಾವುದೇ ಹೇಳಿಕೆಯನ್ನು ಹೈ ಕಮಾಂಡ್​ ಆಗಲಿ ನೀಡಿಲ್ಲ. ಈಗ ಬಿಎಲ್​ ಸಂತೋಷ್ ಮೂಲಕ ಹೈ ಕಮಾಂಡ್​ ಸುದ್ದಿ ಮುಟ್ಟಿಸಿದ್ದಾರೆ. ಇದೇ ಕಾರಣಕ್ಕೆ ಈ ಭೇಟಿಗಳು ನಡೆಯುತ್ತಿವೆ ಎನ್ನಲಾಗಿದೆ.

ಉಪಚುನಾವಣಾ ಫಲಿತಾಂಶದ ಬಳಿಕ ಸಚಿವ ಸಂಪುಟ ಪುನರಚನೆ ಅಥವಾ ವಿಸ್ತರಣೆ ಕುರಿತು ಸಿಎಂ ಸಾಕಷ್ಟು ಉತ್ಸಕತೆ ತೋರಿದ್ದರು. ಖಾಲಿ ಇರುವ ಏಳು ಸ್ಥಾನಗಳಲ್ಲಿ ಐದು ಸ್ಥಾನಗಳನ್ನು ವಲಸಿರಿಗೆ ನೀಡುವಂತೆ ಅವರು ಹೈ ಕಮಾಂಡ್​ ಮುಂದೆ ಮನವಿಯನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ, ಹೈ ಕಮಾಂಡ್​ ಮಾತ್ರ ಪ್ರತಿಬಾರಿಯಂತೆ ಈ ಕಾರ್ಯವನ್ನು ಮುಂದೂಡಿತು. ಇದೇ ಹಿನ್ನಲೆ ದೆಹಲಿ ಭೇಟಿ ಬಳಿಕ ಸಿಎಂ ಈ ಕುರಿತು ಬಹಿರಂಗ ಹೇಳಿಕೆ ನೀಡುತ್ತಿಲ್ಲ ಎನ್ನಲಾಗಿದೆ.

ಆದರೆ, ಸಿಎಂ ಬಿಎಸ್​ ಯಡಿಯೂರಪ್ಪ ಮನೆಗೆ ಸಚಿವಾಕಾಂಕ್ಷಿಗಳ ದಂಡು ಮಾತ್ರ ದಾಂಗುಡಿ ಇಡುತ್ತಿದೆ. ಎಂಎಲ್​ಸಿ ವಿಶ್ವನಾಥ್​ ಅವರಿಂದ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿವರೆಗೆ ಅನೇಕಸ ಸಚಿವರು ಸಿಎಂ ಭೇಟಿ ಮಾಡುತ್ತಿದ್ದು, ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಮನವಿ ಸಲ್ಲಿಸುತ್ತಿದ್ದಾರೆ. ಈಗ ಸಂತೋಷ್​ ಮೂಲಕ ಇದಕ್ಕೆ ಚಾಲನೆ ಸಿಕ್ಕಿರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಅವರು ದಿಢೀರ್​ ಭೇಟಿ ನಡೆಸಿದ್ದಾರೆ ಎನ್ನಲಾಗಿದೆ.

ಭೇಟಿ ವೇಳೆ ಸಂತೋಷ್​ ರಮೇಶ್ ಜಾರಕಿಹೊಳಿ ಬೆಂಬಲಿಗರಿಕೆ ಸೂಕ್ತ ಸ್ಥಾನಮಾನ ನೀಡುವ ಕುರಿತು ಚರ್ಚೆ ನಡೆಸಿರುವ ಸಾಧ್ಯತೆ ಇದೆ. ಇತ್ತ ನಳೀನ್​ ಕುಮಾರ್​ ಕಟೀಲ್​ ಮೂಲ ನಿವಾಸಿಗಳಿಗೆ ಸ್ಥಾನಕೊಡಿಸಲು ಯತ್ನಿಸುತ್ತಿರುವ ಹಿನ್ನಲೆ ಈ ಇಬ್ಬರ ನಾಯಕರೊಂದಿಗೆ ಸಿಎಂ ಕೂಲಂಕುಷ ಚರ್ಚೆ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಂಪುಟ ಪುನಾರಚನೆಗೆ ಹೈ ಕಮಾಂಡ್​ ಹಸಿರು ನಿಶಾನೆ ತೋರಿದ್ದಾರೆ. ಈ ಕುರಿತು ಪಕ್ಷದ ನಾಯಕರೊಂದಿಗೆ ಚರ್ಚಿಸಲು ಬಿಎಲ್​ ಸಂತೋಷ್​ ಸಿಎಂ ಭೇಟಿ ಮಾಡಿದ್ದಾರೆ. ಇದೇ ಸಂಬಂಧ ಕಟೀಲ್​ ಕೂಡ ಯಾರಿಗೆ ಸ್ಥಾನ ನೀಡಬೇಕು ಎಂದು ಚರ್ಚೆ ನಡೆಸಿದ್ದಾರೆ. ನಾಯಕರ ಈ ಚರ್ಚೆ ಬಳಿಕ ಈ ಕುರಿತು ಅಧಿಕೃತವಾಗಿ ಬಹಿರಂಗಪಡಿಸಲಾಗುವುದು. ನಾಯಕರಲ್ಲಿ ಒಮ್ಮತ ಮೂಡಿದರೆ, ಗುರುವಾರವೇ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬಂದಿದೆ.

Comments are closed.