ಪ್ರಮುಖ ವರದಿಗಳು

ಕೊರೋನಾ ನಂತರದ ತೊಂದರೆ : ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ವಿಧಿವಶ

Pinterest LinkedIn Tumblr

ಗುವಾಹಟಿ, ನವೆಂಬರ್.23: ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ಇಂದು (84) ನಿಧನರಾಗಿದ್ದಾರೆ. ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ತರುಣ್ ಗೊಗೊಯಿ ಅವರು ಸೋಮವಾರ ಸಂಜೆ 5.34ಕ್ಕೆ ಕೊನೆಯುಸಿರೆಳೆದರು.

ಮೂರು ಬಾರಿ ಅಸ್ಸಾಂ ಮುಖ್ಯಮಂತ್ರಿ ಆಗಿದ್ದ ಗೊಗೊಯಿ ಅವರಿಗೆ ಆಗಸ್ಟ್ 26ರಂದು ಕೋವಿಡ್ ದೃಢಪಟ್ಟ ನಂತರ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದು ಮನೆಗೆ ತೆರಳಿ ಆಮೇಲೆ ನವೆಂಬರ್ 2ರಂದು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ನವೆಂಬರ್ 21ರಂದು ಬಹು ಅಂಗಾಂಗ ವೈಫಲ್ಯದಿಂದಾಗಿ ಆರೋಗ್ಯ ತೀವ್ರ ಹದಗೆಟ್ಟಿತ್ತು. ಭಾನುವಾರ ಅವರಿಗೆ ಡಯಾಲಿಸಿಸ್ ಮಾಡಿದ್ದು ಸೋಮವಾರ ಬೆಳಗ್ಗೆ ಆರೋಗ್ಯ ಸ್ಥಿತಿ ಗಂಭೀರವಾಯಿತು ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

ತರುಣ್ ಗೊಗೊಯಿ ಗೌಹತಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನವೆಂಬರ್ 2ರಿಂದ ಕೊರೋನಾ ನಂತರದ ತೊಂದರೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಾಂತ್ ಬಿಸ್ವ ಶರ್ಮಾ ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ಗೊಗೊಯಿ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟ ವಿಷಯ ತಿಳಿಯುತ್ತಿದ್ದಂತೆಯೇ ಗೊಗೊಯಿ ಅವರಿಗೆ ಗೌರವ ನೀಡುವ ನಿಟ್ಟಿನಲ್ಲಿ ದಿಬ್ರುಗಢ್ ನಲ್ಲಿನ ಕಾರ್ಯಕ್ರಮವನ್ನು ಅರ್ಧದಲ್ಲಿಯೇ ರದ್ದುಗೊಳಿಸಿ ಗುವಾಹಟಿಗೆ ವಾಪಸ್ ಆಗಿರುವುದಾಗಿ ಸರ್ಬಾನಂದಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು.

ತರುಣ್ ಗೊಗೊಯಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಸ್ಸಾಂನಲ್ಲಿ ಸತತ ಮೂರು ಬಾರಿ ದಾಖಲೆಯ ಜಯ ಸಾಧಿಸಿತ್ತು. ಇದರೊಂದಿಗೆ ಗೊಗೊಯಿ ಅವರು 15 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಅಸ್ಸಾಂನಲ್ಲಿ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಕೀರ್ತಿ ಗೊಗೊಯಿ ಅವರದ್ದಾಗಿದೆ.

ತರುಣ್ ಗೊಗೊಯಿ ಅವರು ಆರು ಬಾರಿ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದರು. 1971ರಿಂದ 1985ರವರೆಗೆ ಜೋರ್ಹಾಟ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ನಂತರ 1991ರಿಂದ 1998-2002ರವರೆಗೆ ಕಾಲಿಯಾಬೋರ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

1976ರಲ್ಲಿ ಎಐಸಿಸಿಯ ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ನಂತರ ಎಐಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಪ್ರಧಾನಿ ರಾಜೀವ್ ಗಾಂಧಿ ಸಂಪುಟದಲ್ಲಿ ಸಚಿವರಾಗಿದ್ದರು. ಪಿವಿ ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಗೊಗೊಯಿ ಆಹಾರ ಮತ್ತು ಆಹಾರ ಸಂಸ್ಕರಣಾ ರಾಜ್ಯ ಖಾತೆ ಸಚಿವರಾಗಿದ್ದರು.

ಸದ್ಯದ ಮಾಹಿತಿ ಪ್ರಕಾರ ಮೃತದೇಹವನ್ನು ಶ್ರೀಮಂತ ಶಂಕರ್‌ದೇವ ಕಲಾಕ್ಷೇತ್ರದಲ್ಲಿರಿಸಲಾಗುವುದು. ಮಂಗಳವಾರ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

Comments are closed.