ಕರಾವಳಿ

ಇತ್ತೀಚಿನ ದಿನಗಳಲ್ಲಿ ಭಾಷಾ ಶುದ್ಧತೆಯ ಕೊರತೆ ಎದ್ದು ಕಾಣುತ್ತಿದೆ : ಪೇಜಾವರ ಶ್ರೀ

Pinterest LinkedIn Tumblr

ಸಾಹಿತ್ಯದಲ್ಲಿ ಭಾಷಾ ಶುದ್ಧತೆ ಅತೀ ಮುಖ್ಯ- ಪೇಜಾವರ ಶ್ರೀ

ಮಂಗಳೂರು : ಸಂಭೋದನೆ ಅಥವಾ ಸಂವಹನ ಅಲ್ಲದೆ ಸಾಹಿತ್ಯ ಕೃತಿ ರಚನೆಯಲ್ಲೂ ವ್ಯಾಕರಣ ಬದ್ಧವಾದ ಭಾಷಾ ಶುದ್ಧತೆ ಅತ್ಯಂತ ಪ್ರಮುಖವಾದುದು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರು ತಿಳಿಸಿದರು.

ಅವರು ಇತ್ತೀಚೆಗೆ ಎಚ್. ಶಾಂತರಾಜ ಐತಾಳರ ಸಂಕಲನ ಕೃತಿ ‘ಸಾಮಾನ್ಯರಾಗಬೇಡಿ, ಶ್ರೇಷ್ಠರಾಗಿ’ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದು ಶುಭವನ್ನು ಹಾರೈಸಿದರು.

ಇತ್ತೀಚಿನ ದಿನಗಳಲ್ಲಿ ಭಾಷಾ ಶುದ್ಧತೆಯ ಕೊರತೆ ಎದ್ದುಕಾಣುತ್ತಿದೆ. ಇದು ಖೇದನೀಯವೆಂದರು. ಐತಾಳರು ತನ್ನ ನಿವೃತ್ತಿ ಜೀವನವನ್ನು ಸಾಹಿತ್ಯ ಕೃತಿ ರಚನೆಗೆ ಅದರಲ್ಲೂ ಪ್ರಮುಖವಾಗಿ ಪರಿಸರ, ಬಳಕೆದಾರರ ಜಾಗೃತಿ, ಪ್ರವಾಸ ಕಥನ ಆಡಳಿತಾತ್ಮಕ ಲೋಪಗಳು ಮತ್ತು ಅಭಿವೃದ್ಧಿ ಪರ ಚಿಂತನೆಗೆ ತೊಡಗಿಸಿಕೊಂಡು ಸಾರಸ್ವತ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವುದನ್ನು ಶ್ಲಾಘಿಸಿದರು.

ಕೃತಿ ಬಿಡುಗಡೆಗೊಳಿಸಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್. ಎಡಪಡಿತ್ತಾಯ ಮಾತನಾಡುತ್ತಾ ತುಂಬಾ ಮೌಲ್ಯಯುತ ಚಿಂತನೆಯುಳ್ಳ ಬರಹಗಾರರಾದ ಶಾಂತರಾಜ ಐತಾಳರ ಸಾಹಿತ್ಯವು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಧ್ಯಯನ ಯೋಗ್ಯವಾಗಿವೆ. ವೈಜ್ಞಾನಿಕ ಹಾಗೂ ವಿಮರ್ಶಾತ್ಮಕ ಬರಹಗಳು ಅಧಿಕೃತ ದಾಖಲೆ ಸಹಿತ ಒಳಗೊಂಡಿದ್ದು ಅವರ ಚಿಂತನೆ ಶ್ರೇಷ್ಠ ಮಟ್ಟದ್ದಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಮಾತನಾಡಿ ಶಾಂತರಾಜ ಐತಾಳರು ಅನೇಕ ಪತ್ರಿಕೆಗಳಲ್ಲಿ ಅಂಕಣಗಳ ಮೂಲಕ ತನ್ನ ಚಿಕಿತ್ಸಕ ಮತ್ತು ಹಾಸ್ಯ ಮನೋಭೂಮಿಕೆಯ ಲೇಖನಗಳನ್ನು ಪ್ರಕಟಿಸಿ ಸಮಾಜಮುಖಿ ಜಾಗೃತಿ ಸಂದೇಶಗಳನ್ನು ನೀಡಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲೂ ಪ್ರತಿನಿತ್ಯ ಹಸ್ತಲೇಖನಗಳನ್ನು ಬರೆದು ವಾಟ್ಸಪ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಬಿತ್ತರಿಸಿದ್ದಾರೆ. ನಿವೃತ್ತ ಜೀವನವನ್ನು ಸಾಹಿತ್ಯ ರಚನೆಗಾಗಿ ಮುಡಿಪಾಗಿಟ್ಟಿರುವ ಅವರ ಜೀವನ ಸಾಧನೆ ಅನನ್ಯವಾದುದು ಎಂದರು.

ಕೃತಿಕಾರ ಶಾಂತರಾಜ ಐತಾಳರು ಮತ್ತು ಕುಟುಂಬಸ್ಥರು ಈ ಸಂಧರ್ಭ ಉಡುಪಿ ನೀಲಾವರದ ಗೋಶಾಲೆಗೆ ರೂ.೨೫೦೦೦ವನ್ನು ನೀಡುವ ಮೂಲಕ ಧನ್ಯತೆಯನ್ನು ಸೂಚಿಸಿದರು. ಸಂಸ್ಕಾರ ಭಾರತಿ ಉಡುಪಿ ಇಲ್ಲಿನ ವಾಸುದೇವ ಭಟ್ ಪೆರಂಪಳ್ಳಿಯವರು ಕೃತಿ ಪರಿಚಯ ಮಾಡಿದರು.

ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು, ಶಾರದಾ ವಿದ್ಯಾ ಸಂಸ್ಥೆಯ ಯ ಅಧ್ಯಕ್ಷರಾದ ಪ್ರೊ. ಎಂ. ಬಿ. ಪುರಾಣಿಕ್, ಕಾರ್ಪೋರೇಟರ್ ಶ್ರೀಮತಿ ಶಕಿಲಾ ಕಾವ, ಕದ್ರಿ ನವನೀತ ಶೆಟ್ಟಿ, ಜನಾರ್ದನ ಹಂದೆ, ರಜನಿ ಶೆಣೈ ಮೊದಲಾದವರು ಉಪಸ್ಥಿತರಿದ್ದರು.

ಸುಧಾಕರ ರಾವ್ ಪೇಜಾವರ ಸ್ವಾಗತಿಸಿದರು. ಡಾ. ಸಪ್ನಾ ಉಕ್ಕಿನಡ್ಕ ವಂದನಾರ್ಪನೆಗೈದರು. ದಯಾನಂದ ಕಟೀಲು ನಿರೂಪಿಸಿದರು.

Comments are closed.