ಕರ್ನಾಟಕ

ದಿಢೀರ್​ ಬೆಲೆ ಕುಸಿತ ಕಂಡ ಈರುಳ್ಳಿ

Pinterest LinkedIn Tumblr


ವಿಜಯಪುರ: ಕೆಲ ದಿನಗಳಿಂದ ಏರಿಕೆ ಕಂಡಿದ್ದ ಈರುಳ್ಳಿ ಬೆಲೆ ಈಗ ದಿಢೀರ್ ಕುಸಿತ ಕಂಡಿದ್ದು, ರೈತರ ಕಣ್ಣೀರು ಹಾಕುವಂತಾಗಿದೆ. ಜಿಲ್ಲೆಯ ಎಪಿಎಂಸಿಯಲ್ಲಿ ದಿಢೀರ್​ ಈರುಳ್ಳಿ ಬೆಲೆ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ. ಕಳೆದ ವಾರ ಪ್ರತಿ ಕ್ವಿಂಟಾಲ್ ಹಳೆಯ ಮತ್ತು ಉತ್ತಮ ಗುಣಮಟ್ಟದ ಈರುಳ್ಳಿಗೆ ರೂ. 10 ಸಾವಿರ ಬೆಲೆಯಿತ್ತು. ಈ ವಾರ ರೂ. 5000ಕ್ಕೆ ಬೆಲೆ ಇಳಿಕೆಯಾಗಿದೆ. ಹೊಸ ಈರುಳ್ಳಿಗೆ ರೂ. 2500 ಬೆಲೆ ನೀಡಲಾಗುತ್ತಿದೆ. ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಳೆದವಾರ ಬೆಲೆ ಹೆಚ್ಚಿದ್ದ ಹಿನ್ನಲೆ ಈರುಳ್ಳಿ ತಂದ ರೈತರಿಗೆ ಅರ್ಧ ಬೆಲೆಗೆ ಮಾರಾಟವಾಗುವ ಸ್ಥಿತಿ ಬಂದೊದಗಿದೆ. ಬೆಲೆ ಹೆಚ್ಚಳದ ಹಿನ್ನಲೆ ಎರಡು ಮೂರು ಚೀಲ ಈರುಳ್ಳಿ ತಂದ ರೈತರು ಈಗ ಬೆಲೆ ಸಿಗದೇ ಕಣ್ಣೀರು ಹಾಕುವಂತೆ ಆಗಿದೆ.

ಮಳೆಯಿಂದಾಗಿ ಹೊಲದಲ್ಲಿ ಒಂದು ಚೀಲ ಈರುಳ್ಳಿ ಬರುತ್ತಿಲ್ಲ. ಮಳೆಯಿಂದ ಈರುಳ್ಳಿ ಕೊಳೆತಿದೆ ಎಂದು ಖರೀದಿದಾರರ ಸಬೂಬು ಹೇಳುತ್ತಿದ್ದಾರೆ. ಅಲ್ಲದೇ, ಬೆಳೆ ಕೊಳೆಯುತ್ತಿದೆ ಎಂದು ಹೇಳಿ ಖರೀದಿದಾರರು ಬೆಲೆ ಕಡಿತ ಮಾಡುತ್ತಿದ್ದಾರೆ. ಒಂದು ಎಕರೆಗೆ ರೂ. 10 ಸಾವಿರ ನಿರ್ವಹಣೆ ವೆಚ್ಚ ಮಾಡಿದ್ದೇವೆ. ಈಗ 10 ಚೀಲ ಈರುಳ್ಳಿ ಮಾರಾಟಕ್ಕೆ ತಂದಿದ್ದು ಬೆಲೆಯೇ ಇಲ್ಲ ಎಂದು ಮಹಿಳೆ ನಿಂಬೆಕ್ಕ ಪಾಟೀಲ ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಈರುಳ್ಳಿ ಖರೀದಿದಾರರು ಮತ್ತು ಏಜೆಂಟ್ ಆಗಿರುವ ಆಸೀಫ್, ಈರುಳ್ಳಿ ಆವಕ ಕಡಿಮೆಯಾಗಿದೆ. ಒಂದು ಗಾಡಿಯಲ್ಲಿ 5 ರಿಂದ 10 ಪಾಕಿಟ್ ಮಾತ್ರ ಈರುಳ್ಳಿ ಬರುತ್ತಿದೆ. ಬೆಲೆ ಹೆಚ್ಳದಿಂದ ಬೇಡಿಕೆಯೂ ಕುಸಿದಿದೆ. ಇಲ್ಲಿ ಈಗ ರೂ. 50 ರಿಂದ ರೂ. 70ಕ್ಕೆ ಕೆಜಿ ಈರುಳ್ಳಿ ಸಿಗುತ್ತಿದೆ. ಇಷ್ಟೋಂದು ತುಟ್ಟಿ ಹಣ ನೀಡಿ ಯಾರೂ ಈರುಳ್ಳಿ ಖರೀದಿಸಿ ತಿನ್ನುವುದಿಲ್ಲ. ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಈರುಳ್ಳಿಗೆ ಡಬಲ್ ರೇಟ್ ಇದೆ. ಅಲ್ಲಿ ಜನ ಖರೀದಿಸುತ್ತಾರೆ. ಆ ರೇಟ್ ಗೆ ಈ ಭಾಗದ ಹಳ್ಳಿಗಳಲ್ಲಿ ಮತ್ತು ಸಿಟಿಯಲ್ಲಿ ಜನ ಈರುಳ್ಳಿ ಖರೀದಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಪ್ರತಿ ಬುಧವಾರ ಮತ್ತು ರವಿವಾರ ಇಲ್ಲಿ ಈರುಳ್ಳಿ ಮಾರುಕಟ್ಟೆಗೆ ಹೆಚ್ಚಾಗಿ ಬರುತ್ತದೆ. ಇಲ್ಲಿರುವ ಏಜೆಂಟರ ಪ್ರತಿಯೊಂದು ಅಂಗಡಿಗೆ ಈಗ ಕೇವಲ 200 ರಿಂದ 300 ಪ್ಯಾಕೀಟ್​​ ಬರುತ್ತೀವೆ. ಅಲ್ಲದೇ, ಹಳೆಯ ಈರುಳ್ಳಿ ಕೂಡ ಖಾಲಿಯಾಗಿಲ್ಲ. ಹೊಸ ಈರುಳ್ಳಿಗಳು ಕೂಡ ಹಾಳಾಗಿವೆ. ಅಷ್ಟೇ ಅಲ್ಲ, ಇದಕ್ಕೆ ಪೂರಕವಾಗಿ ಬೇರೆ ರಾಜ್ಯಗಳಿಂದಲೂ ಹೊಸ ಈರುಳ್ಳಿ ಇಲ್ಲಿಗೆ ಬರುತ್ತಿದೆ. ಇದರಿಂದಾಗಿ ಉಳ್ಳಾಗಡ್ಡಿ ಬೆಲೆ ಇಳಿಮುಖವಾಗಿದೆ. ರೈತರಿಗೆ ಹೆಚ್ಚಿಗೆ ಬೆಲೆ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ.

ರೇಟ್ ಹೆಚ್ಚಿದೆ ಎಂದು ಮಾರುಕಟ್ಟೆಗೆ ಈರುಳ್ಳಿ ಪ್ಯಾಕೇಟ್​ಗಳನ್ನು ಹೊತ್ತುಗೊಂಡು ಬಂದ ರೈತರು ಸಾಗಾಟ ಬಾಡಿಗೆ, ನಿರ್ವಹಣೆ ವೆಚ್ಚವೂ ಕೈಗೆ ಸಿಗದೆ ಮತ್ತೆ ರೈತರು ಕಣ್ಣೀರು ಹಾಕುವಂತಾಗಿದೆ. ರೂ. 10 ಸಾವಿರ ಬೆಲೆ ಇದೆ ಎಂದು ಈರುಳ್ಳಿ ತಂದಿದ್ದ ಮಿಂಚನಾಳ ಗ್ರಾಮದ ರೈತ ಮಹಿಳೆ ನಿಂಬೆಕ್ಕ ಪಾಟೀಲ್ ಈಗ ಕೂಲಿವೆಚ್ಚವೂ ಸಿಗದಂತೆ ಆಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

Comments are closed.