ಕರಾವಳಿ

ಮುಂಬೈಯಲ್ಲಿ ಬೆಳಂಬೆಳಿಗ್ಗೆ ಕಟ್ಟಡ ಕುಸಿದು ಹತ್ತು ಮಂದಿ ಸಾವು – 25ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ!

Pinterest LinkedIn Tumblr

ಮುಂಬೈ, ಸೆಪ್ಟಂಬರ್.21: ಸೋಮವಾರ ಬೆಳಂಬೆಳಿಗ್ಗೆ ಮುಂಬೈಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದುಬಿದ್ದು ಹತ್ತು ಮಂದಿ ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಬಗ್ಗೆ ವರದಿಯಾಗಿದೆ.

ಇಂದು ಮುಂಜಾನೆ 3.40ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಮಹಾರಾಷ್ಟ್ರದ ಭಿವಾಂಡಿಯ ಪಟೇಲ್ ಕಾಂಪೌಂಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬೆಳಗ್ಗಿನ ಜಾವ 3:40ರ ಸುಮಾರಿಗೆ ಕಟ್ಟಡ ಕುಸಿದುಬಿದ್ದ ಬಳಿಕ ಸ್ಥಳೀಯರು ಕನಿಷ್ಠ 20 ಜನರನ್ನು ರಕ್ಷಿಸಿದ್ದಾರೆ. ಕಟ್ಟಡ ಕುಸಿತ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಂಭವ ಇದೆ ಎಂದು ತಿಳಿದು ಬಂದಿದೆ.

ಆರಂಭಿಕ ಮಾಹಿತಿಯ ಪ್ರಕಾರ ಪಟೇಲ್ ಕಂಪೌಂಡ್ ಪ್ರದೇಶದಲ್ಲಿ ಕುಸಿದುಬಿದ್ದಿರುವ ಕಟ್ಟಡದೊಳಗಿಂದ 31 ಜನರನ್ನು ರಕ್ಷಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್)ಮಗು ಸಹಿತ 11ಜನರನ್ನು ರಕ್ಷಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಎನ್‍ಡಿಆರ್‍ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಅವಶೇಷಗಳಡಿಯಲ್ಲಿ ಸಿಲುಕಿದ್ದ ಪುಟ್ಟ ಮಗು ಸೇರಿದಂತೆ ಈವರೆಗೆ ಹಲವರನ್ನು ರಕ್ಷಿಸಲಾಗಿದೆ.ಇನ್ನೂ 25 ಜನರು ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆಯಿದೆ. 40 ವರ್ಷ ಹಳೆಯದಾದ ಈ ಕಟ್ಟಡದಲ್ಲಿ ಸುಮಾರು 20 ಕುಟುಂಬಗಳು ವಾಸವಾಗಿದ್ದವು ಎನ್ನಲಾಗಿದೆ.

Comments are closed.