ರಾಷ್ಟ್ರೀಯ

ರಾಜ್ಯಸಭೆಯಲ್ಲಿ ಉಂಟಾದ ಕೋಲಾಹಲ: ಟಿಎಂಸಿ, ಕಾಂಗ್ರೆಸ್‌ ಸೇರಿ 8 ಮಂದಿ ಸದಸ್ಯರ ಅಮಾನತು

Pinterest LinkedIn Tumblr

ನವದೆಹಲಿ: ಕೃಷಿ ಮಸೂದೆ ವಿಚಾರವಾಗಿ ರಾಜ್ಯಸಭೆಯಲ್ಲಿ ಉಂಟಾದ ಕೋಲಾಹಲಕ್ಕೆ ಸಂಬಂಧಿಸಿದಂತೆ ಪ್ರತಿ ಪಕ್ಷಗಳ 8 ಸದಸ್ಯರನ್ನು ಅಮಾನತುಗೊಳಿಸಲಾಗಿದೆ.

ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾಧ್ಯಕ್ಷ ಎ. ವೆಂಕಯ್ಯನಾಯ್ಡು ಅವರು ಈ ಎಂಟು ರಾಜ್ಯಸಭಾ ಸದಸ್ಯರನ್ನು ಒಂದು ವಾರಗಳ ಕಾಲ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಭಾನುವಾರ ನಡೆದ ಕೃಷಿ ಮಸೂದೆ ಕುರಿತ ಚರ್ಚೆ ವೇಳೆ ಕೆಲವು ರಾಜ್ಯಸಭಾ ಸದಸ್ಯರು ಹದ್ದುಮೀರಿ ವರ್ತಿಸಿದರು. ತೃಣಮೂಲ ಕಾಂಗ್ರೆಸ್ ಸದಸ್ಯ ಡೆರಿಕ್ ಓಬ್ರಿಯಾನ್, ಕಾಂಗ್ರೆಸ್ ಸಂಸದ ರಿಪುನ್ ಬೋರಾ, ಎಎಪಿ ಸದಸ್ಯ ಸಂಜಯ್ ಸಿಂಗ್ ಹಾಗೂ ಡಿಎಂಕೆ ಸಂಸದ ತಿರುಚಿ ಶಿವ ಅವರು ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ಅವರಿದ್ದ ವೇದಿಕೆ ಬಳಿ ತೆರಳಿ ಪೋಡಿಯಂನ ಮೈಕ್‌ ಕಸಿದುಕೊಳ್ಳಲು ಯತ್ನಿಸಿದರು.

ಉಪಾಧ್ಯಕ್ಷರ ವಿರುದ್ಧ ಘೋಷಣೆ ಕೂಗಿ, ಕಾಗದ-ಪತ್ರಗಳನ್ನು(ರೂಲ್‌ಬುಕ್‌) ಹರಿದು ಹಾಕಿ ರಂಪಾಟ ನಡೆಸಿದ್ದರು. ಇನ್ನು ರಾಜ್ಯಸಭೆಯಲ್ಲಿ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆ 10 ನಿಮಿಷಗಳ ಕಾಲ ಕಲಾಪ ಮುಂದೂಡಲಾಗಿತ್ತು. ಬಳಿಕ, ವಿಪಕ್ಷ ಸದಸ್ಯರ ಪ್ರತಿಭಟನೆ ನಡುವೆಯೂ, ಕೃಷಿ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ಸಿಕ್ಕಿತು.

ಇನ್ನು ಪ್ರತಿಪಕ್ಷಗಳ ಸದಸ್ಯರು ರಾಜ್ಯಸಭೆಯಲ್ಲಿ ರಂಪಾಟ ನಡೆಸಿದ್ದರಿಂದ, ರಾಜ್ಯಸಭಾಧ್ಯಕ್ಷ ವೆಂಕಯ್ಯನಾಯ್ಡು ತೀವ್ರ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ದಾಂಧಲೆ ನಡೆಸಿದ ಸಂಸದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ.

ಅಮಾನತುಗೊಂಡವರು ಯಾರು?
ತೃಣಮೂಲ ಕಾಂಗ್ರೆಸ್ ಸದಸ್ಯ ಡೆರಿಕ್ ಓಬ್ರಿಯಾನ್, ಕಾಂಗ್ರೆಸ್ ಸಂಸದ ರಿಪುನ್ ಬೋರಾ, ಎಎಪಿ ಸದಸ್ಯ ಸಂಜಯ್ ಸಿಂಗ್, ರಾಜು ಸತವ್, ಕೆಕೆ ರಾಗೇಶ್‌, ಡೋಲಾ ಸೇನ್‌, ಸಯ್ಯದ್‌ ನಜೀರ್‌ ಹುಸೈನ್‌ ಹಾಗೂ ಎಲಮರನ್‌ ಕರೀಂ ಅಮಾನತುಗೊಂಡ ಸದಸ್ಯರುಗಳು.

Comments are closed.