ಕರ್ನಾಟಕ

ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ; ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದ ಕಾಗಿನೆಲೆ ಶ್ರೀ ನಿಯೋಗ

Pinterest LinkedIn Tumblr


ಬೆಂಗಳೂರು; ಬೆಳಗಾವಿಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ ವಿವಾದವನ್ನು ಪರಿಹರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ ಸಂಬಂಧ ನಾಳೆ ಹಲವು ಸಂಘಟನೆಗಳಿಂದ ಬೆಳಗಾವಿಯಲ್ಲಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕಾಗಿನೆಲೆ ಸ್ವಾಮೀಜಿಗಳ ನಿಯೋಗ ಇಂದು ಸಂಜೆ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿತು. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಪ್ರತಿಮೆ ನಿರ್ಮಾಣ ವಿವಾದ ಹಾಗೂ ಪ್ರಕ್ಷುಬ್ಧ ಪರಿಸ್ಥಿತಿ ಕುರಿತು ಮಾತುಕತೆ ನಡೆಸಿತು. ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸುವ ಕುರಿತು ಚರ್ಚೆ ನಡೆಸಲಾಯಿತು.

ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಇಂದು ಕಾಗಿನೆಲೆ ಗುರುಪೀಠದ ಗುರುಗಳು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೆಳಗಾವಿ ನಗರದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಾಣ ವಿಚಾರವಾಗಿ ಚರ್ಚೆ ನಡೆಸಲಾಯಿತು. ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ ಮಾಡಲು ಸರ್ಕಾರ ಸಿದ್ದವಿದ್ದು, ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ಸಿಎಂ ಮಾತನಾಡಿದ್ದಾರೆ. ಹಾಗಾಗಿ ನಾಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ, ಕಾನೂನಾತ್ಮಕವಾಗಿ ಶಾಂತಿಯುತವಾಗಿ ನಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಸಿಎಂ ಭೇಟಿ ಬಳಿಕ ಮಾತನಾಡಿದ ಕಾಗಿನೆಲೆ ಶ್ರೀಗಳಾದ ನಿರಂಜನಾನಂದಪುರಿ ಸ್ವಾಮಿಜಿ, ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿ ಚರ್ಚಿಸಿದ್ದೇವೆ. ರಾಯಣ್ಣನ ಪುತ್ಥಳಿಯನ್ನು ಮರು ನಿರ್ಮಾಣ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ, ನಾಳೆ ವಿವಿಧ ಸಂಘಟನೆಗಳು, ರಾಯಣ್ಣನ ಅಭಿಮಾನಿಗಳು ಬೆಳಗಾವಿ ಚಲೊ ರ್ಯಾಲಿ ಹಮ್ಮಿಕೊಂಡಿದ್ದಾರೆ. ದಯವಿಟ್ಟು ಎಲ್ಲರೂ ಶಾಂತಿಯುತವಾಗಿ ಪ್ರತಿಭಟನೆ ‌ಮಾಡಬೇಕು. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಮನವಿ ಮಾಡಿದರು.

Comments are closed.