ಅಂತರಾಷ್ಟ್ರೀಯ

ಮುಂಜಾನೆ ಕೋಳಿ ಕೂಗಿದ್ದಕ್ಕೆ ಮಾಲಿಕನಿಗೆ 14 ಸಾವಿರ ರೂ. ದಂಡ !

Pinterest LinkedIn Tumblr

ಮುಂಜಾನೆ ಕೂಗದ ಕೋಳಿ ಇದೆಯಾ…? ಬೆಳಗ್ಗೆ ಕೋಳಿ ಕೂಗುವುದು ಸಾಮಾನ್ಯ. ಒಂದರ್ಥದಲ್ಲಿ ಕೋಳಿ ಹಿಂದಿನ ಕಾಲದಲ್ಲಿ ಹಿರಿಯರ ಅಲರಾಂ ಇದ್ದಂತೆ ಇತ್ತು. ಆದರೆ, ಈಗ ಇದೇ ಕೋಳಿ ಕೂಗಿದ ವಿಷಯ ಮಾಲಿಕರೊಬ್ಬರನ್ನು ದಂಡ ತೆರುವಂತೆ ಮಾಡಿದೆ. 166 ಯುರೋ ಅಂದರೆ ಭಾರತದ ಸುಮಾರು 14 ಸಾವಿರ ರೂಪಾಯಿಯನ್ನು ವೃದ್ಧರೊಬ್ಬರು ದಂಡದ ರೂಪದಲ್ಲಿ ಕಟ್ಟಿಬೇಕಾಗಿದೆ.

ಇದು ನಡೆದಿರುವುದು ಇಟಲಿಯಲ್ಲಿ. ಇಟಲಿಯ ಲೊಂಬಾರ್ಡಿಯ ಪಟ್ಟಣವಾದ ಕ್ಯಾಸ್ಟಿರಾಗಾ ವಿದಾರ್ಡೊದ ಏಂಜೆಲೊ ಬೊಲೆಟ್ಟಿ ಎಂಬ 83 ವರ್ಷದ ವೃದ್ಧರೊಬ್ಬರು ತಮ್ಮ ಮನೆಯಲ್ಲಿ ಕೋಳಿ ಸಾಗಿದ್ದರು. ಈ ಹುಂಜ ಮುಂಜಾನೆ 4:30ಕ್ಕೂ ಬೇಗ ದಿನಾ ಕೂಗುತ್ತಿತ್ತು. ಅರೇ ಮುಂಜಾನೆ ಹುಂಜ ಕೂಗುವುದು ಸಾಮಾನ್ಯವಲ್ವೇ ಅಂತ ನೀವು ಕೇಳಬಹುದು. ಹೌದು, ಖಂಡಿತಾ ಹುಂಜ ಬೆಳಗ್ಗೆ ಕೂಗುವುದು ಸಾಮಾನ್ಯ ಸಂಗತಿಯೇ. ಆದರೆ, ಈ ಹುಂಜ ಕೂಗುವುದು ಏಂಜೆಲೋ ಅವರ ನೆರೆಮನೆಯ ಕೆಲವರಿಗೆ ಅಪಥ್ಯವಾಗಿತ್ತು. ಬೆಳಗ್ಗೆ ಬೆಳಗ್ಗೆ ಈ ಕೋಳಿ ನಿದ್ದೆ ಹಾಳು ಮಾಡುತ್ತಿದೆ ಎಂದು ಇವರು ಸದಾ ಗೊಣಗುತ್ತಿದ್ದರು. ಹೀಗಾಗಿ, ಸಾಕಷ್ಟು ಬಾರಿ ಏಂಜೆಲೋ ಅವರಿಗೆ ಇವರು ತಮಗೆ ನಿಮ್ಮ ಹುಂಜನಿಂದ ಕಿರಿಕಿರಿಯಾಗುತ್ತದೆ ಎಂದು ಹೇಳಿದ್ದರು. ಆದರೆ, ಪಾಪ, ಏಂಜೆಲೋ ಅವರಾದರೂ ಏನು ಮಾಡಿಯಾರು…? ಹೀಗಾಗಿ, ಒಂದಷ್ಟು ದಿನಗಳ ಬಳಿಕ ಈ ನೆರೆಮನೆಯವರು `ನಮಗೆ ಬೆಳಗ್ಗೆ ಈ ಹುಂಜ ಕೂಗುವುದರಿಂದ ತೊಂದರೆಯಾಗುತ್ತಿದೆ’ ಎಂದು ಸೀದಾ ಹೋಗಿ ಪೊಲೀಸರಿಗೆ ದೂರು ಕೊಟ್ಟಿದ್ದರು.

ಸಾಕುಪ್ರಾಣಿಗಳನ್ನು ನೆರೆಮನೆಯಿಂದ ಕನಿಷ್ಠ 10 ಮೀಟರ್ ದೂರದಲ್ಲಿ ಇಡಬೇಕು ಎಂಬುದು ಇಲ್ಲಿನ ಕಾನೂನು. ಇತ್ತ, ನೆರೆಮನೆಯವರಿಂದ ಸಾಕಷ್ಟು ದೂರುಗಳು ಬಂದಿದ್ದ ಕಾರಣದಿಂದ ಸ್ವತಃ ಪೊಲೀಸರೇ ಇದರ ಪರೀಕ್ಷೆಗಿಳಿದಿದ್ದರು. ಈ ವೇಳೆ, ಕೋಳಿ ಬೇಗ ಕೂಗುತ್ತಿದೆ ಎಂಬುದು ಪೊಲೀಸರಿಗೂ ಮನವರಿಕೆಯಾಗಿತ್ತು. ಹೀಗಾಗಿ, ಪೊಲೀಸರು ಏಂಜೆಲೊ ಬೊಲೆಟ್ಟಿ ಅವರಿಗೆ 166 ಯುರೋ ಅಂದರೆ ಭಾರತದ ಸುಮಾರು 14 ಸಾವಿರ ರೂಪಾಯಿಯನ್ನು ದಂಡವಾಗಿ ವಿಧಿಸಿದ್ದಾರೆ.

`ನನಗೆ ಇದು ಆಶ್ಚರ್ಯ ತಂದಿದೆ. ಅವರು ಇಷ್ಟು ದೂರ ಅಂತರ ಇರಬೇಕು ಎಂದು ಮೊದಲೇ ಹೇಳಬಹುದಿತ್ತು’ ಎಂದು ಬೊಲೆಟ್ಟಿ ಇಟಾಲಿಯನ್ ಪತ್ರಿಕೆಗಳಿಗೆ ನೋವಿನಿಂದಲೇ ಹೇಳಿದ್ದಾರೆ. ಆದರೆ, ಕ್ಯಾಸ್ಟಿರಾಗಾ ವಿದಾರ್ಡೊದ ಮೇಯರ್ ಎಮ್ಮಾ ಪರ್ಫೆಟ್ಟಿ ಅವರು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. `ಈ ಕೋಳಿ ಬೇಗ ಕೂಗುತ್ತದೆ ಎಂಬುದರ ಬಗ್ಗೆ ಪೊಲೀಸರಿಗೆ ನೆರೆಹೊರೆಯವರಿಂದ ಸಾಕಷ್ಟು ದೂರುಗಳು ಬಂದಿದ್ದವು. ಹೀಗಾಗಿ, ಇವರಿಗೆ ಕ್ರಮ ಕೈಗೊಳ್ಳದೆ ಬೇರೆ ದಾರಿ ಇರಲಿಲ್ಲ. ಅದೂ ಅಲ್ಲದೆ, ಪೊಲೀಸ್ ಅಧಿಕಾರಿಯೊಬ್ಬರು ರಾತ್ರಿಯ ಸಮಯದಲ್ಲಿ ಬೊಲೆಟ್ಟಿಯವರ ವಿಲ್ಲಾದ ಬಳಿ ಇದ್ದರು ಮತ್ತು ಈ ಹುಂಜ ಬೆಳಗ್ಗೆ 4: 30ಕ್ಕೆ ಕೂಗಲು ಆರಂಭಿಸಿತ್ತು ಮತ್ತು ಬೆಳಗ್ಗೆ 6:00 ರವರೆಗೆ ಕೂಗುವುದನ್ನು ಮುಂದುವರಿಸಿತ್ತು’ ಎಂದು ಹೇಳಿದ್ದಾರೆ.

ಈ ಹುಂಜ ಸಾಕಷ್ಟು ವರ್ಷ ಬೊಲೆಟ್ಟಿಯವರ ಬಳಿಯೇ ಇತ್ತು. ನೆರೆಹೊರೆಯವರು ದೂರು ನೀಡಿದ ಹಿನ್ನೆಲೆಯಲ್ಲಿ ಇದನ್ನು ಈ ಹಿಂದೆ ಇವರು ತನ್ನ ಸ್ನೇಹಿತನಿಗೆ ಸಾಕಲು ಕೊಟ್ಟಿದ್ದರಂತೆ. ಆದರೆ, `ಈಗ ನನ್ನ ಸ್ನೇಹಿತ 20 ದಿನಗಳ ಕಾಲ ಊರಿನಲ್ಲಿ ಇರಲಿಲ್ಲ. ಅದಕ್ಕಾಗಿ ಈ ಹುಂಜವನ್ನು ತಾತ್ಕಾಲಿಕವಾಗಿ ತಂದು ಸಾಕಿದ್ದೇನೆ’ ಎನ್ನುವುದು ಏಂಜಲೋ ಅವರ ಮಾತು. ಹೀಗಾಗಿ, ತನ್ನ ದಂಡವನ್ನು ರದ್ದುಪಡಿಸುವಂತೆ ಮನವಿ ಮಾಡಲು ಇವರೀಗ ಯೋಚಿಸಿದ್ದಾರೆ.

Comments are closed.