ಕರ್ನಾಟಕ

ಕೊರೋನಾ ಗಣನೀಯ ಹೆಚ್ಚಳ; ಬೆಳ್ಳಂ ಬೆಳಗ್ಗೆಯೇ ಡಿಸಿಎಂ, ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಯಡಿಯೂರಪ್ಪ

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಹಿನ್ನಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು ಬೆಳ್ಳಂ ಬೆಳಗ್ಗೆಯೇ ತಮ್ಮ ನಿವಾಸದಲ್ಲಿ ಉಪಮುಖ್ಯಮಂತ್ರಿಗಳು, ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.

ಇಂದು ಬೆಳಗ್ಗೆ ಕಾವೇರಿ ನಿವಾಸದಲ್ಲಿ ಉಪಮುಖ್ಯಮಂತ್ರಿಗಳು, ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಕೋವಿಡ್ ಕೇರ್ ಸೆಂಟರ್ ನಿರ್ವಹಣೆ ಕುರಿತಂತೆ ತುರ್ತು ಸಭೆ ನಡೆಸಲಾಯಿತು. ಈ ವೇಳೆ ಸಭೆಯಲ್ಲಿ ಕಂಟೇನ್ಮೆಂಟ್ ನಿಯಮಗಳ ಕಟ್ಟುನಿಟ್ಟಿನ ಪಾಲನೆ, ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದು, ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಈ ತುರ್ತು ಸಭೆಯಲ್ಲಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ರಾಜಕೀಯ ಕಾರ್ಯದರ್ಶಿ ಎಚ್.ಆರ್. ವಿಶ್ವನಾಥ್ ಸೇರಿದಂತೆ ಇನ್ನೂ ಅನೇಕ ಅಧಿಕಾರಿಗಳು ಭಾಗಿಯಾಗಿದ್ದಾರೆ. ಸಭೆಯಲ್ಲಿ ಬೆಂಗಳೂರಿನ ಕೋವಿಡ್ ಕೇರ್ ಸೆಂಟರ್​​ಗಳಲ್ಲಿನ ನಿರ್ವಹಣೆ ಕುರಿತಾದ ತುರ್ತು ಸಮಾಲೋಚನೆ ನಡೆಸಲಾಯಿತು. ಸಭೆಯಲ್ಲಿ ಸಚಿವರು ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು.

ಇತ್ತೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ವೈರಸ್​ ಪ್ರಕರಣಗಳ ಸಂಖ್ಯೆ ಶರವೇಗದಲ್ಲಿ ಹೆಚ್ಚುತ್ತಿದೆ. ಆದರೆ ನಗರದ ಆಸ್ಪತ್ರೆಗಳು ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಬಿಬಿಎಂಪಿ ಸೋಂಕಿತರ ವಿಚಾರದಲ್ಲಿ ತೀರಾ ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಹೀಗಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ತುರ್ತು ಸಭೆ ನಡೆಸಿದರು ಎನ್ನಲಾಗಿದೆ.

Comments are closed.