ಕುಂದಾಪುರ: ಕುಸಿದು ಬಿದ್ದ ಗೋಡೆಗಳು….ಮೇಲ್ಮಾಡು ಹಂಚು ನೆಲಕ್ಕಚ್ಚಿದೆ, ಇದ್ಯಾವುದೋ ಪಾಳು ಬಿದ್ದ ಕೊಂಪೆಯಲ್ಲ….ಬದಲಾಗಿ ಇದೊಂದು ಪುರಾಣ ಪ್ರಸಿದ್ಧ ದೇವಸ್ಥಾನ…ಮುರುಕಲು ಈ ಗುಡಿಯೊಳಗೆ ನಿತ್ಯವೂ ನಡೆಯುತ್ತೆ ದ್ವಿಕಾಲ ಪೂಜೆ.
ಹೇಳಿಕೇಳಿ ಉಡುಪಿ ಜಿಲ್ಲೆ ದೇವಾಲಯಗಳ ನಗರಿ. ದೇವಸ್ಥಾನಗಳು, ದೈವಸ್ಥಾನ, ಗರಡಿ, ಭಜನಾ ಮಂದಿರ, ನಾಗಬನಗಳು ಅತ್ಯಂತ ಆಕರ್ಷಕವಾಗಿ ಕೋಟಿ ಕೋಟಿ ವೆಚ್ಚದಲ್ಲಿ ಜೀಣೋದ್ಧಾರಗೊಂಡ ಅದೆಷ್ಟೋ ಉದಾಹರಣೆಗಳಿದೆ. ಈತನ್ಮಧ್ಯೆ ರಾಜ್ಯದಲ್ಲಿ ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲದಷ್ಟು ಅತ್ಯಂತ ಶೋಚನೀಯ ಸ್ಥಿತಿ ಇಲ್ಲಿನ ದೇವಸ್ಥಾನದಲ್ಲಿದೆ. ಕುಂದಾಪುರ ತಾಲೂಕಿನ ಶಂಕರನಾರಾಯಣದ ಸೌಡ ಹಳೇ ಆಗ್ರಹಾರ ಶ್ರೀ ವೆಂಕಟರಮಣ ದೇವಸ್ಥಾನ ಶಿಥೀಲಗೊಂಡು ಮೂರೂವರೆ ದಶಕವಾಗಿದ್ದು ಇಂದಿಗೂ ಜೀರ್ಣೋದ್ಧಾರಕ್ಕೆ ಸಕಾಲ ಕೂಡಿಬಂದಿಲ್ಲ.

ನೆರೆಗೆ ನೆಲಸಮವಾದ ದೇಗುಲ…
ಶತಶತಮಾನಗಳ ಇತಿಹಾಸ, ರಾಜ, ಪಾಳೆಗಾರರ ಬಳುವಳಿ, ಉಂಬಳಿ ಇರುವ ಭಕ್ತರಿಗೆ ಅಭಯದಾಯಕ, ವಿದ್ಯಾದೇಗುಲವಾಗಿ, ಮೊಟ್ಟ ಮೊದಲು ದೇವಸ್ಥಾನದಲ್ಲಿ ಅನ್ನಪ್ರಸಾದ ಆರಂಭವಾಗಿದ್ದು ಇಲ್ಲಿನ ಇತಿಹಾಸ. ಅಲ್ಲದೇ ಪ್ರಥಮ ಸ್ವರ್ಣ ಲೇಪಿತ ಕಲಶಕ್ಕೆ ನಗರದ ಶಿವಪ್ಪ ನಾಯ್ಕ್ ಚಿನ್ನ ಲೇಪನಕ್ಕೆ ರಖಂ ನೀಡಿದ ಹಾಗೂ ಶ್ರೀ ಕೃಷ್ಣ ದೇವ ಎಂಬ ರಾಜ ಚಿನ್ನದ ಕಾಯಿನ್ ಉಡುಗೊರೆ ಕೊಟ್ಟ ಬಗ್ಗೆಯೂ ಸಾಕ್ಷ್ಯವಿದೆ. 1982-83ರಲ್ಲಿ ಸುರಿದ ಮಳೆಗೆ ದೇವಸ್ಥಾನ ಪಕ್ಕದಲ್ಲಿ ಹರಿಯುವ ವಾರಾಹಿ ನದಿ ಉಕ್ಕಿ ನೆರೆ ಸ್ರಷ್ಟಿಯಾಗಿ ದೇವಸ್ಥಾನ ಅವನತಿಗೆ ಮುನ್ನುಡಿಯಾಯಿತು. ಅನಾವೃಷ್ಟಿಗೆ ದೇವಸ್ಥಾನ ಅರ್ಧ ಮುಳುಗಿ ಗೋಡೆ ಕುಸಿದು ಸುತ್ತಲಿನ ಪೌಳಿ ಕುಸಿಯಿತು. ಶ್ರೀ ಸಾಂಭ ಸದಾಶಿವ ದೇವಸ್ಥಾನಕ್ಕೆ ಸಂಬಂಧಿಸಿದ ಶ್ರೀ ವೆಂಕಟರಮಣ ದೇವಸ್ಥಾನದ ಅವನತಿ ಇಂದಿಗೂ ಮುಂದುವರಿದುಕೊಂಡು ಬಂದಿದೆ.
ಇತಿಹಾಸ ಪ್ರಸಿದ್ಧ ದೇವಸ್ಥಾನ…
ಜಿಲ್ಲೆಯಲ್ಲಿ ಅತ್ಯಂತ ಪ್ರಸಿದ್ಧ ಪಡೆದ ಮನೆತನ ಹಲ್ಸನಾಡು ಮನೆತನಕ್ಕೆ ದೇವಸ್ಥಾನ ಸೇರಿದ್ದರೂ, ದೇವಸ್ಥಾನಕ್ಕೆ ಸರಕಾರದಿಂದ ತಸ್ತೀಕ್ ಸಿಗುತ್ತಿದೆ. ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಸಾಂಬಸದಾಶಿವ ದೇವಸ್ಥಾನ ವರಾಹಿ ನದಿ ತಟದಲ್ಲಿದೆ. 2 ಕೋಟಿ ವೆಚ್ಚದಲ್ಲಿ ಶ್ರೀ ಸಾಂಬಸದಾಶಿವ ದೇವಸ್ಥಾನ ಪುನರುತ್ಥಾನ ಮಾಡಲಾಗಿದೆ. ಭಕ್ತರ ಸ್ನಾನಕ್ಕೆ, ದೇವಸ್ಥಾನಕ್ಕೆ ನೀರು ತರಲು ಹೊಳೆಗೆ ನಿರ್ಮಿಸಿದ ಮೆಟ್ಟಿಲು ಹಿಂದಿನವರ ಕೆಲಸ ಗಟ್ಟಿತಕ್ಕೆ ಸಾಕ್ಷಿ. ದೇವಸ್ಥಾನ ಹೆಬ್ಬಾಗಿಲು ಹಿಂದಿನ ವೈಭವ ತೋರಿಸುತ್ತೆ. ಗರ್ಭಗುಡಿ ಬಿಟ್ಟರೆ ಮತ್ತೆಲ್ಲವೂ ನಾಶವಾಗಿದೆ. ಸುತ್ತ ಪೌಳಿ ಕುಸಿದು, ನೆಲ ಸಮವಾಗಿದೆ. ಇದೇ ಗುಡಿಯೊಳಗೆ ಶ್ರೀ ವೆಂಕಟರಮಣ ಶ್ರೀದೇವಿ ಭೂ ದೇವಿ ಸಹಿತ ವಿರಾಜಮಾನನಾಗಿದ್ದು, ಸಾಲಿಗ್ರಾಮ ಶಿಲೆಯಲ್ಲಿ ನಯಾ ನಾಜೂಕಲ್ಲಿ ವಿಗ್ರಹ ಕೆತ್ತಲಾಗಿದೆ. ಪಂಚಲೋಹದ ಉತ್ಸವಮೂರ್ತಿ ಕೂಡಾ ಶ್ರೀದೇವಿ ಭೂದೇವಿ ಸಹಿತವಿದೆ. ಪ್ರಭಾವಳಿ ಕೂಡಾ ಪಂಚಲೋಹದಲ್ಲಿದೆ.

ಜೀರ್ಣೋದ್ಧಾರಕ್ಕೆ ಹಣಕಾಸು ಸಮಸ್ಯೆ…
ನಿತ್ಯ ಎರಡು ಬಾರಿ ಪೂಜೆ ವೆಂಕಟರಮಣನಿಗೆ ಸಲ್ಲುತ್ತೆ. ಅಕ್ಷಯ ತದಿಗೆಯಂದು ನಡೆಯುವ ರಥೋತ್ಸವ ನೋಡಿದರೆ ಜೀವನ ಅಕ್ಷಯವಾಗುತ್ತದೆ ಎಂಬ ನಂಬಿಕೆ ಇಲ್ಲಿನದ್ದು. ಮೂವತ್ತು ವರ್ಷಗಳಿಂದ ನಿಂತಿದ್ದ ರಥೋತ್ಸವ ಎರಡು ವರ್ಷದಿಂದೀಚೆಗೆ ಮತ್ತೆ ಆರಂಭವಾಗಿದೆ. ಒಂದು ಕಾಲದಲ್ಲಿ ಭಕ್ತರ ಪ್ರೀತಿಯ ದೇವರಾದ, ಅಕ್ಷರ ಜ್ಞಾನ ನೀಡಿ, ವಿದ್ಯಾ ದೇಗುಲವಾದ, ನೂರಾರು ಜೋಡಿಗಳಿಗೆ ಕಂಕಣ ಭಾಗ್ಯ ನೀಡಿದ ದೇವಸ್ಥಾನ ಜೀರ್ಣೋದ್ಧಾರಕ್ಕೆ ಸಮಿತಿ ೫ ಕೋಟಿ ವೆಚ್ಚದಲ್ಲಿ ಪುನರುತ್ಥಾನ ಮಾಡುವ ಸಿದ್ದತೆ ಮಾಡಿಕೊಂಡಿದ್ದು, ಹಣಕಾಸಿನ ಸಮಸ್ಯೆ ಕಾಡುತ್ತಿದೆ.
ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕ್ಷೇತ್ರದಲ್ಲಿ ಇಂತಹ ಅಜೀರ್ಣವಸ್ಥೆಯ ದೇವಸ್ಥಾನ ಇರೋದು ಬೇಸರದ ಸಂಗತಿ. ದೇವಸ್ಥಾನಗಳಲ್ಲದೆ, ಗರಡಿಗಳಿಗೂ ಲಕ್ಷ ಲಕ್ಷದಲ್ಲಿ ಅನುದಾನ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮನಸ್ಸು ಮಾಡಿದರೆ ದೇವಸ್ಥಾನ ಪುನರುತ್ಥಾನ ಕಷ್ಟದ ಕೆಲಸವಲ್ಲ ಎನ್ನೋದು ಭಕ್ತರ ಆಶಯ.
(ವರದಿ- ಯೋಗೀಶ್ ಕುಂಭಾಸಿ)
Comments are closed.