ರಾಷ್ಟ್ರೀಯ

ದೆಹಲಿಯ ಜಾಮಿಯಾ ವಿವಿಯಲ್ಲಿ ಸಿಎಎ ವಿರೋಧಿ ಹೋರಾಟಗಾರರ ಮೇಲೆ ಮತ್ತೆ ಗುಂಡಿನ ದಾಳಿ !

Pinterest LinkedIn Tumblr

ನವದೆಹಲಿ; ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಆವರಣದ ಹೊರಗೆ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಿನ್ನೆ ತಡ ರಾತ್ರಿ ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಕಳೆದ ನಾಲ್ಕು ದಿನದಲ್ಲಿ ಸಿಎಎ ವಿರೋಧಿ ಹೋರಾಟಗಾರರ ಮೇಲೆ ನಡೆಯುತ್ತಿರುವ ಮೂರನೇ ದಾಳಿ ಇದಾಗಿದೆ. ಈ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

ಈ ಶೂಟ್ಔಟ್ ಕುರಿತು ಜಾಮಿಯಾ ಸಮನ್ವಯ ಸಮಿತಿ (ಜೆಸಿಸಿ) ಹೊರಡಿಸಿದ ಹೇಳಿಕೆಯಲ್ಲಿ, “ಪೌರತ್ವ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಕಳೆದ ಹಲವು ದಿನಗಳಿಂದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡ ಗುಂಪು ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ನಿನ್ನೆ ರಾತ್ರಿ ಕೆಂಪು ಬಣ್ಣದ ಮೋಟಾರ್ ಸೈಕಲ್​ನಲ್ಲಿ ಆಗಮಿಸಿದ ಇಬ್ಬರು ವ್ಯಕ್ತಿಗಳು ಪ್ರತಿಭಟನಾನಿರತರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದುಷ್ಕರ್ಮಿಗಳಲ್ಲೊಬ್ಬ ಕೆಂಪು ಬಣ್ಣದ ಜಾಕೆಟ್ ಧರಿಸಿದ್ದ” ಎಂದು ತಿಳಿಸಿದ್ದಾರೆ.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು, “ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ವಿವಿಧ ಕಲಂ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು” ಎಂದು ತಿಳಿಸಿದ್ದಾರೆ.

ಕಳೆದ ಗುರುವಾರ ಜಾಮಿಯಾದಿಂದ ರಾಜ್​ಘಾಟ್​ ಕಡೆಗೆ ಮೆರವಣಿಗೆ ನಡೆಸಲು ಸಿಎಎ ವಿರೋಧಿ ಪ್ರತಿಭಟನಾಕಾರರು ಸಿದ್ದತೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಕ ಬಾಲಕನೊಬ್ಬ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದ. ಈ ದಾಳಿಯಲ್ಲಿ ಓರ್ವ ವಿದ್ಯಾರ್ಥಿಗೆ ಗಂಭೀರ ಗಾಯಕ್ಕೊಳಗಾಗಿದ್ದ.

ಇದಾಗಿ ಎರಡು ದಿನಕ್ಕೆ ಕಳೆದ ಶನಿವಾರ 25 ವರ್ಷದ ಯುವಕ ದೆಹಲಿಯ ಶಾಹಿನ್ ಬಾಗ್​ನಲ್ಲಿ ಸಿಎಎ ಪ್ರತಿಭಟನಾಕಾರರ ಎದುರು ಗಾಳಿಯಲ್ಲಿ ಎರಡು ಸುತ್ತಿನ ಗುಂಡು ಹಾರಿಸಿ ಆತಂಕ ಸೃಷ್ಟಿಸಿದ್ದ. ಇದೀಗ ದೆಹಲಿಯ ಜಾಮಿಯಾ ವಿದ್ಯಾರ್ಥಿಗಳ ಮೇಲೆ ಮತ್ತೆ ಗುಂಡಿನ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

Comments are closed.