ಕರಾವಳಿ

ಕುಡಿಯುವ ನೀರಿನ ಬಾವಿಯಲ್ಲಿ ಪೆಟ್ರೋಲ್ ಪತ್ತೆ

Pinterest LinkedIn Tumblr


ಕಾರವಾರ: ಬಾವಿಯಲ್ಲಿ ನೀರು ಸಿಗುವುದನ್ನ ನೀವು ನೋಡಿರ್ತೀರಾ. ಇನ್ನೂ ಕೆಲವೊಂದು ಬಾವಿಗಳಲ್ಲಿ ಉಪ್ಪು ನೀರು ಸಿಗುವುದನ್ನು ನೀವು ನೋಡಿರಬಹುದು. ಆದರೆ, ಕುಡಿಯುವ ನೀರಿನ ಬಾವಿಯಲ್ಲಿ ಪೆಟ್ರೋಲ್ ಪತ್ತೆಯಾಗಿದೆ.

ಜಿಲ್ಲೆಯ ಜಿಲ್ಲೆಯ ಅಂಕೋಲ ಪಟ್ಟಣದ ನಿವಾಸಿ ನಾಗವೇಣಿ ಆಚಾರಿ ಎಂಬುವವರ ಮನೆಯ ಬಾವಿಯಲ್ಲೇ ಪೆಟ್ರೋಲ್ ಪತ್ತೆಯಾಗಿದ್ದು ಅಂಕೋಲಾದಲ್ಲಿ ಇದೀಗ ಬಿಸಿ, ಬಿಸಿ ಚರ್ಚೆಗೆ ಗ್ರಾಸವಾಗಿದೆ.

ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ನಾಗವೇಣಿಯವರ ಮನೆಯಿದ್ದು ಬಾವಿಯ ಸಮೀಪ ಪೂಜೆ ಮಾಡುತ್ತಿದ್ದ ವೇಳೆ ಆರತಿ ತಟ್ಟೆಯಿಂದ ಕರ್ಪೂರಿ ಬಾವಿಗೆ ಬಿದ್ದಿತ್ತು. ಬಳಿಕ ಬಾವಿಯ ನೀರಿಗೆ ಬೆಂಕಿ ತಗುಲಿದ್ದು ಮನೆಯವರು ಗಾಬರಿಗೊಳ್ಳುವಂತಾಗಿತ್ತು. ಬಾವಿಯನ್ನ ಪರಿಶೀಲಿಸಿದಾಗ ನೀರಿನ ಮೇಲ್ಭಾಗದಲ್ಲಿ ತೈಲದಂತೆ ಪದರವೊಂದು ತೇಲುತ್ತಿರುವುದು ಕಂಡುಬಂದಿತ್ತು.

ಬಳಿಕ ಬಾವಿಯಿಂದ ಕೊಡದಲ್ಲಿ ನೀರನ್ನ ಮೇಲಕ್ಕೆತ್ತಿದ್ದು ಈ ವೇಳೆ ಬಾವಿಯಿಂದ ತೆಗೆದ ನೀರು ಪೆಟ್ರೋಲ್ ವಾಸನೆಯಿಂದ ಕೂಡಿದ್ದು ಪೆಟ್ರೋಲ್ ಸಹ ನೀರಿನೊಂದಿಗೆ ಮಿಶ್ರಣವಾಗಿತ್ತು. ಇದರಿಂದ ಆತಂಕಗೊಂಡ ಮನೆಯವರು ಮತ್ತೊಮ್ಮೆ ನೀರನ್ನ ತೆಗೆದು ಪರಿಶೀಲಿಸದ ವೇಳೆ ನೀರಿನಲ್ಲಿ ಪೆಟ್ರೋಲ್ ಬರುತ್ತಿರುವುದು ಕಂಡುಬಂದಿದ್ದು ಆತಂಕಗೊಂಡು ಅಕ್ಕಪಕ್ಕದ ಮನೆಯವರಿಗೂ ಈ ವಿಷಯವನ್ನು ತಿಳಿಸಿದ್ದಾರೆ.

ಇನ್ನು ಬಾವಿಯಲ್ಲಿ ಪತ್ತೆಯಾಗಿರುವ ಪೆಟ್ರೋಲ್ ಅಸಲಿಗೆ ಸಮೀಪದ ಪೆಟ್ರೋಲ್ ಬಂಕ್‌ನ ಟ್ಯಾಂಕರ್‌ನಿಂದ ಸೋರಿಕೆಯಾಗಿದ್ದಾಗಿದ್ದು, ಕಳೆದೊಂದು ವಾರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬಾವಿ ನೀರಿನಲ್ಲಿ ಪೆಟ್ರೋಲ್ ವಾಸನೆ ಬರುತ್ತಿದ್ದು ಮನೆಯವರು ಅಷ್ಟೊಂದು ಗಮನ ಹರಿಸಿರಲಿಲ್ಲ.

ಆದರೆ, ಇಂದು ಬಾವಿಯಿಂದ ತೆಗೆದ ನೀರಿನಲ್ಲಿ ಹೇರಳ ಪ್ರಮಾಣದಲ್ಲಿ ಪೆಟ್ರೋಲ್ ಪತ್ತೆಯಾಗಿದ್ದು ಜನರು ಬಾವಿಯನ್ನ ವೀಕ್ಷಿಸಲು ಮುಗಿಬಿದ್ದಿದ್ದರು. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೂ ಮನೆಯವರು ದೂರು ನೀಡಿದ್ದು ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಈ ವೇಳೆ ಪೆಟ್ರೋಲ್ ಬಂಕ್ ಟ್ಯಾಂಕರ್‌ನಿಂದ ಸೋರಿಕೆಯಾದ ಪೆಟ್ರೋಲ್ ನೆಲದೊಳಗಿನಿಂದ ಬಾವಿಯ ನೀರಿಗೆ ಮಿಶ್ರಣವಾಗಿದ್ದಾಗಿ ತಿಳಿದು ಬಂದಿದೆ. ತಕ್ಷಣ ಅಧಿಕಾರಿಗಳು ಬಂಕ್ ಮಾಲೀಕರಿಗೆ ಸೂಚನೆ ನೀಡಿದ್ದು ಪೆಟ್ರೋಲ್ ಸೋರಿಕೆಯಾಗುತ್ತಿರುವುದರಿಂದ ಬಾವಿಯ ನೀರು ಕಲುಷಿತವಾಗಿರುವುದಕ್ಕೆ ನೋಟೀಸ್ ನೀಡಿದ್ದಾರೆ.

ಇನ್ನು ಪೆಟ್ರೋಲ್ ಬಂಕ್ ಮಾಲೀಕರು ಪೆಟ್ರೋಲ್ ಸೋರಿಕೆಯಿಂದಾಗಿ ಕಲುಷಿತಗೊಂಡಿರುವ ಬಾವಿಯ ನೀರನ್ನ ಖಾಲಿ ಮಾಡಿಸಿಕೊಡುವ ಭರವಸೆ ನೀಡಿದ್ದು ಅಲ್ಲಿನ ನಿವಾಸಿಗರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡುವುದಾಗಿ ತಿಳಿಸಿಕೊಟ್ಟಿದ್ದಾರೆ. ಇನ್ನು ಬಾವಿಯಲ್ಲಿ ಸಿಕ್ಕ ಪೆಟ್ರೋಲ್ ನೀರನ್ನ ಸೋಸಿಕೊಂಡು ಹಲವರು ಕೊಂಡೊಯ್ದಿದ್ದು, ಕೆಲವರು ಬಾವಿಯತ್ತ ದೌಡಾಯಿಸುತ್ತಿದ್ದಾರೆ.

ನೀರು ಬರುವ ಬಾವಿಯಲ್ಲಿ ಪೆಟ್ರೋಲ್ ಪತ್ತೆಯಾಗಿದ್ದೇ ಅದೃಷ್ಟ ಖುಲಾಯಿಸಿತು ಎಂದು ಲೆಕ್ಕಾಚಾರ ಹಾಕುತ್ತಿದ್ದವರಿಗೆ ಕೊನೆಗೆ ನಿರಾಸೆಯಾಗುವಂತಾಗಿದ್ದು ಪೆಟ್ರೋಲ್ ಬಾವಿ ವಿಚಾರ ಅಂಕೋಲಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದಂತೂ ಸತ್ಯ.

Comments are closed.