ರಾಷ್ಟ್ರೀಯ

ಸಾಲ ಬಾಕಿ ಇದ್ದಿದ್ದು 50 ಪೈಸೆ: ಎಸ್‌ಬಿಐನಿಂದ ನೋಟಿಸ್‌ ಜಾರಿ!

Pinterest LinkedIn Tumblr


ಜೈಪುರ: ಅತ್ತ ವಿಜಯ ಮಲ್ಯ, ನೀರವ್‌ ಮೋದಿ, ಮೆಹುಲ್‌ ಚೋಕ್ಸಿಯಂಥ ನೂರಾರು ಉದ್ಯಮಿಗಳು ಸಾವಿರಾರು ಕೋಟಿ ರೂ. ಸಾಲ ಬಾಕಿ ಉಳಿಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದರೆ, ಇತ್ತ 50 ಪೈಸೆ ಬಾಕಿ ಉಳಿಸಿಕೊಂಡಿದ್ದಾನೆ ಎಂಬ ಕಾರಣಕ್ಕೆ ಗ್ರಾಹಕನೊಬ್ಬನಿಗೆ ಎಸ್‌ಬಿಐ ನೋಟಿಸ್‌ ಜಾರಿ ಮಾಡಿದೆ!

ಅಚ್ಚರಿಯಾದರೂ ಇದು ಸತ್ಯ. “50 ಪೈಸೆ ಸಾಲ ಪಾವತಿಸಲು ಬಾಕಿ ಇದ್ದು, ಕೂಡಲೇ ಅದನ್ನು ಪಾವತಿಸಿ. ಇಲ್ಲದಿದ್ದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಬರೆದಿರುವ ನೋಟಿಸ್‌ ಅನ್ನು ರಾತ್ರೋರಾತ್ರಿ ಬ್ಯಾಂಕ್‌ ಅಧಿಕಾರಿಗಳು ಬಂದು ರಾಜಸ್ಥಾನದ ಜಿತೇಂದ್ರ ಸಿಂಗ್‌ ಅವರ ಮನೆಬಾಗಿಲಿಗೆ ಅಂಟಿಸಿ ಹೋಗಿದ್ದಾರೆ. ಇನ್ನೂ ವಿಶೇಷವೆಂದರೆ, 50 ಪೈಸೆಯನ್ನು ಪಾವತಿಸಲು ಬ್ಯಾಂಕ್‌ಗೆ ಹೋದರೆ, ಅದನ್ನು ಸ್ವೀಕರಿಸಲೂ ಬ್ಯಾಂಕ್‌ ಹಿಂದೇಟು ಹಾಕಿದೆ ಎನ್ನುವುದು ಸಿಂಗ್‌ ಆರೋಪ. “ನನ್ನ ಬೆನ್ನುಮೂಳೆಗೆ ಗಾಯವಾಗಿರುವ ಕಾರಣ, ನನ್ನ ಅಪ್ಪ ಬ್ಯಾಂಕ್‌ಗೆ ಹೋಗಿ ಬಾಕಿ ಮೊತ್ತ ಪಾವತಿಸಿ, ಎನ್‌ಒಸಿ(ನಿರಾಕ್ಷೇಪಣಾ ಪತ್ರ) ಪಡೆಯಲು ಮುಂದಾಗಿದ್ದರು. ಆದರೆ, ಬಾಕಿ ಮೊತ್ತವನ್ನು ಪಾವತಿಸಲು ಬ್ಯಾಂಕ್‌ನವರೇ ಸಿದ್ಧರಿಲ್ಲ. ಕೊಟ್ಟ ಹಣ ಸ್ವೀಕರಿಸದೇ, ನೋಟಿಸ್‌ ಜಾರಿ ಮಾಡಿರುವ ಬ್ಯಾಂಕ್‌ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ’ ಎಂದಿದ್ದಾರೆ ಸಿಂಗ್‌.

Comments are closed.