ಮನೋರಂಜನೆ

ಮೋತಿಲಾಲ್ ನೆಹರು ವಿಡಿಯೋ ಪೋಸ್ಟ್- ಬಾಲಿವುಡ್ ನಟಿ ಬಿಗ್‍ಬಾಸ್ ಮಾಜಿ ಸ್ಪರ್ಧಿ ಪಾಯಲ್ ರೊಹ್ಟಗಿ ಬಂಧನ

Pinterest LinkedIn Tumblr


ಮುಂಬೈ: ಬಾಲಿವುಡ್ ನಟಿ ಬಿಗ್‍ಬಾಸ್ ಮಾಜಿ ಸ್ಪರ್ಧಿ ಪಾಯಲ್ ರೊಹ್ಟಗಿ ಅವರು ಮತ್ತೆ ಸುದ್ದಿಯಾಗಿದ್ದು, ಮಾಜಿ ಪ್ರಧಾನಿ ಜವಾಹರ್‍ಲಾಲ್ ನೆಹರು ತಂದೆ ಮೋತಿಲಾಲ್ ನೆಹರು ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಪೊಲೀಸರು ಬಂಧಿಸಿದ್ದಾರೆ ಎಂದು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮೋತಿಲಾಲ್ ನೆಹರು ಅವರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನನ್ನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಆದರೆ ನಾನು ಈ ಮಾಹಿತಿಯನ್ನು ಗೂಗಲ್‍ನಿಂದ ಪಡೆದು ವಿಡಿಯೋ ಮಾಡಿದ್ದೇನೆ. ವಾಕ್ ಸ್ವಾತಂತ್ರ್ಯ ಎಂಬುದು ಇಲ್ಲಿ ಹಾಸ್ಯಾಸ್ಪದವಾಗಿದೆ ಎಂದು ಬರೆದಿದ್ದಾರೆ. ಈ ಟ್ವೀಟ್‍ಗೆ ಪ್ರಧಾನಿ ಕಾರ್ಯಾಲಯ ಹಾಗೂ ಗೃಹ ಸಚಿವಾಲಯದ ಟ್ವಿಟ್ಟರ್ ಖಾತೆಗಳನ್ನು ಇದಕ್ಕೆ ಟ್ಯಾಗ್ ಮಾಡಿದ್ದಾರೆ.

ಅಲ್ಲದೆ ಈ ಕುರಿತು ಎಸ್‍ಪಿ ಮಮತಾ ಗುಪ್ತಾ ಅವರು ಸಹ ಸ್ಪಷ್ಟಪಡಿಸಿದ್ದು, ಪ್ರಕರಣ ದಾಖಲಾದ ಹಿನ್ನೆಲೆ ಪಾಯಲ್ ರೊಹ್ಟಗಿ ಅವರನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಜವಾಹರಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ಕುರಿತು ಆಕ್ಷೇಪಾರ್ಹ ವಿಡಿಯೋಗಳನ್ನು ಮಾಡಿದ್ದಕ್ಕಾಗಿ ಡಿ.5ರಂದು ರಾಜಸ್ಥಾನ ಪೊಲೀಸರು ನಟಿ ಪಾಯಲ್ ರೊಹ್ಟಗಿ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಜವಾಹರ್‍ಲಾಲ್ ನೆಹರು ಕುರಿತು ಪಾಯಲ್ ಆಕ್ಷೇಪಾರ್ಹ ವಿಡಿಯೋ ಮಾಡಿದ್ದಾರೆ ಎಂದು ಆರೋಪಿಸಿ ರಾಜಸ್ಥಾನದ ಯುತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚರ್ಮೆಶ್ ಶರ್ಮಾ ಅವರು ಈ ಕುರಿತು ದೂರು ದಾಖಲಿಸಿದ್ದರು.

ತನಿಖೆ ನಡೆಸಲು ನಮ್ಮ ತಂಡ ಮುಂಬೈನಲ್ಲಿರುವ ಅವರ ಮನೆಗೆ ತೆರಳಿತು. ನಂತರ ರೊಹ್ಟಗಿ ಅವರನ್ನು ಗುಜರಾತ್‍ನ ಅವರ ಪೋಷಕರ ಮನೆಯಲ್ಲಿ ಭೇಟಿ ಮಾಡಿದೆವು. ನೋಟಿಸ್ ಜಾರಿ ಮಾಡಿ, ಇದಕ್ಕೆ ಉತ್ತರಿಸುವಂತೆ ತಿಳಿಸಿದ್ದೆವು ಎಂದು ಸದರ್ ಪೊಲೀಸ್ ಠಾಣೆಯ ತನಿಖಾಧಿಕಾರಿ ಲೋಕೆಂದ್ರ ಪಾಲಿವಾಲ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದರು.

ಶರ್ಮಾ ಅವರು ಅಕ್ಟೋಬರ್‍ನಲ್ಲಿ ಬುಂಡಿ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಂತೆ ಪೊಲೀಸರು ಐಟಿ ಕಾಯ್ದೆಯ ಸೆಕ್ಷನ್ 66 ಹಾಗೂ 67 ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ರೊಹ್ಟಗಿ ಅವರು ಈ ಕುರಿತು ಕ್ಷಮೆಯಾಚಿಸಿ ಪೋಸ್ಟ್ ಮಾಡಿದ್ದರು.

ಸದಾ ಕಾಂಗ್ರೆಸ್ ವಿರುದ್ಧ ಪೋಸ್ಟ್ ಮಾಡುವ ಪಾಯಲ್, ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಾರೆ. ಪೊಲೀಸರು ಪಾಯಲ್ ಅವರಿಗೆ ಐದು ಬಾರಿ ನೋಟಿಸ್ ನೀಡಿದ್ದು, ಉತ್ತರಿಸದ್ದಕ್ಕೆ ಬಂಧಿಸಿದ್ದಾರೆ ಎನ್ನಲಾಗಿದೆ.

Comments are closed.