
ಹೊಸದಿಲ್ಲಿ: ಹೈದರಾಬಾದ್ ನ ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್ ಕೌಂಟರ್ ಮಾಡಿದ ಪ್ರಕರಣ ಇದೀಗ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿದೆ.
ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಶುಕ್ರವಾರ ಘಟನಾ ಸ್ಥಳಕ್ಕೆ ಕರೆದೊಯ್ದು ತನಿಖೆ ನಡೆಸುವ ವೇಳೆ ಎನ್ ಕೌಂಟರ್ ನಡೆಸಲಾಗಿತ್ತು. ಆರೋಪಿಗಳು ಪೊಲೀಸರ ಶಸ್ತ್ರಾಸ್ತ್ರ ಕಸಿದ ಕಾರಣ ಎನ್ ಕೌಂಟರ್ ಮಾಡಲಾಗಿತ್ತು ಎಂದು ಆಯುಕ್ತ ವಿಶ್ವನಾಥ್ ಸಜ್ಜನವರ್ ವಿವರಣೆ ನೀಡಿದ್ದರು.
ಅದರೆ ಎನ್ ಕೌಂಟರ್ ಬಗ್ಗೆ ಅನುಮಾನ ವ್ಯಕ್ತಪಡಿಸಿ ಎರಡು ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂ ಕೊರ್ಟ್ ನಲ್ಲಿ ಸಲ್ಲಿಸಲಾಗಿದೆ.
ವಕೀಲರಾದ ಜಿ ಎಸ್ ಮಣಿ ಮತ್ತು ಪ್ರದೀಪ್ ಕುಮಾರ್ ಅವರು ಅರ್ಜಿ ಸಲ್ಲಿಸಿದ್ದು, ಎನ್ ಕೌಂಟರ್ ಮಾಡುವ ವೇಳೆ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಇಲ್ಲಿ ಉಲ್ಲಂಘಿಸಲಾಗಿದೆ. ಹೀಗಾಗಿ ಎನ್ ಕೌಂಟರ್ ನಲ್ಲಿ ಭಾಗಿಯಾದ ಪೊಲೀಸರ ವಿರುದ್ಧ ತನಿಖೆ ನಡೆಯಬೇಕು ಎಂದು ಕೋರಿದ್ದಾರೆ.
ಜೀವಿಸುವ ಹಕ್ಕು ಮತ್ತು ನ್ಯಾಯೋಚಿತ ವಿಚಾರಣೆ ಹಕ್ಕನ್ನು ನಿಡುವ ಸಂವಿಧಾನದ 21ನೇ ಪರಿಚ್ಛೇದವನ್ನು ಉಲ್ಲಂಘಿಸಿ ಇಲ್ಲಿ ಎನ್ ಕೌಂಟರ್ ನಡೆಸಲಾಗಿದೆ ಎಂದು ಆರೋಪಿಸಿ ಮತ್ತೋರ್ವ ವಕೀಲ ಎಂ.ಎನ್. ಶರ್ಮಾ ಅವರು ಸುಪ್ರೀಂ ಮೆಟ್ಟಿಲೇರಿದ್ದಾರೆ.
ಇದರೊಂದಿಗೆ ವಿಚಾರಣೆ ನಡೆಸದೆ ಆರೋಪಿಗಳನ್ನು ದೋಷಿ ಎನ್ನಲಾಗಿದೆ. ಇದು ಪೊಲೀಸ್ ವಶದಲ್ಲಿ ನಡೆದ ಕೊಲೆ. ಇದರ ತನಿಖೆ ನಡೆಸಬೇಕೆಂದು ಆರೋಪಿಸಿದ್ದಾರೆ.
Comments are closed.