ಕರ್ನಾಟಕ

ಈರುಳ್ಳಿ ಫಸಲು ಉಳಿಸಿಕೊಳ್ಳಲು ಹಗಲಿರುಳು ಹೊಲ ಕಾಯುತ್ತಿರುವ ರೈತರು!

Pinterest LinkedIn Tumblr


ಗದಗ: ಅತಿವೃಷ್ಟಿ, ಅನಾವೃಷ್ಟಿ ಕಾರಣಕ್ಕೆ ಇತ್ತೀಚೆಗೆ ಈರುಳ್ಳಿ ಬೆಳೆಯ ಇಳುವರಿ ಕುಂಠಿತವಾಗಿದ್ದರಿಂದ
ಉಳ್ಳಾಗಡ್ಡಿಗೆ ಬಂಗಾರದ ಬೆಲೆ ಬಂದಿದೆ. ಇಷ್ಟು ದಿನ ಬೆಳೆ ಇದ್ದರೆ ಬೆಲೆ ಇಲ್ಲ ಎಂದು ಕೊರಗುತ್ತಿದ್ದ ರೈತರಿಗೆ ಇದೀಗ ಬಂಪರ್‌ ಲಾಭ ದೊರೆಯುತ್ತಿದೆ. ಇದರ ಬೆನ್ನಲ್ಲೇ ಈರುಳ್ಳಿ ಬೆಳೆಗೆ ಕಳ್ಳಕಾಕರ ಕಾಟ ಶುರುವಾಗಿದ್ದು, ಫಸಲು ಉಳಿಸಿಕೊಳ್ಳಲು ರೈತರು ಹಗಲಿರುಳು ಹೊಲ ಕಾಯುವ ಅನಿವಾರ್ಯತೆ ಎದುರಾಗಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆಗಳಲ್ಲಿ ಗದಗ ಪ್ರಮುಖವಾಗಿದೆ. ಆದರೆ, ಸತತ
ಬರಗಾಲ ಹಾಗೂ ಪ್ರವಾಹ ಪರಿಸ್ಥಿತಿಯಿಂದಾಗಿ ಭಾಗಶ: ಈರುಳ್ಳಿ ಹಾನಿ ಆಗಿದೆ. ಈ ನಡುವೆಯೂ ಅಲ್ಪ ಸ್ವಲ್ಪ ಬೆಳೆ ರೈತರ ಕೈ ಸೇರಿದೆ. ಅದರಂತೆ ಉತ್ತರ ಭಾರತ ಸೇರಿದಂತೆ ರಾಜ್ಯದ ಹಲವೆಡೆ ಅತಿವೃಷ್ಟಿಯಿಂದ ಈರುಳ್ಳಿ ಬೆಳೆ ಬಂದಿಲ್ಲ. ಪರಿಣಾಮ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಬೆಳೆ ಕಟಾವಿನ ಆರಂಭದ ದಿನಗಳಲ್ಲಿ ಕ್ವಿಂಟಲ್‌ಗೆ ಸರಾಸರಿ 300 ರೂ.ಬೆಲೆಯಲ್ಲಿ
ಮಾರಾಟವಾಗಿದ್ದ ಬೆಳೆಗೆ ಇದೀಗ ಸಾವಿರಾರು ರೂ. ಬೆಲೆ ಕಟ್ಟಲಾಗುತ್ತಿದೆ. ವಾರದ ಹಿಂದೆ ಪ್ರತಿ ಕ್ವಿಂಟಲ್‌ ಗರಿಷ್ಠ 4ರಿಂದ 8 ಸಾವಿರ ರೂ.ದರದಲ್ಲಿ ಮಾರಾಟವಾಗಿದೆ. ಈರುಳ್ಳಿ ಬೆಳೆಗೆ ಕಳ್ಳರ ಕಾಟ:ಹಸಿ ಗಡ್ಡೆಗೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಎಂಬ ಕಾರಣಕ್ಕೆ ಬೆಳೆಯನ್ನು ಭೂಮಿಯಲ್ಲೇ ಒಣಗಲು ಬಿಟ್ಟಿದ್ದ ರೈತರು ಇದೀಗ ಕಿತ್ತು, ಮಾರುಕಟ್ಟೆಗೆ ಸಾಗಿಸಲು ಮುಂದಾಗಿ ದ್ದಾರೆ. ಆದರೆ, ಇತ್ತೀಚೆಗೆ ರೋಣ ತಾಲೂಕಿನ ನರೇಗಲ್‌ ಹೋಬಳಿ ವ್ಯಾಪ್ತಿ ಯಲ್ಲಿ ರೈತರೊಬ್ಬರ ಜಮೀನಿನಲ್ಲಿ ಗುಡ್ಡೆ ಹಾಕಿದ್ದ ಹತ್ತಾರು ಕ್ವಿಂಟಲ್‌ ಈರುಳ್ಳಿಯನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂಬ ಸುದ್ದಿ ಜಿಲ್ಲೆಯಾದ್ಯಂತ ಈರುಳ್ಳಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ.

ರಾತ್ರಿಯಲ್ಲಿ ರೈತರ ಗಸ್ತು!: ಜಿಲ್ಲೆಯಲ್ಲಿ ಈರುಳ್ಳಿ ಬೆಳೆ ಮೇಲೆ ಕಳ್ಳಕಾಕರ ಕಣ್ಣು ಬಿದ್ದಿದೆ ಎಂಬ ಸುದ್ದಿಯಿಂದಾಗಿ ಜಿಲ್ಲೆಯ ಈರುಳ್ಳಿ ಬೆಳೆಗಾರರಲ್ಲಿ ಆತಂಕ ಹೆಚ್ಚಿದ್ದು, ರಾತ್ರಿ ಗಸ್ತು ತಿರುಗುತ್ತಿದ್ದಾರೆ. ಜಿಲ್ಲೆಯ ವಿವಿಧೆಡೆ ಈರುಳ್ಳಿ, ಶೇಂಗಾ ಕಳುವಾಗಿವೆ ಎಂದು ಹೇಳಲಾಗುತ್ತಿದೆ. ಆದರೆ, ನರೇಗಲ್‌ ಠಾಣೆಯ ಒಂದು ಪ್ರಕರಣ ಹೊರತುಪಡಿಸಿ, ಜಿಲ್ಲೆಯ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಕೆಲವರು ತಮ್ಮ ಬೆಳೆ ಕಳುವಾಗಿದ್ದರೂ ಪೊಲೀಸ್‌ ಠಾಣೆ ಮೆಟ್ಟಿಲೇರಲು ಹಿಂದೇಟು ಹಾಕುತ್ತಿ ದ್ದಾರೆ.

ಎಲ್ಲೆಲ್ಲಿ ಆತಂಕ?: ಜಿಲ್ಲೆಯಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆಯುವ ರೋಣ ತಾಲೂಕಿನ ಅಬ್ಬಿಗೇರಿ, ಹಾಲಕೆರೆ,
ರೋಣ, ಮೆಣಸಗಿ, ಕುರಡಗಿ, ಯರೇಬೇಲೇರಿ, ನಿಡಗುಂದಿ, ಕಳಕಾಪುರ, ಸೂಡಿ, ಜಕ್ಕಲಿ, ಮಾರನಬಸರಿ
ಹಾಗೂ ಗದಗ ತಾಲೂಕಿನ ಅಡವಿ ಸೋಮಾಪುರ, ಲಕ್ಕುಂಡಿ, ಹಾತಲಗೇರಿ, ಬಳಗಾನೂರ,
ಕಿರಟಗೇರಿ ಗ್ರಾಮಗಳ ಈರುಳ್ಳಿ ಬೆಳೆಗಾರರಲ್ಲಿ ಆತಂಕ ಹೆಚ್ಚಿಸಿದೆ. ಆ ಪೈಕಿ ವಿವಿಧ ಗ್ರಾಮಗಳಲ್ಲಿ ಕಳ್ಳರ ಯತ್ನ ವಿಫಲಗೊಳಿಸಲು ಹಾಗೂ ಅವರನ್ನು ಹಿಡಿದು ಪೊಲೀಸರಿ ಗೊಪ್ಪಿಸಲು ಯುವಕರು, ರೈತರು
ತಂಡೋಪ ತಂಡವಾಗಿ ಗಸ್ತು ತಿರುಗುತ್ತಿದ್ದಾರೆ. ಒಂದು ಕೈಯಲ್ಲಿ ಕೋಲು ಮತ್ತೂಂದು ಕೈಯಲ್ಲಿ ಟಾರ್ಚ್‌, ಮೊಬೈಲ್‌ ಲೈಟಿನ ಬೆಳಕಿನಲ್ಲಿ ಸೀಮೆ ಸುತ್ತುತ್ತಿದ್ದಾರೆ. ಅಲ್ಲಲ್ಲಿ ಕೂಗು ಹಾಕುತ್ತ, ಇತರರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ನೂರಾರು ಚೀಲ ಈರುಳ್ಳಿ ಕಿತ್ತು ಜಮೀನಿನಲ್ಲಿ ದಾಸ್ತಾನು ಮಾಡಿರುವ ರೈತರು ಅದನ್ನು ಮಾರುಕಟ್ಟೆಗೆ ಸಾಗಿಸು ವವರೆಗೆ ಕಾಯಲು ಆಳುಗಳನ್ನು ನೇಮಿಸಿಕೊಂಡಿದ್ದಾರೆ.

ನನ್ನ 9 ಎಕರೆ ಜಮೀನಿನಲ್ಲಿ ಈ ಬಾರಿ ಸುಮಾರು 300ಕ್ಕೂ ಹೆಚ್ಚು ಚೀಲ ಈರುಳ್ಳಿ ಬಂದಿದೆ. ಭಾಗಶ: ಈರುಳ್ಳಿ ಕಿತ್ತಿದ್ದು, ಇನ್ನುಉಳಿದುದ್ದನ್ನೂ ಕಿತ್ತ ಬಳಿಕ ಒಟ್ಟಿಗೆ ಮಾರುಕಟ್ಟೆಗೆ ಸಾಗಿಸಲು ಉದ್ದೇಶಿಸಿದ್ದೇನೆ. ಈ ನಡುವೆ ಕಳ್ಳರ ಹಾವಳಿ ಇದೆ ಎಂಬ ಸುದ್ದಿ ಬಂದಿದ್ದರಿಂದ ರಾತ್ರಿ ಕಾವಲು ಕಾಯಲು 250 ರೂ.ಕೊಟ್ಟು ನಾಲ್ಕು ಮಂದಿ ನೇಮಿಸಿದ್ದೇನೆ.
● ಸಿದ್ಧಪ್ಪ ರಾಗಿ, ನರೇಗಲ್‌ ರೈತ

ರಾತ್ರೋರಾತ್ರಿ ಜಮೀನುಗಳಿಗೆ ನುಗ್ಗುವ ಕದೀಮರು ಈರುಳ್ಳಿ ಕದ್ದೊಯ್ಯುತ್ತಿದ್ದಾರಂತೆ. ಹೀಗಾಗಿ, ನಾವೇ
ಹೊಲಗಳಲ್ಲಿ ಸರದಿಯಂತೆ ರಾತ್ರಿ ವೇಳೆ ಕಾವಲು ಕಾಯ್ತಿದ್ದೇವೆ. ಇದು ನಿಜಾನೋ, ಸೊಳ್ಳೋ ಪೊಲೀಸರೇ ಪತ್ತೆ ಮಾಡಿ, ರೈತರಿಗೆ ನೆಮ್ಮದಿ ಕಲ್ಪಿಸಬೇಕು.
● ಪ್ರಕಾಶ್‌, ಲಕ್ಕುಂಡಿ, ಈರುಳ್ಳಿ ಬೆಳೆಗಾರ

Comments are closed.