ಮುಂಬೈ

ಮತ್ತೊಬ್ಬನೊಂದಿಗೆ ಮಾತನಾಡಿದ್ದಕ್ಕೆ ಪ್ರಿಯಕರನ ಕಪಾಳಮೋಕ್ಷಕ್ಕೆ ಮಹಿಳೆ ಸಾವು!

Pinterest LinkedIn Tumblr


ಮುಂಬೈ:35 ವರ್ಷದ ಮಹಿಳೆಗೆ ಪ್ರಿಯತಮ ಕಪಾಳಮೋಕ್ಷ ಮಾಡಿದ ಪರಿಣಾಮ ಆಕೆ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. ವಾಣಿಜ್ಯ ನಗರಿಯ ಮ್ಯಾನ್ ಖುರ್ದ್ ರೈಲ್ವೆ ನಿಲ್ದಾಣದಲ್ಲಿ ಪ್ರಿಯತಮ ಮಹಿಳೆ ಕೆನ್ನೆಗೆ ಹೊಡೆದ ನಂತರ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆಯೇ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ರೈಲ್ವೆ ನಿಲ್ದಾಣದ ಸಾರ್ವಜನಿಕ ಶೌಚಾಲಯದ ಸಮೀಪ ಸೀತಾ ಪ್ರಧಾನ್ (35ವರ್ಷ) ಮತ್ತೊಬ್ಬ ವ್ಯಕ್ತಿ ಜತೆ ಮಾತನಾಡುತ್ತಿರುವುದನ್ನು ಗಮನಿಸಿದ ಪ್ರಿಯತಮ ರಾಜು ಪೂಜಾರಿ ಯಲ್ಲಾಪ್ಪಾ ಆಕ್ರೋಶಗೊಂಡು ಕೆನ್ನೆಗೆ ಬಲವಾಗಿ ಹೊಡೆದು ಬಿಟ್ಟಿದ್ದ. ಆ ಕ್ಷಣದಲ್ಲಿಯೇ ಆಕೆ ಕುಸಿದು ಬಿದ್ದಿದ್ದಳು ಎಂದು ವರದಿ ವಿವರಿಸಿದೆ.

ಕಪಾಳಕ್ಕೆ ಹೊಡೆದ ಒಂದೇ ಏಟಿನಿಂದ ಕುಸಿದು ಬಿದ್ದಿದ್ದ ಆಕೆಯನ್ನು ಘಾಟ್ ಕೋಪರ್ ರಾಜಾವಾಡಿ ಆಸ್ಪತ್ರೆಗೆ ಕೊಂಡೊಯ್ಯುತ್ತಿರುವಾಗಲೇ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

ಇದೊಂದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಇನ್ಸ್ ಪೆಕ್ಟರ್ ನಿತಿನ್ ಬೋಬ್ಡೆ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ, ನಂತರ ಯಲ್ಲಾಪ್ಪಾ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

Comments are closed.