ಲಕ್ನೋ: ಮಗಳಿಗೆ ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲವೆಂದು ತಾಯಿಯೊಬ್ಬರು ದೂರಿದ್ದಕ್ಕೆ ಸಿಟ್ಟಿಗೆದ್ದ ದಂತ ವೈದ್ಯನೋರ್ವ ಇಬ್ಬರನ್ನೂ ಕೊಲೆ ಮಾಡಲು ಯತ್ನಿಸಿ, ಅಡ್ಡ ಬಂದ ನಾಯಿ ಮರಿಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಘಾಜಿಯಾಬಾದ್‍ನಲ್ಲಿ ಶನಿವಾರ ಈ ಘಟನೆ ನಡೆದಿದೆ. ಆರೋಪಿಯನ್ನು ದಂತ ವೈದ್ಯ ಯಾಮಿನ್ ಸಿದ್ದಿಕಿ ಎಂದು ಗುರುತಿಸಲಾಗಿದೆ. ಈತ ವಿಜಯನಗರದಲ್ಲಿ ಡೆಂಟಲ್ ಕ್ಲಿನಿಕ್ ಇಟ್ಟುಕೊಂಡಿದ್ದಾನೆ. ಕಳೆದ 6 ತಿಂಗಳಿನಿಂದ ವೈದ್ಯನ ಮನೆ ಬಳಿ ಇದ್ದ ಮಹಿಳೆಯೊಬ್ಬರು ತನ್ನ ಮಗಳ ಹಲ್ಲು ನೋವಿಗೆ ಈತನ ಬಳಿಯೇ ಚಿಕಿತ್ಸೆ ಕೊಡಿಸುತ್ತಿದ್ದರು. 6 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಬಾಲಕಿಯ ಹಲ್ಲು ನೋವು ಮಾತ್ರ ಕಡಿಮೆಯಾಗಿರಲಿಲ್ಲ.
ಆದ್ದರಿಂದ ತಾಯಿ ಸಿದ್ದಿಕಿ ಬಳಿ ಹೋಗಿ ಜಗಳವಾಡಿದ್ದರು. ನೀವು ಸರಿಯಾಗಿ ಚಿಕಿತ್ಸೆ ಕೊಡುತ್ತಿಲ್ಲ ಎಂದು ದೂರಿದ್ದರು. ಇದರಿಂದ ಸಿಟ್ಟಿಗೆದ್ದ ವೈದ್ಯ ಶನಿವಾರ ಮಹಿಳೆ ಮನೆಗೆ ನುಗ್ಗಿ ಚಾಕುವಿನಿಂದ ತಾಯಿ, ಮಗಳನ್ನು ಕೊಲ್ಲಲು ಯತ್ನಿಸಿದನು. ಈ ವೇಳೆ ಅವರನ್ನು ರಕ್ಷಿಸಲು ಮನೆಯಲ್ಲಿ ಸಾಕಿದ್ದ ನಾಯಿ ಮರಿ ಮುಂದೆ ಬಂದು, ವೈದ್ಯನ ಕಾಲಿಗೆ ಕಚ್ಚಿತು. ಇದರಿಂದ ಮತ್ತಷ್ಟು ಕೋಪಗೊಂಡ ವೈದ್ಯ ನಾಯಿ ಮರಿಯ ಕತ್ತು ಹಿಸುಕಿ ಕೊಂದು ಹಾಕಿದನು.
ಅಷ್ಟೇ ಅಲ್ಲದೆ ಮಹಿಳೆ ಹಾಗೂ ಆಕೆಯ ಮಗಳ ಜೊತೆ ವೈದ್ಯ ಅಸಭ್ಯವಾಗಿ ವರ್ತಿಸಿದ್ದನು, ಈ ವೇಳೆ ಮಹಿಳೆ ಕಿರುಚಾಡಿ ಅಲಾರಾಂ ಹೊಡೆದಾಗ ಅಕ್ಕಪಕ್ಕದ ಮನೆಯವರು ಬಂದು ಆರೋಪಿಯನ್ನು ಹಿಡಿದರು ಎಂದು ಪೊಲೀಸರು ತಿಳಿಸಿದರು.
ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 354, 307 ಕಾಯ್ದೆ ಅಡಿ ಹಾಗೂ ಪ್ರಾಣಿ ಮೇಲೆ ವಿಕೃತಿ ಮೆರೆದಿದ್ದಕ್ಕೆ ಸಂಬಂಧಿಸಿದ ಪ್ರಕರಣವನ್ನು ದಾಖಲಿಸಲಾಗಿದೆ. ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಆದೇಶಿಸಿದ್ದಾರೆ.
Comments are closed.