ಆರೋಪಿ ಸ್ಯಾಮ್ಸನ್ ನಿಫಿಯೋನಾ ಸ್ವೀಡಲ್ ಕುಟಿನ್ಹಾ
ಮಂಗಳೂರು, ಆಕ್ಟೋಬರ್.29: ಕೊಣಾಜೆ ಠಾಣೆ ವ್ಯಾಪ್ತಿಯ ಪಜೀರು ಗ್ರಾಮದ ಫ್ರಾನ್ಸಿಸ್ ಕುಟಿನ್ಹೊ ದಂಪತಿಯ ಪುತ್ರಿ, ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ನಿಫಿಯೋನಾ ಸ್ವೀಡಲ್ ಕುಟಿನ್ಹಾ (16) ಕೊಲೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ತಿರುವು ಪಡೆದಿದ್ದು, ಹೆತ್ತವರು ತನ್ನನ್ನು ಕಡೆಗಣಿಸುತ್ತಿದ್ದಾರೆ ಮತ್ತು ತಮ್ಮಿಬ್ಬರ ನಡುವೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪಿಯ ಭ್ರಮೆಯೇ ತನ್ನ ಸಹೋದರಿಯ ಕೊಲೆಗೆ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ.
ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್. ಹರ್ಷ ಅವರು, ಸ್ಥಳೀಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಆರೋಪಿ ಸ್ಯಾಮ್ಸನ್ ಮಾಧಕ ವ್ಯಸನ ಹಾಗೂ ಮತ್ತಿತ್ತರ ದುಶ್ಚಟಗಳಿಗೆ ಬಲಿಯಾಗಿ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಮನೆಯಲ್ಲಿದ್ದ.
ಮಂಗಳೂರಿನ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಫಿಯೊನಾ ಸ್ವೀಡಲ್ ಕುಟಿನ್ಹಾ ಪ್ರತಿಭಾನ್ವಿತಳಾಗಿದ್ದು, ಆಕೆಯ ಬಗ್ಗೆ ಹೆತ್ತವರು ಹೆಚ್ಚು ಮಮತೆ ತೋರುತ್ತಿದ್ದಾರೆ ಎಂಬ ಭಾವನೆ ಸ್ಯಾಮ್ಸನ್ ನಲ್ಲಿತ್ತು. ತಂಗಿಗೆ ಹೆತ್ತವರು ಒಳ್ಳೆಯ ಮೊಬೈಲ್ ತೆಗೆದು ಕೊಟ್ಟಿದ್ದರು. ಊಟ, ತಿಂಡಿಯಲ್ಲೂ ಆಕೆಗೆ ಹೆಚ್ಚಿನ ಅದ್ಯತೆ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಹೆತ್ತವರು ತನ್ನನ್ನು ಕಡೆಗಣಿಸುತ್ತಿದ್ದಾರೆ ಮತ್ತು ತಮ್ಮಿಬ್ಬರ ನಡುವೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂಬ ಭ್ರಮೆಯಿಂದ ಆರೋಪಿ ತನ್ನ ಸಹೋದರಿಯನ್ನೇ ಕೊಲೆಗೈದಿದ್ದಾನೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.
ಘಟನೆ ವಿವರ : ಅ. 8ರಂದು ಫಿಯೋನಾ ಮಂಗಳೂರಿಗೆ ಹೋಗುವುದಾಗಿ ತಿಳಿಸಿ ನಾಪತ್ತೆಯಾಗಿದ್ದಾಳೆ, ಯಾರೋ ಅಪಹರಿಸಿರುವ ಸಾಧ್ಯತೆಯಿದೆಯೆಂದು ಕೊಣಾಜೆ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದರು. ಅಪ್ರಾಪ್ತ ಬಾಲಕಿಯ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಬ್ಬಂದಿ ತನಿಖೆ ಆರಂಭಿಸಿದ್ದರು. ಪ್ರಾಥಮಿಕ ಹಂತದಲ್ಲಿ ಹಲವಾರು ಅನುಮಾನಗಳ ಹಿನ್ನೆಲೆಯಲ್ಲಿ ಸಹಪಾಠಿಗಳು, ಒಡನಾಡಿಗಳ ವಿಚಾರಣೆ ನಡೆಸಲಾಯಿತು. ತಾಂತ್ರಿಕವಾಗಿಯೂ ಬೇರೆ ಬೇರೆ ಆಯಾಮಗಳಲ್ಲಿ ಪರಿಶೀಲನೆ ನಡೆಯಿತು. ಆದರೆ ಎಲ್ಲೂ ಯಾವುದೇ ಸಾಕ್ಷ್ಯ ಸಿಗಲಿಲ್ಲ.
ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತಷ್ಟು ಆಳವಾಗಿ ತನಿಖೆ ನಡೆಸಿದಾಗ ಕೊಲೆಯಾದ ಸ್ವೀಡಲ್ ಕುಟಿನ್ಹಾ ಅ.8ರಂದು ಮನೆಯಿಂದ ಹೊರಗೆ ಹೋದದ್ದನ್ನು ಯಾರೂ ನೋಡಿರಲಿಲ್ಲ ಮಾತ್ರವಲ್ಲ ಈ ಬಗ್ಗೆ ಯಾವುದೇ ಕುರಹು ಸಿಕ್ಕಿಲ್ಲ. ಮೊಬೈಲ್ ಕೂಡಾ ಕೋಣಾಜೆ ವ್ಯಾಪ್ತಿಯಲ್ಲಿರುವಾಗಲೇ ಸ್ವಿಚ್ ಆಫ್ ಆಗಿದೆ. ಈ ಕಾರಣದಿಂದ ಪೊಲೀಸರು ಮನೆಯವರ ತೀವ್ರ ವಿಚಾರಣೆಗೆ ಮುಂದಾದರು.
ಬಾಲಕಿಯ ತಾಯಿ ಸ್ಥಳೀಯ ಐಟಿ ಸಂಸ್ಥೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದರು. ತಂದೆ ಸಂಸ್ಥೆಯೊಂದಲ್ಲಿ ಉದ್ಯೋಗದಲ್ಲಿದ್ದು ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಇದೇ ತಿಂಗಳ 8ರಂದು ದಸರಾ ರಜೆ ಹಿನ್ನೆಲೆಯಲ್ಲಿ ಬಾಲಕಿ, ಆಕೆಯ ಸಹೋದರ ಸ್ಯಾಮ್ಸನ್ ಕುಟಿನ್ಹಾ ಮತ್ತು ತಂದೆ ಮನೆಯಲ್ಲಿದ್ದರು. ಮಕ್ಕಳಿಗೆ ತಿಂಡಿ ತರಲೆಂದು 11 ಗಂಟೆಯ ಸುಮಾರಿಗೆ ತಂದೆ ಮನೆಯಿಂದ ಹೊರಹೋಗಿದ್ದು ಮಧ್ಯಾಹ್ನ 1.30ಕ್ಕೆ ಹಿಂದಿರುಗಿದಾಗ ಮಗಳು ಮನೆಯಲ್ಲಿರಲಿಲ್ಲ.
ಈ ಬಗ್ಗೆ ಮಗನನ್ನು ಕೇಳಿದಾಗ ಮಂಗಳೂರಿಗೆ ಹೋಗುತ್ತೇನೆ ಎಂದು ಹೋಗಿರುವುದಾಗಿ ತಿಳಿಸಿದ್ದ. ಮೊಬೈಲ್ ಸ್ವಿಚ್ ಆಫ್ ಅಗಿದ್ದು ಲೊಕೇಶನ್ ಪರಿಶೀಲಿಸಿದಾಗ ಮುಡಿಪುವಿನಲ್ಲಿ ಆಫ್ ಆಗಿರುವುದು ಕಂಡು ಬಂದಿತ್ತು. ಹಣವನ್ನೂ ಕೊಂಡೊಯ್ಯದಿದ್ದು ಹಾಕಿದ್ದ ವಸ್ತ್ರದಲ್ಲೇ ನಾಪತ್ತೆಯಾಗಿದ್ದಳು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಹೋದರ ಸ್ಯಾಮ್ಸನ್ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿರುವಾಗಲೇ ದುಶ್ಚಟಕ್ಕೆ ಬಲಿಯಾಗಿ ಕಾಲೇಜಿನಿಂದ ಹೊರಬಿದ್ದಿದ್ದ. ಬಳಿಕ ಮನೆಯಲ್ಲೇ ಕಾಲಹರಣ ಮಾಡಿಕೊಂಡು ದಿನಕಳೆಯುತ್ತಿದ್ದ ವಿಷಯ ಪೊಲೀಸರಿಗೆ ಸಿಕ್ಕಿತು. ಕೂಡಲೇ ಸಂಶಯದ ಮೇಲೆ ಆತನನ್ನು ತೀವ್ರ ವಿಚಾರಣೆಗೆ ಪೊಲೀಸರು ಮುಂದಾದರು. ಈ ಸಂದರ್ಭ ಅವನು ನೀಡುತ್ತಿದ್ದ ಉತ್ತರದಲ್ಲಿ ತಾಳೆಯಾಗುತ್ತಿರಲಿಲ್ಲ ಮತ್ತು ಕೆಲವೊಂದು ಪ್ರಶ್ನೆಗೆ ತಬ್ಬಿಬ್ಬಾಗುತ್ತಿದ್ಘಿ. ಈ ಸಂದರ್ಭ ನಮ್ಮ ಬಳಿ ಲಭ್ಯವಿದ್ದ ಸಾಕ್ಷ್ಯಾಧಾರದ ಮೇಲೆ ನಿಖರವಾದ ಪ್ರಶ್ನೆ ಕೇಳಿದಾಗ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಬಂದು ತಂಗಿಯನ್ನು ತಾನೇ ಸುತ್ತೆಯಿಂದ ಹೊಡೆದು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ.
ಸಹೋದರಿಯೊಂದಿಗೆ ಜಗಳ ಮಾಡಿದ್ದು, ಈ ಸಂದರ್ಭ ಸುತ್ತಿಗೆಯಲ್ಲಿ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾನೆ. ಮೆದುಳಿಗೆ ಗಂಭೀರವಾದ ಗಾಯವಾಗಿ ಬಾಲಕಿ ಮೃತಪಟ್ಟಿದ್ದಳು. ಬಳಿಕ ಹೆದರಿದ ಆರೋಪಿ ಸಹೋದರಿಯ ಶವ ಎಳೆದೊಯ್ದು ಮನೆಯ ಹಿಂಭಾಗದಲ್ಲಿರುವ ಗುಡ್ಡದಲ್ಲಿ ಎಸೆದಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಪ್ರಾಥಮಿಕ ತನಿಖೆಯಲ್ಲಿ ಆತ ಒಬ್ಬನೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾಗಿ ಹಾಗೂ ಮೃತದೇಹವನ್ನು ತೋಡೊಂದಕ್ಕೆ ಎಸೆದಿರುವುದಾಗಿ ಹೇಳಿದ್ದಾನೆ. ನಿರಂತರ ಮಳೆ ಬರುತ್ತಿದ್ದ ಕಾರಣ ಆ ಪ್ರದೇಶಕ್ಕೆ ಯಾರೂ ಹೋಗುತ್ತಿರಲಿಲ್ಲ ಎಂದು ಹೇಳಿದ್ದಾನೆ. ಅರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ವಿಚಾರಕ್ಕೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಮನಸ್ಸಿಗೆ ಬೇಸರ ತರುತ್ತದೆ : ಶಾಸಕ ಖಾದರ್
ಪೊಲೀಸರು ಪ್ರಕರಣದ ಅರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರೆ ಸ್ವಂತ ಅಣ್ಣನೇ ತಂಗಿಯ ಕೊಲೆ ನಡೆಸಿರುವುದು ಮನಸ್ಸಿಗೆ ಬೇಸರತರುತ್ತದೆ. ಯುವ ಸಮುದಾಯ ಅಮಲು ವ್ಯಸನದಿಂದ ದೂರವಿದ್ದು, ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಬೇಕು ಎಂದು ಇದೇ ವೇಳೆ ಸ್ಥಳೀಯ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.


Comments are closed.