ರಾಷ್ಟ್ರೀಯ

ನ.18ಕ್ಕೆ ಸುಪ್ರಿಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ಎಸ್​.ಎ.ಬೊಬ್ಡೆ ಪ್ರಮಾಣ ವಚನ ಸ್ವೀಕಾರ

Pinterest LinkedIn Tumblr

ನವದೆಹಲಿ: ನ್ಯಾಯಮೂರ್ತಿ ಶರಾದ್​ ಅರವಿಂದ್​ ಬೊಬ್ಡೆ ಅವರನ್ನು ಸುಪ್ರಿಂಕೋರ್ಟ್​ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಮಂಗಳವಾರ ಅಧಿಕೃತವಾಗಿ ನೇಮಕ ಮಾಡಿದ್ದಾರೆ.

ಪ್ರಸ್ತುತ ಮುಖ್ಯ ನ್ಯಾಯಮೂರ್ತಿಯಾಗಿರುವ ರಂಜನ್​ ಗೊಗೊಯ್​ ಅವರು ನವೆಂಬರ್​ 17ರಂದು ನಿವೃತ್ತಿಯಾಗಲಿದ್ದು, ನ.18ಕ್ಕೆ ಮುಂದಿನ ಸಿಜೆಐ ಆಗಿ ಎಸ್​.ಎ.ಬೊಬ್ಡೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಏಪ್ರಿಲ್​ 24, 1956ರಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದ ಬೊಬ್ಡೆ ಅವರು ನಾಗ್ಪುರ ವಿಶ್ವವಿದ್ಯಾಯಲದಲ್ಲಿ ಅಧ್ಯಯನ ನಡೆಸಿದರು. 2000ನೇ ಇಸವಿಯಲ್ಲಿ ಬಾಂಬೆ ಹೈಕೋರ್ಟ್​ಗೆ ಹೆಚ್ಚುವರಿ ಜಡ್ಜ್​ ಆಗಿ ನೇಮಕವಾದರು. 2012ರಲ್ಲಿ ಮಧ್ಯ ಪ್ರದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು.

ಬಳಿಕ 2013ರಲ್ಲಿ ಬೊಬ್ಡೆ ಅವರಿಗೆ ಸುಪ್ರೀಂಕೋರ್ಟ್​ಗೆ ಬಡ್ತಿ ನೀಡಲಾಯಿತು. ಏಪ್ರಿಲ್​ 23, 2021ಕ್ಕೆ ನಿವೃತ್ತಿ ಹೊಂದಲಿರುವ ಇವರು ಒಟ್ಟು 18 ತಿಂಗಳಗಳವರೆಗೂ ಸಿಜೆಐ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಅಕ್ಟೋಬರ್​ 3, 2018ರಂದು ಸುಪ್ರೀಂಕೋರ್ಟ್​ನ 46ನೇ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್​ ಗೊಗೊಯ್​ ಅವರು ಪ್ರಮಾಣ ವಚನ ಸ್ವೀಕರಿಸಿದ್ದರು. ನವೆಂಬರ್​ 17ಕ್ಕೆ ನಿವೃತ್ತಿ ಹೊಂದಲಿರುವ ಗೊಗೊಯ್​ ಒಟ್ಟು 13 ತಿಂಗಳು 15 ದಿನಗಳು ಅಧಿಕಾರ ನಡೆಸಿದಂತಾಗುತ್ತದೆ. ನವೆಂಬರ್​ 18ಕ್ಕೆ ನ್ಯಾಯಮೂರ್ತಿ ಬೊಬ್ಡೆ ಅವರು 47ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಹಾಲಿ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತಿ ಹೊಂದುವ ಮುನ್ನ ತಮ್ಮ ಸ್ಥಾನಕ್ಕೆ ಮತ್ತೊಬ್ಬರ ಹೆಸರನ್ನು ಸೂಚಿಸುವ ಸಂಪ್ರದಾಯವಿದ್ದು, ಎರಡನೇ ಹಿರಿಯ ನ್ಯಾಯಮೂರ್ತಿಗಳಾಗಿರುವ ಬೊಬ್ಡೆ ಹೆಸರನ್ನು ಸೂಚಿಸಿ ಕಾನೂನು ಸಚಿವಾಲಯಕ್ಕೆ ಸೂಚಿಸಿ ಹಾಲಿ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ಅವರು ಈ ಹಿಂದೆ ಪತ್ರ ಬರೆದಿದ್ದರು.

Comments are closed.