ಉಡುಪಿ: ಉಡುಪಿ ಶಾಸಕ ಕೆ. ರಘುಪತಿ ಭಟ್ ಮತ್ತು ವಿಧಾನಸಭೆಯ ಮುಖ್ಯ ಸಚೇತಕರು, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಇವರ ನೇತೃತ್ವದ ನಿಯೋಗವು ಸೋಮವಾರ ಗುಜರಾತ್ ರಾಜ್ಯ ಪ್ರವಾಸವನ್ನು ಕೈಗೊಂಡಿದ್ದು ಅಲ್ಲಿ ಮರಳು ಸಮಸ್ಯೆಗಳ ವಿಚಾರವಾಗಿ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಗುಜರಾತಿನ ಅಹ್ಮದಬಾದಿನಲ್ಲಿ ಸಭೆ ನಡೆಸಿ ನಾನ್ ಸಿ.ಆರ್.ಝಡ್ ನಲ್ಲಿ ಮರಳು ತೆಗೆಯುವಂತಹಾ ಅವಕಾಶದ ಬಗ್ಗೆ ಚರ್ಚಿಸಿದರು. ಗುಜರಾತಿನ ಗಣಿ ಇಲಾಖೆಯ ಆಯುಕ್ತರಾದ ಅಧಿಕಾರಿ ಅರುಣ್ ಕುಮಾರ್ ಸೋಲಂಕಿ ಐಎಎಸ್ ಹಾಗೂ ಇತರೆ ಅಧಿಕಾರಿಗಳ ಜೊತೆಗೆ ಚರ್ಚಿಸಿದರು. ನಾನ್ ಸಿ.ಆರ್.ಝಡ್ ನಲ್ಲಿ ಮರಳು ತೆಗೆಯಲು ಗುಜರಾತಿನಲ್ಲಿ ಸಾಕಷ್ಟು ಅವಕಾಶಗಳು ಇವೆ. ಈ ಎಲ್ಲಾ ನಿಯಮ, ರೀತಿ ನೀತಿಗಳ ಬಗ್ಗೆ ಅಧ್ಯಯನ ನಡೆಸಿ ಇದರ ವಿಸ್ತೃತವಾದ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಒಪ್ಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ನಿಯೋಗದಲ್ಲಿ ಕರ್ನಾಟಕದ ಹಿರಿಯ ಅಧಿಕಾರಿಗಳಾದ ಶಿವಶಂಕರ್ ರೆಡ್ಡಿ, ರಾಮ್ ಜೀ ನಾಯಕ್ ಹಾಗೂ ಇತರರು ಇದ್ದರು. ಒಟ್ಟಾರೆಯಾಗಿ ಗುಜರಾತಿನಲ್ಲಿ ಇರುವಂತಹಾ ಮರಳು ನೀತಿಯನ್ನು ಕರ್ನಾಟಕದಲ್ಲಿ ಅಳವಡಿಸುವ ಮೂಲಕ ರಾಜ್ಯದಲ್ಲಿ ಬಾಧಿಸುತ್ತಿರುವಂತಹಾ ಮರಳು ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸುವ ನಿಟ್ಟಿನಲ್ಲಿ ಈ ನಿಯೋಗ ತೆರಳಿದೆ.
Comments are closed.