ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಂಗಮ್ ಎಂಬಲ್ಲಿ ಭಾನುವಾರ ಸಂಜೆ ಯುವಕನೋರ್ವನ ಮೇಲೆ ಹತ್ತು ಮಂದಿಯಿದ್ದ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಟ ಬಾರಿಕೆರೆ ನಿವಾಸಿ ರತ್ನಾಕರ ಪೂಜಾರಿ (30) ಕೊಲೆಯತ್ನಕ್ಕೆ ಒಳಗಾದವರು. ಸದ್ಯ ಗಾಯಾಳು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪೈಕಿ ಗುರುರಾಜ್ ಪುತ್ರನ್ ಸಂಗಮ್, ಸಂತೋಷ್ ಸಂಗಮ್, ರವಿರಾಜ್ ಅಲಿಯಾಸ್ ರೈಫಲ್ ರಾಜ ಸಂಗಮ್ ಹಾಗೂ ಪ್ರದೀಪ್ ಅಲಿಯಾಸ್ ರಾಜಾ ಎನ್ನುವ ಆರೋಪಿಗಳನ್ನು ಕುಂದಾಪುರ ಪಿಎಸ್ಐ ಹರೀಶ್ ಆರ್. ಹಾಗೂ ತಂಡ ಬಂಧಿಸಲಾಗಿದ್ದು ಇತರ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ನಡೆದಿದ್ದೇನು?
ದೂರುದಾರ ಹಾಗೂ ಗಾಯಾಳು ರತ್ನಾಕರ್ ತನ್ನ ಸ್ನೇಹಿತನ ಚಿಕ್ಕಮ್ಮನ ಮಗಳಾದ ಮದುವೆ ನಿಮಿತ್ತ ಸ್ನೇಹಿತನ ಸಂಬಂಧಿಕರಿಗೆ ಕಾರು ಚಾಲಕರಾಗಿ ಕುಂದಾಪುರದ ಸಂಗಮ್ ನಲ್ಲಿರುವ ವರನ ಮನೆಗೆ ಹೋದ ವೇಳೆ ಸ್ನೇಹಿತ ಹಾಗೂ ಆತನ ಮನೆಮಂದಿ ವರನ ಮನೆಯ ಒಳಗೆ ಹೋಗಿದ್ದು ರತ್ನಾಕರ್ ಕಾರಿನ ಬಳಿ ಮನೆಯ ಹೊರಗಡೆ ಇದ್ದರು. ಇದೇ ಸಂದರ್ಭ ರತ್ನಾಕರ್ ಪರಿಚಿತ ಆರೋಪಿ ಗುರುರಾಜ್ ಪುತ್ರನ್ ‘ಮಾತನಾಡಲಿದೆ ನನ್ನೊಂದಿಗೆ ಬಾ’ ಎಂದು ಹೇಳಿದ್ದು ಆಗ ತಾನು ಮದುವೆಯ ಮನೆಯವರನ್ನು ಕರೆದುಕೊಂಡು ಬಂದಿದ್ದು ಈಗ ಬರಲಿಕ್ಕೆ ಆಗುವುದಿಲ್ಲ ಎಂದು ರತ್ನಾಕರ್ ತಿಳಿಸಿ ಸಂಗಮ್ ಶಾಲೆಯ ಬಳಿ ಇದ್ದರು. ಇದೇ ವೇಳೆ ಸಂಜೆ 5.30ರ ಸುಮಾರಿಗೆ ಆರೋಪಿ ಗುರುರಾಜ್ ಸಂತು ಹಾಗು ಇತರ 8 ರಿಂದ 10 ಮಂದಿ ಜನರೊಂದಿಗೆ ಬಂದು ಬೈಕಿನ ಬಂಪರ್ ಗೆ ಅಳವಡಿಸುವ ಕಬ್ಬಿಣದ ರಾಡ್ನ್ನು ಹಿಡಿದು ಅವ್ಯಾಚ ಶಬ್ದದಿಂದ ನಿಂದಿಸಿ ರಾಡ್ನಲ್ಲಿ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ರತ್ನಾಕರ್ ಅವರ ಬಲಕೈನ ಮುಂಗೈಗೆ , ಬಲಕಾಲಿನ ಬಲಗಂಟಿನ ಕೆಳಗೆ ಹೊಡೆದು ಆಅವರನ್ನು ಕೆಳಕ್ಕೆ ದೂಡಿ ಹಾಕಿ ಹಂಚಿನಿಂದ ತಲೆಗೆ,ಮೈಗೆ, ಕೈಗೆ ಹೊಡೆದಿದ್ದಾರೆ. ಗಾಯಗೊಂಡ ರತ್ನಾಕರ್ ಅವರನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಗುರೂಜಿ ಅವಹೇಳನವೇ ಕಾರಣ?
ರತ್ನಾಕರ್ ಹೇಳುವ ಪ್ರಕಾರ ತಾನು ಚಿತ್ರ ನಟ ಸುದೀಪ್ ಅಭಿಮಾನಿಯಾಗಿದ್ದು ಈ ಹಿಂದೆ ವಿನಯ್ ಗುರುಜಿಯವರು ಸುದೀಪ್ ಬಗ್ಗೆ ಅವಹೇಳನವಾಗಿ ಮಾತನಾಡಿದ್ದು ಅದನ್ನು ವಿರೋಧಿಸಿ ಬಂದ ಮೆಸೇಜನ್ನು ತಾನು ಪೇಸ್ ಬುಕ್ನಲ್ಲಿ ಶೇರ್ ಮಾಡಿದಕ್ಕೆ ಈ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಬಂಧಿತ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143,147,148, 504, 307 ಜೊತೆಗೆ 149 ರಂತೆ ಪ್ರಕರಣ ದಾಖಲಿಸಿಕೊಂಡು ಕುಂದಾಪುರ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಬಂಧಿತರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಗಳಿದೆ.
Comments are closed.