ಕರ್ನಾಟಕ

ಹಿಂದಿ ಅಜೆಂಡಾಕ್ಕೆ ಸ್ಟಾಲಿನ್, ಮಮತಾ, ಒವೈಸಿ ಮತ್ತಿತರರಿಂದ ಕಟು ಟೀಕೆ

Pinterest LinkedIn Tumblr


ಬೆಂಗಳೂರು(ಸೆ. 14): ಹಿಂದಿ ಭಾಷೆಯನ್ನು ಭಾರತದ ಸಂಪರ್ಕ ಭಾಷೆಯನ್ನಾಗಿ ಮಾಡಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಭಿಪ್ರಾಯಕ್ಕೆ ರಾಷ್ಟ್ರಾದ್ಯಂತ ಹಲವೆಡೆ ವಿರೋಧ ವ್ಯಕ್ತವಾಗುತ್ತಿದೆ. ಇತ್ತ, ಕರ್ನಾಟಕದಲ್ಲಿ ಕನ್ನಡ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆಗಳನ್ನು ನಡೆಸಿವೆ. ವಿಪಕ್ಷ ಮುಖಂಡರು ಹಿಂದಿ ಹೇರಿಕೆ ವಿರೋಧಿಸಿ ಹೇಳಿಕೆ ನೀಡಿದ್ಧಾರೆ. ಅತ್ತ, ರಾಷ್ಟ್ರಮಟ್ಟದಲ್ಲೂ ಹಿಂದಿ ಹೇರಿಕೆ ವಿರೋಧಿಸುವ ಕೂಗು ಬಲಗೊಳ್ಳುತ್ತಿದೆ. ತಮಿಳುನಾಡಿನ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೊದಲಾದವರು ಹಿಂದಿ ಹೇರಿಕೆಯನ್ನು ಆಕ್ಷೇಪಿಸಿ ಮಾತನಾಡಿದ್ಧಾರೆ.

ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡಲು ನಡೆಯುತ್ತಿರುವ ಪ್ರಯತ್ನದಿಂದ ರಾಷ್ಟ್ರದ ಐಕ್ಯತೆಗೆ ಧಕ್ಕೆಯಾಗುತ್ತದೆ. ಈ ವಿಚಾರದ ಬಗ್ಗೆ ನಾವು ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಅಮಿತ್ ಶಾ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸುತ್ತೇವೆ ಎಂದು ಎಂ.ಕೆ. ಸ್ಟಾಲಿನ್ ಹೇಳಿದ್ಧಾರೆ.

ಇನ್ನು, ಅಸಾದುದ್ದೀನ್ ಒವೈಸಿ ಅವರಂತೂ ಹಿಂದಿ ದಿವಸ್ ಆಚರಣೆಯ ಅಗತ್ಯತೆಯನ್ನೇ ಪ್ರಶ್ನಿಸಿದ್ದಾರೆ. “ಹಿಂದಿಯು ಎಲ್ಲಾ ಭಾರತೀಯರ ಮಾತೃ ಭಾಷೆಯಲ್ಲ. ಈ ನೆಲದಲ್ಲಿ ಅಚ್ಚೊತ್ತಿರುವ ಹಲವು ಮಾತೃ ಭಾಷೆಗಳ ಸೌಂದರ್ಯ ಮತ್ತು ವೈವಿಧ್ಯತೆಯನ್ನು ನೀವು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲವೇ? ಸಂವಿಧಾನದ 29ನೇ ಪರಿಚ್ಛೇದದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಆತನದ್ದೇ ಭಾಷೆ, ಬರಹ ಮತ್ತು ಸಂಸ್ಕೃತಿಯನ್ನು ಹೊಂದುವ ಹಕ್ಕು ಇದೆ. ಹಿಂದಿ, ಹಿಂದು ಮತ್ತು ಹಿಂದುತ್ವಕ್ಕಿಂತ ಭಾರತ ಬೃಹತ್ತಾಗಿದೆ” ಎಂದು ಒವೈಸಿ ಟ್ವೀಟ್ ಮಾಡಿದ್ದಾರೆ.

ಅತ್ತ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹಿಂದಿ ದಿವಸ್ ಬಗ್ಗೆ ಅಪಸ್ವರ ಎತ್ತದಿದ್ದರೂ ಹಿಂದಿ ಹೇರಿಕೆಯನ್ನು ಬಲವಾಗಿ ವಿರೋಧಿಸಿದ್ಧಾರೆ. ಪ್ರತಿಯೊಂದು ಭಾಷೆ ಮತ್ತು ಸಂಸ್ಕೃತಿಯನ್ನು ಸಮಾನವಾಗಿ ಗೌರವಿಸಬೇಕು. ನಾವು ಹಲವು ಭಾಷೆಗಳನ್ನು ಕಲಿಯಬಹುದಾದರೂ ನಮ್ಮ ಮಾತೃ ಭಾಷೆಯನ್ನು ಎಂದಿಗೂ ಮರೆಯಬಾರದು ಎಂದು ಮಮತಾ ಬ್ಯಾನರ್ಜಿ ಹಿಂದಿ ಭಾಷೆಯಲ್ಲೇ ಟ್ವೀಟ್ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಮಮತಾ ಬ್ಯಾನರ್ಜಿ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಪಶ್ಚಿಮ ಬಂಗಾಳದಲ್ಲಿ ಬಂಗಾಳಿ ಅಸ್ಮಿತೆಗೆ ಕರೆ ನೀಡಿದ್ದರು.

“ಬಾಂಗ್ಲಾ ಭಾಷೆಗೆ ನಾವು ಹೆಚ್ಚು ಮನ್ನಣೆ ಕೊಡಬೇಕಿದೆ. ನಾವು ದಿಲ್ಲಿಗೆ ಹೋದಾಗ ಹಿಂದಿ ಮಾತನಾಡುತ್ತೇವೆ. ಪಂಜಾಬ್​ಗೆ ಹೋದರೆ ಪಂಜಾಬಿ ಮಾತನಾಡುತ್ತೇವೆ. ನಾನು ತಮಿಳುನಾಡಿಗೆ ಹೋದರೆ ನನಗೆ ತಮಿಳು ಬರದಿದ್ದರೂ ಒಂದಷ್ಟು ಪದಗಳು ಗೊತ್ತಿರುವುದರಿಂದ ಮಾತನಾಡುತ್ತೇನೆ. ಹಾಗೆಯೇ, ನೀವು ಬಂಗಾಳಕ್ಕೆ ಬಂದರೆ ಬಂಗಾಳಿ ಭಾಷೆಯಲ್ಲೇ ಮಾತನಾಡಬೇಕು” ಎಂದು ಮಮತಾ ಬ್ಯಾನರ್ಜಿ ಅಗ್ರಹಿಸಿದ್ದರು.

ಅವರ ಈ ಅಭಿಪ್ರಾಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮಮತಾ ಬ್ಯಾನರ್ಜಿ ಅವರು ಭಾಷೆಯ ಆಧಾರದ ಮೇಲೆ ಜನರನ್ನು ಒಡೆಯುತ್ತಿರುವುದು ಸ್ಪಷ್ಟವಾಗಿದೆ ಎಂದು ಪಶ್ಚಿಮ ಬಂಗಾಳದಲ್ಲಿರುವ ಅನ್ಯ ಭಾಷಿಕ ಜನರು ಟೀಕಿಸಿದ್ದರು.

2017ರಲ್ಲೂ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 10ನೇ ತರಗತಿಯವರೆಗೆ ಬಂಗಾಳಿ ಭಾಷೆಯನ್ನು ಕಡ್ಡಾಯಗೊಳಿಸುವ ನಿರ್ಧಾರಕ್ಕೆ ಬಂದಿದ್ದರು. ಆದರೆ, ದಾರ್ಜಿಲಿಂಗ್ ಸುತ್ತಮುತ್ತ ಇರುವ ಬಂಗಾಳಿಯೇತರ ಪ್ರದೇಶಗಳಲ್ಲಿನ(ಗೂರ್ಖಾಲ್ಯಾಂಡ್) ಗೂರ್ಖಾ ಹಾಗೂ ನೇಪಾಳಿ ಸಮುದಾಯಗಳು ದೀದಿ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಿರುಗುವ ಸೂಚನೆ ಸಿಕ್ಕುತ್ತಿದ್ದಂತೆಯೇ ಗೂರ್ಖಾಲ್ಯಾಂಡ್ ಭಾಗಕ್ಕೆ ಕಡ್ಡಾಯ ಬಂಗಾಳಿ ನಿಯಮದಿಂದ ವಿನಾಯಿತಿ ನೀಡಿರುವುದಾಗಿ ಸ್ಪಷ್ಟಪಡಿಸಿದ್ದರು.

ಇದೇ ವೇಳೆ, ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರುದ್ಧ ಈಗ್ಗೆ ಕೆಲವಾರು ವರ್ಷಗಳಿಂದಲೂ ಒಂದಷ್ಟು ಮಟ್ಟಕ್ಕೆ ಪ್ರತಿರೋಧಗಳು ವ್ಯಕ್ತವಾಗುತ್ತಿವೆ. ಇವತ್ತೂ ಕೂಡ ಹಲವು ಕನ್ನಡ ಸಂಘಟನೆಗಳು ಹಿಂದಿ ದಿವಸ್ ಮತ್ತು ಹಿಂದಿ ಹೇರಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿವೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹಿಂದಿ ದಿವಸ್​ದಂತೆ ಕನ್ನಡ ಭಾಷಾ ದಿವಸವನ್ನು ಯಾವಾಗ ಆಚರಿಸುತ್ತೀರಿ ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ಧಾರೆ.

ಸಿದ್ದರಾಮಯ್ಯ ಅವರಂತೂ ಹಿಂದಿ ಹೇರಿಕೆಯನ್ನು ಕಟುವಾಗಿ ವಿರೋಧಿಸಿದ್ದಾರೆ. ಹಿಂದಿ ರಾಷ್ಟ್ರಭಾಷೆ ಎಂಬುದು ಸುಳ್ಳು. ಕನ್ನಡದಂತೆಯೇ 22 ಅಧಿಕೃತ ಭಾಷೆಗಳಲ್ಲಿ ಹಿಂದಿಯೂ ಒಂದು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಹಿಂದಿ ಭಾಷೆ ಬಗ್ಗೆ ತಮ್ಮ ವಿರೋಧ ಇಲ್ಲ. ಹಿಂದಿಯ ಬಲವಂತ ಹೇರಿಕೆಯನ್ನು ವಿರೋಧಿಸುವುದಾಗಿ ಅವರು ಸ್ಪಷ್ಟಪಡಿಸಿದ್ಧಾರೆ.

Comments are closed.