
ಮಂಗಳೂರು : ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವುದು ಖೇದಕರ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಗಣೇಶೋತ್ಸವದಂತಹ ಉತ್ಸವಗಳ ಮೂಲಕ ನಮ್ಮ ಸಂಸ್ಕೃತಿ-ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾದ ಅವಶ್ಯಕತೆ ಇದೆ ಎಂದು ಶಕ್ತಿನಗರದ ಎಜುಕೇಶನ್ ಟ್ರಸ್ಟಿನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಅವರು ಹೇಳಿದರು.
ಮಂಗಳೂರಿನ ಉರ್ವದ ಹಿಂದೂ ಸೇವಾ ಸಮಿತಿಯ ಆಶ್ರಯದಲ್ಲಿ ಉರ್ವ ಮಾರಿಯಮ್ಮ ದೇವಸ್ಥಾನದ ಬಳಿಯಲ್ಲಿ ನಡೆದ 30ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು.
ರೋಟರಿ ಕ್ಲಬ್ಬಿನ ಸತೀಶ್ ಬೋಳಾರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಕಳೆದ 30 ವರ್ಷಗಳಿಂದ ಗಣೇಶೋತ್ಸವ ಹಮ್ಮಿಕೊಳ್ಳುತ್ತಿರುವ ಸಂಘಟಕರ ಕಾರ್ಯ ಪ್ರಶಂಸನೀಯ ಎಂದರು.
ಮುಖ್ಯ ಅತಿಥಿಗಳಾಗಿ ಉರ್ವ ಫ್ರೆಂಡ್ಸ್ ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷ ವಿಠೋಭ ನುಳ್ಳಿಪ್ಪಾಡಿ, ಉದ್ಯಮಿ ಮಹಾಬಲ ಕೊಟ್ಟಾರಿ, ಗಣೇಶೋತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷ ರಾಮಚಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್ ಶೆಟ್ಟಿ, ಮಾಜಿ ಅಧ್ಯಕ್ಷ ರಮಾನಾಥ ಶೆಟ್ಟಿ, ಭರತ್ ಕುಮಾರ್ ಉರ್ವ, ವೀರೇಂದ್ರ ಕಿರೋಡಿಯನ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ವೀಣಾ ಬೇಕಲ್ ಹಾಗೂ ಮಾಜಿ ಯೋಧ ಮಧುಸೂದನ್ ಅವರನ್ನು ಸನ್ಮಾನಿಸಲಾಯಿತು. ಪರಿಸರದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಸಮಿತಿಯ ಹಿರಿಯ ಕಾರ್ಯಕರ್ತರನ್ನು ಗೌರವಿಸಲಾಯಿತು.
ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಅರುಣ್ ಉರ್ವ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ವಂದಿಸಿದರು. ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಕಾರ್ಯಕ್ರಮ ನಿರ್ವಹಿಸಿದರು.
Comments are closed.