ಕರ್ನಾಟಕ

ಸಿದ್ದರಾಮಯ್ಯಗೆ ವಿಪಕ್ಷ ನಾಯಕನ ಸ್ಥಾನ ನೀಡದಂತೆ ಹೈಕಮಾಂಡ್​​ಗೆ ಕಾಂಗ್ರೆಸ್​​ ನಾಯಕರ ದೂರು

Pinterest LinkedIn Tumblr


ಬೆಂಗಳೂರು(ಸೆ.08): ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇನ್ನೂ ಸರಿಯಾಗಿ ಟೇಕಾಪ್ ಆಗಿಲ್ಲ. ಉತ್ತರ ಕರ್ನಾಟಕದ ಜನ ಬದುಕು ಪ್ರವಾಹದಿಂದ ತತ್ತರಿಸಿ ಹೋಗಿದೆ. ಇವರಿಗೆ ಪರಿಹಾರ ನೀಡದೇ ರಾಜ್ಯ ಸರ್ಕಾರವೂ ಕಥೆ ಹೇಳಿಕೊಂಡಿದೆ. ಅಲ್ಲದೇ ಸದ್ಯಕ್ಕೆ ವರ್ಗಾವಣೆಯೇ ಸರ್ಕಾರದ ಮೊದಲ ಆದ್ಯತೆ ಆಗಿದೆ. ಸರ್ಕಾರವನ್ನ ಎಚ್ಚರಿಸಬೇಕಾದ ವಿಪಕ್ಷ ನಾಯಕರೇ ರಾಜ್ಯದಲ್ಲಿ ಇಲ್ಲ. ಸರ್ಕಾರ ಅಸ್ತಿತ್ವಕ್ಕೆ ಬಂದು ತಿಂಗಳು ಕಳೆದು ಹೋಗಿದೆ. ಆದರೆ, ಕಾಂಗ್ರೆಸ್​ ಹೈಕಮಾಂಡ್​ ಮಾತ್ರ ಇನ್ನೂ ವಿರೋಧ ಪಕ್ಷದ ನಾಯಕನ ನೇಮಕ ಮಾಡಿಯೇ ಇಲ್ಲ. ಈ ಮಧ್ಯೆ ಕಾಂಗ್ರೆಸ್​​ ಹಿರಿಯ ನಾಯಕರು ತಾನೇ ವಿಪಕ್ಷ ನಾಯಕ ಆಗುತ್ತೇನೆಂದು ಚಾತಕ ಪಕ್ಷಿಯಂತೆ ಕಾಯುತ್ತಿರುವ ಮಾಜಿ ಸಿದ್ದರಾಮಯ್ಯ ವಿರುದ್ಧವೇ ಚಕ್ರವ್ಯೂಹ ಹೆಣೆದಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯನವರೇ ಕಾರಣ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್​​​ ಹೈಕಮಾಂಡ್​​ಗೆ ದೂರು ನೀಡಿದ್ದರು. ಈ ಬೆನ್ನಲ್ಲೇ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಕೂಡ ಬಹಿರಂಗವಾಗಿಯೇ ಸಿದ್ದರಾಮಯ್ಯ ಮೈತ್ರಿ ಸರ್ಕಾರ ಬೀಳಿಸಿದ್ದು ಎಂದು ಕಿಡಿಕಾರಿದ್ದರು. ಅಂತೆಯೇ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್​​ನ ಇಬ್ಬರು ನಾಯಕರು ಸಿಡಿದೆದಿದ್ದಾರೆ. ಸದ್ದಿಲ್ಲದೇ ಮಾಜಿ ಸಿಎಂ ವಿರುದ್ಧ ಕಾಂಗ್ರೆಸ್​​ ಅಧಿನಾಯಕಿ ಸೋನಿಯಾ ಗಾಂಧಿಗೆ ದೂರು ನೀಡಿದ್ದಾರೆ. ಜತೆಗೆ ರಾಹುಲ್ ಗಾಂಧಿ, ಅಹಮದ್ ಪಟೇಲ್, ಗುಲಾಂ ನಬಿ ಆಜಾದ್ ಅವರಿಗೂ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

ದಕ್ಷಿಣ ಭಾರತದಲ್ಲಿದ್ದ ಕಾಂಗ್ರೆಸ್​ ನೇತೃತ್ವದ ಏಕೈಕ ಮೈತ್ರಿ ಸರ್ಕಾರ ಪತನವಾಯ್ತು. ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯನವರೇ. ಸಿದ್ದರಾಮಯ್ಯಗೆ ಇಲ್ಲಿಯವರೆಗೂ ಅಧಿಕಾರ ನೀಡಿದ್ದು ಸಾಕು. ಅವರೇ ಐದು ವರ್ಷ ಸಿಎಂ ಆಗಿದ್ದರು, ವಿಪಕ್ಷದ ನಾಯಕರು ಆಗಿದ್ದರು. ಸದ್ಯಕ್ಕೀಗ ಬೇರೆ ಯಾರಿಗಾದರೂ ಅವಕಾಶ ನೀಡಬೇಕೆಂದು ಕಾಂಗ್ರೆಸ್​ ಹಿರಿಯ ನಾಯಕರು ನೀಡಿದ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

ಪಕ್ಷದ ಎಲ್ಲಾ ನಾಯಕರಿಗೂ ಅವಕಾಶ ಸಿಗಬೇಕು. ಈ ಬಾರಿಯೂ ವಿಪಕ್ಷ ನಾಯಕ ಅವರೇ ಆಗಬೇಕೆಂದು ಹೇಳಿದರೆ ಹೇಗೆ. ತಾವು ಸ್ಥಾನದಲ್ಲಿ ಇದ್ದರೇ ಮಾತ್ರ ಪಕ್ಷಕ್ಕಾಗಿ ಕೆಲಸ ಮಾಡೋದಲ್ಲ. ಅಧಿಕಾರ ಇಲ್ಲದೆಯೂ ಕೆಲಸ ಮಾಡಲಿ. ಸಿದ್ದರಾಮಯ್ಯ ಬದಲಿಗೆ ಬೇರೆ ಯಾರಿಗಾದರೂ ಅವಕಾಶ ನೀಡಬೇಕು ಎಂದು ಕಾಂಗ್ರೆಸ್​ನ ಹರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಸಂಸದ ಕೆಎಚ್​​ ಮುನಿಯಪ್ಪ ದೂರು ನೀಡಿದ್ದಾರೆ ಎಂಬುದು ವಿಶೇಷ.

ಇತ್ತ ಹೆಚ್.ಕೆ ಪಾಟೀಲರನ್ನ ವಿಪಕ್ಷ ನಾಯಕರನ್ನಾಗಿ ನೇಮಕ ಮಾಡಬೇಕೆಂದು ಮಲ್ಲಿಕಾರ್ಜುನ್​​ ಆಸೆಯಾಗಿದೆ. ಅತ್ತ ಲೋಕಸಭಾ ಚುನಾವಣೆಯಲ್ಲಿ ತನ್ನ ವಿರುದ್ಧ ಕೆಲಸ ಮಾಡಿದ್ದ ಸಿದ್ದರಾಮಯ್ಯ ಆಪ್ತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮೇಲೆ ಮುನಿಯಪ್ಪಗೆ ಭಾರೀ ಸಿಟ್ಟಿದೆ. ಕೆ.ಎಚ್​​ ಮುನಿಯಪ್ಪ ಪರವಾಗಿ ಕೆಲಸ ಮಾಡುವಂತೆ ರಮೇಶ್​ ಕುಮಾರ್​​ ಅವರಿಗೆ ಸಿದ್ದರಾಮಯ್ಯ ಹೇಳಿಲ್ಲ ಎಂಬ ಕಾರಣಕ್ಕೆ ಈ ಸಿಟ್ಟು ಬಂದಿದೆ ಎನ್ನಲಾಗಿದೆ.

ಒಟ್ನಲ್ಲಿ ಈ ಬಾರಿ ಕಾಂಗ್ರೆಸ್​ ಹಿರಿಯ ನಾಯಕರ ಆರೋಪ ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್​​ ಸಿದ್ದರಾಮಯ್ಯ​ ಬದಲಿಗೆ ಬೇರೆ ಯಾರನ್ನಾದರೂ ವಿಪಕ್ಷ ನಾಯಕರನ್ನು ಮಾಡಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಬಾರಿ ಸಿದ್ದರಾಮಯ್ಯಗೆ ವಿರೋಧ ಪಕ್ಷದ ಸ್ಥಾನ ತಪ್ಪುವುದು ಬಹುತೇಕ ಖಚಿತ ಎಂಬ ಚರ್ಚೆಯೂ ನಡೆಯುತ್ತಿದೆ.

Comments are closed.