
ಬೆಂಗಳೂರು(ಸೆ.07): ನೋಟು ಅಮಾನ್ಯೀಕರಣದ ವೇಳೆ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ನಡೆಸಿದ್ದಾರೆ ಎನ್ನಲಾದ ವ್ಯವಹಾರಗಳ ಮೇಲೆ ಇಡಿ ಹದ್ದಿನ ಕಣ್ಣಿಟ್ಟಿದೆ. ಕಾಂಗ್ರೆಸ್ನ ಟ್ರಬಲ್ ಶೂಟರ್ ನೋಟ್ ಬ್ಯಾನ್ ಸಂದರ್ಭದಲ್ಲಿ 2 ಸಾವಿರ ಮುಖಬೆಲೆ ನೋಟುಗಳ ಅದಲು ಬದಲು ಮಾಡಿದ್ದಾರೆ ಎಂದು ಆರೋಪ ಹೊರಿಸಲು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮುಂದಾಗಿದ್ದಾರೆ. ಈ ಸಂಬಂಧ ಈಗಾಗಲೇ ದಾಖಲೆ ಕಲೆ ಹಾಕಿರುವ ಅಧಿಕಾರಿಗಳು, ಡಿ.ಕೆ ಶಿವಕುಮಾರ್ ವಿಚಾರಣೆಯನ್ನು ತೀವ್ರಗೊಳಿಸಲಿದ್ದಾರೆ. ಅಲ್ಲದೇ ಡಿಕೆಶಿ ನಡೆಸುತ್ತಿರುವ ರಿಯಲ್ ಎಸ್ಟೇಟ್ ಸೇರಿದಂತೆ ಹಲವು ವ್ಯವಹಾರಗಳ ಬಗ್ಗೆಯೂ ತನಿಖೆ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವ ಡಿ.ಕೆ ಶಿವಕುಮಾರ್ ನೋಟ್ ಬ್ಯಾನ್ ಸಂದರ್ಭದಲ್ಲಿ ಕೋಟ್ಯಂತರ ಕಪ್ಪು ಹಣವನ್ನು ವೈಟ್ ಮಾಡಿದ್ದನ್ನೂ ಇಡಿ ಪತ್ತೆ ಹಚ್ಚಿತ್ತು ಎನ್ನಲಾಗಿದೆ. ಬ್ಯಾನ್ ಆದ ಹಳೇ ನೋಟಿನಲ್ಲೇ ಕರೆಂಟ್ ಬಿಲ್ ಕಟ್ಟಲು, ಡೆಪಾಸಿಟ್ ಇಡಲು ಆಗ ಇಂಧನ ಸಚಿವರಾಗಿದ್ದ ಡಿಕೆ ಶಿವಕುಮಾರ್ ಅವರು ಗ್ರಾಹಕರಿಗೆ ಅವಕಾಶ ಕಲ್ಪಿಸಿದ್ದರು. ಸಾರ್ವಜನಿಕರ ಹಿತದೃಷ್ಟಿಯಿಂದ ತಾನು ಆ ಕ್ರಮ ಕೈಗೊಂಡೆ ಎಂದು ಡಿಕೆಶಿ ಹೇಳಿದ್ದರೂ ಇಡಿ ಮೂಗಿಗೆ ಬೇರೆಯೇ ವಾಸನೆ ಬಡಿದಿದೆ. ಆ ಸಂದರ್ಭದಲ್ಲಿ ಕೋಟ್ಯಂತರ ಕಪ್ಪು ಹಣವನ್ನು ವೈಟ್ ಮಾಡಲಾಗಿದೆ ಎಂಬುದು ಜಾರಿ ನಿರ್ದೇಶನಾಲಯದ ಅನುಮಾನ. ಹೀಗಾಗಿ ಈ ಬಗ್ಗೆಯೂ ಇಡಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಲಿದ್ದು, ಕಾಂಗ್ರೆಸ್ನ ಟ್ರಬಲ್ ಶೂಟರ್ಗೆ ಮತ್ತೊಂದು ಸಂಕಷ್ಟವೂ ತಪ್ಪಿದ್ದಲ್ಲ ಎನ್ನುವುದು ಮಾತ್ರ ಸತ್ಯ.
ಅಕ್ರಮ ಹಣಕ್ಕೆ ಸಂಬಂಧಿಸಿದ ಅವ್ಯವಹಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಈಗಾಗಲೇ ಡಿಕೆ ಶಿವಕುಮಾರ್ರನ್ನು ಬಂಧಿಸಿದೆ. ಕಳೆದ ನಾಲ್ಕು ದಿನಗಳಿಂದ ಇಡಿ ಅಧಿಕಾರಿಗಳು ಡಿಕೆ ಶಿವಕಮಾರ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಇಡಿ ತನಿಖೆಗೆ ಅವರು ಹೆಚ್ಚೂಕಡಿಮೆ ಎದೆಗುಂದಿದ್ದಾರೆ. ತಾನು ಇಡಿ ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದಾರೆ. ಆದರೂ ತನಿಖೆಗೆ ಸರಿಯಾದ ಸಹಕಾರ ನೀಡುತ್ತಿಲ್ಲ ಎಂದು ಕಾರಣವೊಡ್ಡಿ ಜಾರಿ ನಿರ್ದೇಶನಾಲಯದವರು ಡಿಕೆಶಿಯನ್ನು ಬಂಧಿಸಿರುವುದು ಖಂಡನೀಯ ಎಂದು ಕಾಂಗ್ರೆಸ್ ಸೇರಿದಂತೆ ಕೇಂದ್ರ ವಿಪಕ್ಷಗಳು ಕಿಡಿಕಾರಿವೆ.
ತಾಯಿ, ಪತ್ನಿ ಸೇರಿ ಇತರರ ಹೆಸರಲ್ಲಿ ಶಿವಕುಮಾರ್ ಬೇನಾಮಿ ಆಸ್ತಿ ಮಾಡಿರುವುದು ಕಂಡು ಬಂದಿದೆ. ಈ ಬಗ್ಗೆ ಐಟಿ ಅಧಿಕಾರಿಗಳ ವಿಚಾರಣೆ ಮುಂದುವರಿದಿದೆ. ಐಟಿ ಇಲಾಖೆ ತನಿಖೆ ಮುಗಿದ ಬಳಿಕ ಸರ್ಕಾರ ಅಧಿಕೃತವಾಗಿ ಮುಟ್ಟಗೋಲು ಹಾಕಿಕೊಳ್ಳಲಿದೆ. ಈ ಹಿಂದೆ 2017ರ ಆಗಸ್ಟ್ನಲ್ಲಿ ಐಟಿ ಅಧಿಕಾರಿಗಳು ಶಿವಕುಮಾರ್ ಮೇಲೆ ನಡೆಸಿದ ದಾಳಿ ವೇಳೆ ಸುಮಾರು 400 ಕೋಟಿ ರೂ.ಗೂ ಅಧಿಕ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿತ್ತು. ಆ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿದಾಗ ಹಲವರ ಹೆಸರಲ್ಲಿ ಆಸ್ತಿ ಮಾಡಿರುವುದು ಬೆಳಕಿಗೆ ಬಂದಿತ್ತು ಎನ್ನುತ್ತಿವೆ ಮೂಲಗಳು.
ಐಟಿ ಮುಂದೆ ಡಿಕೆಶಿ ಅಮ್ಮ ಹೇಳಿದ್ದೇನು?: ನನ್ನ ಹೆಸರಿನಲ್ಲಿ 60 ಎಕರೆ ಕೃಷಿ ಜಮೀನಿದೆ. ಆಲಹಳ್ಳಿ, ಕೋಡಿಹಳ್ಳಿ, ಬಿಡದಿ, ಹೊಸಕೆರೆಹಳ್ಳಿ, ಕೋಗಿಲು, ದೊಡ್ಡಾಲಹಳ್ಳಿ, ಕನಕಪುರ, ಬಿ.ಎಂ ಕಾವಲ್, ಉಯ್ಯಂಬನಹಳ್ಳಿಯಲ್ಲಿ ಜಮೀನು ಹೊಂದಿದ್ದೇನೆ. 1 ಎಕರೆಗೆ 30 ಸಾವಿರದಿಂದ 1 ಲಕ್ಷ ಲಾಭ ಬರುತ್ತಿತ್ತು. ಇದೇ ಲಾಭದಿಂದಲೇ ಹಿಂದೆ ಜಮೀನು ಖರೀದಿಸಿದ್ದೆ. ಆದರೆ ಯಾವುದೇ ಬ್ಯಾಂಕ್ ವಹಿವಾಟಿನ ಮಾಹಿತಿ ಇಲ್ಲ ಎಂದಿದ್ದಾರೆ.
ಡಿಕೆಶಿ ಬೇನಾಮಿ ಗೇಮ್: ಮಾಜಿ ಸಚಿವ ಡಿ.ಕೆ ಶಿವಕುಮಾರ್ 2013 ರಲ್ಲಿ 850 ಕೋಟಿ ಮೌಲ್ಯದ ಆಸ್ತಿ ತೋರಿಸಿದ್ದರು. ಬಳಿಕ ಪ್ರತಿ ವರ್ಷವೂ ಶೇ. 230ರಷ್ಟು ಆಸ್ತಿ ಏರಿಕೆ ಆಗ್ತಾ ಇತ್ತು ಎಂದು ಹೇಳಲಾಗುತ್ತಿತ್ತು. ಆದರೆ, ಕಾಂಗ್ರೆಸ್ ಕಟ್ಟಾಳು ಬೇನಾಮಿ ಆಸ್ತಿ ಮಾಡಿ ಕುಟುಂಬಸ್ಥರಿಗೆ ಗಿಫ್ಟ್ ಡೀಡ್ ಕೊಟ್ಟಿರುವುದಾಗಿ ಬೆಳಕಿಗೆ ಬಂದಿದೆ.
ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆ: ಕೇಂದ್ರ ಸರ್ಕಾರ 2016ರಲ್ಲಿ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆ ಜಾರಿಗೆ ತಂದಿತ್ತು. ಬೇನಾಮಿ ಆಸ್ತಿ ಹೊಂದಿದ್ದರೆ ಅಂಥವರಿಗೆ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆ ಪ್ರಕಾರ ಭಾರಿ ಪ್ರಮಾಣದ ದಂಡ ಹಾಗೂ ಶಿಕ್ಷೆ ವಿಧಿಸಲಾಗುತ್ತದೆ. ಈ ಕಾಯ್ದೆ ಪ್ರಕಾರ 1 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವುದು ಪತ್ತೆಯಾದರೆ 7 ವರ್ಷ ಜೈಲು ಶಿಕ್ಷೆ ಮತ್ತು 25 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಅಲ್ಲದೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವಿದೆ. ಬೇನಾಮಿ ಆಸ್ತಿ ಬಗ್ಗೆ ತಪ್ಪು ಮಾಹಿತಿ ಕೊಟ್ಟಿರುವುದು ಕಂಡು ಬಂದರೆ ಪ್ರಸ್ತುತ ಆ ಆಸ್ತಿಗೆ ಇರುವ ಬೆಲೆಯ ಶೇ.10 ದಂಡ ವಿಧಿಸಿ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
Comments are closed.