ಕರ್ನಾಟಕ

ಅನರ್ಹರ ಶಾಸಕರ ಮುಂದಿನ ನಡೆಯೇನು?

Pinterest LinkedIn Tumblr


ಬೆಂಗಳೂರು(ಸೆ.07): ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್​​-ಜೆಡಿಎಸ್​​ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಅತೃಪ್ತರು, ತಮ್ಮ ಶಾಸಕ ಸ್ಥಾನವನ್ನು ಉಳಿಸಲು ಭಾರೀ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ ಹಿಂದಿನ ಸ್ಪೀಕರ್​​​ ರಮೇಶ್​​ ಕುಮಾರ್​​​ ಅನರ್ಹ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ. ಕಳೆದ ಎರಡು ತಿಂಗಳಿನಿಂದ ವಿಚಾರಣೆ ನಡೆಯುತ್ತಿದೆಯಾದರೂ, ಇಲ್ಲಿಯವರೆಗೂ ತಮಗೆ ನ್ಯಾಯ ಸಿಗಲಿದೆಯಾ ಎಂಬ ಭರವಸೆ ಮಾತ್ರ ಅನರ್ಹ ಶಾಸಕರಿಗಿಲ್ಲ. ಇತ್ತ ಸ್ಪೀಕರ್​​ ಅನರ್ಹ ಆದೇಶದಿಂದ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಕೇಂದ್ರ ಚುನಾವಣೆ ಆಯೋಗವೂ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಅತ್ತ ಸುಪ್ರೀಂಕೋರ್ಟ್​ ಇಲ್ಲಿಯವರೆಗೂ ಯಾವುದೇ ಅಂತಿಮ ತೀರ್ಪು ನೀಡದೆ, ವಿಚಾರಣೆ ಮುಂದೂಡುತ್ತಿದೆ. ಇದರಿಂದಾಗಿ ತಮ್ಮ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಅನರ್ಹ ಶಾಸಕರು ಕಂಗಲಾಗಿದ್ದಾರೆ.

ಹೌದು, ಸ್ಪೀಕರ್​​ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೊರೆ ಹೋಗಿರುವ ಅರ್ಜಿ ವಿಚಾರಣೆಗೆ ಇನ್ನೂ ಸಮಯ ನಿಗದಿಯಾಗಿಲ್ಲ. ಕೇಂದ್ರ ಚುನಾವಣೆ ಆಯೋಗವೂ ಸದ್ಯದಲ್ಲೇ ನಡೆಯಲಿರುವ ಉಪಚುನಾವಣೆಗೆ ದಿನಾಂಕ ನಿಗದಿ ಮಾಡಲು ಮುಂದಾಗಿದೆ. ಈ ಮಧ್ಯೆ ತಮ್ಮ ರಾಜಕೀಯ ಭವಷ್ಯ ಏನಾಗಲಿದೆ ಎಂಬುದರ ಬಗ್ಗೆ 17 ಮಂದಿ ಅನರ್ಹರು ಆತಂಕಕ್ಕೊಳಗಾಗಿದ್ದಾರೆ.

ಇನ್ನು ಪಕ್ಷದ್ರೋಹ ಎಸಗಿ ರಾಜೀನಾಮೆ ನೀಡಿದ ಈ ಅನರ್ಹರನ್ನು ಉಪಚುನಾವಣೆಯಲ್ಲಿ ಸೋಲಿಸಲು ಕಾಂಗ್ರೆಸ್​-ಜೆಡಿಎಸ್​​ ನಾಯಕರು ರಣತಂತ್ರ ಹೆಣೆಯುತ್ತಿದ್ದಾರೆ. ಹೇಗಾದರೂ ಸರಿಯೇ ಈ 17 ಮಂದಿ ಅನರ್ಹ ಶಾಸಕರು ಮತ್ತೆ ಚುನಾವಣೆಗೆ ನಿಂತಲ್ಲಿ ಸೋಲಿಸಿಯೇ ತೀರುತ್ತೇವೆ ಎಂದು ಶಪಥಗೈದಿದ್ದಾರೆ.

ಸುಪ್ರೀಂಕೋರ್ಟ್​​ ರಮೇಶ್ ಕುಮಾರ್ ಅವರ ಅನರ್ಹ ಆದೇಶವನ್ನು ಎತ್ತಿ ಹಿಡಿಯದೇ ಮರು ಚುನಾವಣೆಗೆ ಅವಕಾಶ ನೀಡಿದರೇ, 17 ಮಂದಿಯ ಮುಂದಿನ ನಡೆಯೇನು? ಎಂಬ ಪ್ರಶ್ನೆ ಕಾಡುತ್ತಿದೆ. ಒಂದು ವೇಳೆ ಹೀಗಾಗದಲ್ಲಿ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಳ್ಳುತ್ತದೆ ಎಂಬ ಆತಂಕವೂ ಇದೆ.

ಇನ್ನೊಂದೆಡೆ ಅನರ್ಹ ಶಾಸಕರ ಪರವಾಗಿ ತೀರ್ಪು ಬಂದಲ್ಲಿ ರಾಜೀನಾಮೆ ಪತ್ರವನ್ನು ಇಂದಿನ ಸ್ಪೀಕರ್​​​ ಮರು ಪರಿಶೀಲನೆ ಮಾಡಲಿದ್ದಾರೆ. ಅಲ್ಲದೇ 17 ಮಂದಿಯ ಶಾಸಕ ಸ್ಥಾನ ಉಳಿಯಲಿದ್ದು, ಸಿಎಂ ಬಿ.ಎಸ್​​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೂ ಯಾವುದೇ ಕಂಟಕ ಎದುರಾಗುದಿಲ್ಲ.

ಸದ್ಯಕ್ಕೀಗ ಸುಪ್ರೀಂಕೋರ್ಟ್​ ಈ ಪ್ರಕರಣದಲ್ಲಿ ಯಾವ ರೀತಿಯ ತೀರ್ಪು ನೀಡಲಿದೆ ಎಂಬುದು ಕಾದು ನೋಡಬೇಕಿದೆ. ಈ ತೀರ್ಪಿನ ಆಧಾರದ ಮೇರೆಗೆ ಅನರ್ಹ ಶಾಸಕರ ರಾಜಕೀಯ ಭವಿಷ್ಯ ನಿಂತಿದೆ ಎನ್ನುವುದು ತಜ್ಞರ ಅಭಿಪ್ರಾಯ.

Comments are closed.