
ಕಾರವಾರ: ಕೈಗಾ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆಗೆ ತೆರಳಿದ್ದ ವೇಳೆ ಕಾಣೆಯಾಗಿದ್ದ ಡಿವೈಎಸ್ಪಿ ಶಂಕರ್ ಮರಿಯಾಳ್ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿ ರವಿಚಂದ್ರ ಅವರು ಸುರಕ್ಷಿತವಾಗಿ ವಾಪಾಸಾಗಿದ್ದಾರೆ.
ದೆಹಲಿಯಿಂದ ಬಂದ ಮಾಹಿತಿ ಮೇರೆಗೆ ಶಂಕರ್ ಹಾಗೂ ರವಿಚಂದ್ರ ಕದ್ರಾ ಭಾಗದ ಬಾರೆಗೆ ವಾಹನದಲ್ಲಿ ಕಾರ್ಯಾಚರಣೆಗೆ ತೆರಳಿದ್ದರು. ಇವರಿಗೆ 10 ಸಿಬ್ಬಂದಿ ಸಾತ್ ನೀಡಿದ್ದರು. ಈ ವೇಳೆ ಕಾಡು ಪ್ರಾಣಿಯೊಂದು ದಾಳಿ ಮಾಡಿತ್ತು. ದಾಳಿಯಿಂದ ತಪ್ಪಿಸಿಕೊಳ್ಳಲು ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಓಡಿದ್ದರು. ಈ ವೇಳೆ ಅಧಿಕಾರಿ ಹಾಗೂ ಸಿಬ್ಬಂದಿ ದಿಕ್ಕಾಪಾಲಾಗಿ ಓಡಿದ್ದಾರೆ. ಆಗ ಶಂಕರ್ ಹಾಗೂ ರವಿಚಂದ್ರಗೆ ದಾರಿ ತಪ್ಪಿದೆ.
ರಾತ್ರಿಯಿಡಿ ಶಂಕರ್- ರವಿಚಂದ್ರ ಕಾಡಿನಲ್ಲೇ ಉಳಿದುಕೊಂಡಿದ್ದರು. ನಿನ್ನೆಯಿಡೀ ಪೊಲೀಸ್ ಸಿಬ್ಬಂದಿ ಇವರಿಗಾಗಿ ಹುಡುಕಾಟ ನಡೆಸಿದ್ದಾರೆ. ಇಂದು ಮುಂಜಾನೆ ಇಬ್ಬರೂ ಪತ್ತೆಯಾಗಿದ್ದು, ಸುರಕ್ಷಿತವಾಗಿ ವಾಪಾಸಾಗಿದ್ದಾರೆ. ಅಂದಹಾಗೆ, ಈ ಅಧಿಕಾರಿಗಳು ಯಾವ ಕಾರ್ಯಾಚರಣೆಗೆ ತೆರಳಿದ್ದರು ಎನ್ನುವ ವಿಚಾರ ಗುಪ್ತವಾಗಿದ್ದು, ಆ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
Comments are closed.