
ಬೆಂಗಳೂರು (ಆ.31): ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಶಿಥಿಲಗೊಂಡಿದ್ದ ಸೇತುವೆ ಮೇಲೆ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಹತ್ತಾರು ಬೆಂಗಾವಲು ವಾಹನ ಸಂಚರಿಸಿದ್ದು, ಅಪಾಯವೊಂದು ತಪ್ಪಿದೆ.
ಜಿಲ್ಲೆಯ ಸವಣೂರು ತಾಲ್ಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮಕ್ಕೆ ಪ್ರವಾಹ ಪರಿಶೀಲನೆ ಭೇಟಿ ನೀಡಿದ ಅವರು, ವರದಾ ನದಿ ಸೇತುವೆ ಮೇಲೆ ಸಂಚಾರಿಸಿದ್ದಾರೆ. ಆದರೆ, ಈ ಸೇತುವೆ ಸಂಚಾರಕ್ಕೆ ಯೋಗ್ಯವಲ್ಲ ಎಂದು ಲೋಕೋಪಯೋಗಿ ಇಲಾಖೆ ಬೋರ್ಡ್ ಹಾಕಿದ್ದರೂ ಅಧಿಕಾರಿಗಳು ಈ ಸೇತುವೆ ಮೇಲೆ ಸಿಎಂ ಕಾರಿಗೆ ಸಂಚರಿಸಲು ಅನುಮತಿ ನೀಡಿದ್ದಾರೆ. ಮೊದಲೇ ಬ್ರಿಟಿಷರ ಕಾಲದ ಸೇತುವೆ ಇದಾಗಿದ್ದು, ಪ್ರವಾಹದಿಂದಾಗಿ ಸೇತುವೆ ಇನ್ನಷ್ಟು ದುರ್ಬಲಗೊಂಡಿದೆ. ಅಂತಹ ಸೇತುವೆ ಮೇಲೆ ಸಂಚಾರಿಸುವ ಮೂಲಕ ಸಿಎಂ ಅವರನ್ನು ಅಪಾಯಕ್ಕೆ ಒಡ್ಡಿದ್ದಾರೆ.
ಶಾಶ್ವತ ಪರಿಹಾರದ ಭರವಸೆ:
ಗ್ರಾಮದ ಪ್ರವಾಹ ಸಂತ್ರಸ್ತರ ಅಹವಾಲು ಆಲಿಸಿದ ಸಿಎಂ ಜನರ ಸಮಸ್ಯೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ವರದಾ ನದಿ ಪ್ರವಾಹದಿಂದ ಸ್ಥಳಾಂತರಗೊಂಡಿರುವ ಸಂತ್ರಸ್ತರಿಗೆ ಉತ್ತಮ ಮನೆ ನಿರ್ಮಿಸಲಾಗುವುದು. ಉತ್ತಮ ಜಾಗ ನೋಡಿ ಖರೀದಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಶಾಶ್ವತ ಪರಿಹಾರ ನೀಡಲಾಗುವುದು. ಎಲ್ಲಾ ಸಮಸ್ಯೆಗಳನ್ನೂ ಶೀಘ್ರ ಬಗೆಹರಿಸುತ್ತೇವೆ ಎಂದರು.
ಸಮಗ್ರ ವರದಿ ಬಳಿಕ ಬೆಳೆನಾಶಕ್ಕೂ ಪರಿಹಾರ ನೀಡಲಾಗುವುದು. ಪ್ರವಾಹ ಕುರಿತು ಈಗಾಗಲೇ ಕೇಂದ್ರದ ತಂಡ ಬಂದು ಪರಿಶೀಲಿಸಿ ಹೋಗಿದೆ. ಕೇಂದ್ರ ಸರ್ಕಾರದಿಂದ ಹೆಚ್ಚು ನಿರೀಕ್ಷೆ ಇದೆ. ನೆರೆಹಾನಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
Comments are closed.