
ಬೆಂಗಳೂರು(ಆ. 30): ಸಂಪುಟ ರಚನೆ, ಖಾತೆ ಹಂಚಿಕೆ, ಪಕ್ಷಾಡಳಿತ ಇತ್ಯಾದಿ ವಿಚಾರಗಳಲ್ಲಿ ಬಿಎಸ್ ಯಡಿಯೂರಪ್ಪ ಅವರಿಗೆ ಮೂಗುದಾರ ಹಾಕಿದ್ದ ಬಿಜೆಪಿ ಹೈಕಮಾಂಡ್ ಇದೀಗ ಸರ್ಕಾರದ ಆಡಳಿತದಲ್ಲೂ ಹಿಡಿತ ಸಾಧಿಸಲು ಮುಂದಾಗಿದೆ. ಬಿಎಸ್ವೈ ಅವರಿಂದ ಭ್ರಷ್ಟಚಾರ ರಹಿತ ಸ್ವಚ್ಛ ಆಡಳಿತ ಬರುವಂತೆ ಹೈಕಮಾಂಡ್ ಮಾಸ್ಟರ್ ಪ್ಲಾನ್ ಮಾಡಿದೆ ಎಂಬ ಸುದ್ದಿ ಇದೆ.
ಭಾರತೀಯ ಜನತಾ ಪಕ್ಷಕ್ಕೆ ಈ ರಾಜ್ಯದಲ್ಲಿ ಎರಡನೇ ಬಾರಿಗೆ ಆಡಳಿತದ ಅವಕಾಶ ಪಡೆದಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಜನರಿಗೆ ತಪ್ಪು ಅಭಿಪ್ರಾಯ ಹೋಗಬಾರದು. ಜನರು ಮೆಚ್ಚುವಂಥ ಆಡಳಿತವನ್ನು ಸರಕಾರ ನೀಡಬೇಕು. ಜನರೇ ಮೊತ್ತೊಮ್ಮೆ ವೋಟ್ ಕೊಟ್ಟು ಗೆಲ್ಲಿಸುವಂಥ ಆಡಳಿತ ಕೊಡಬೇಕು ಎಂಬುದು ಬಿಜೆಪಿ ಹೈಕಮಾಂಡ್ನ ಲೆಕ್ಕಾಚಾರವಂತೆ.
ಬಿಎಸ್ವೈಗೆ ಅಂಕೆ ಹಾಕಲು ಬಿಜೆಪಿ ಹೈಕಮಾಂಡ್ಗೆ ಪ್ರಬಲ ಕಾರಣಗಳೂ ಇವೆ ಎನ್ನಲಾಗಿದೆ. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ವರ್ಗಾಔಣೆ ದಂಧೆಗೆ ಇಳಿದಿದ್ದಾರೆ. ಆಯಕಟ್ಟಿನ ಜಾಗಗಳಿಗೆ ಕೋಟಿಗಳಿಗೆ ಲೆಕ್ಕವೇ ಇಲ್ಲ ಎಂಬಿತ್ಯಾದಿ ಮಾಹಿತಿಗಳು ಹೈಕಮಾಂಡ್ನವರಿಗೆ ಮುಟ್ಟಿದೆಯಂತೆ. ಈ ಹಿನ್ನೆಲೆಯಲ್ಲಿ ವರಿಷ್ಠರು ಬಹಳ ಗಂಭೀರವಾಗಿದ್ದು, ರಾಜ್ಯ ಬಿಜೆಪಿ ಸರ್ಕಾರದಿಂದ ಯಾವುದೇ ಭ್ರಷ್ಟಾಚಾರ ನಡೆಯದಂತೆ ನೋಡಿಕೊಳ್ಳುವುದಕ್ಕೆ ಆದ್ಯತೆ ಕೊಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರೀ ವಿರೋಧಿ. ತಾನು ತಿನ್ನಲ್ಲ, ಬೇರೆಯವರನ್ನೂ ತಿನ್ನೋಕೆ ಬಿಡಲ್ಲ. ರಾಜ್ಯದಲ್ಲೂ ಇದನ್ನೇ ನಿರೀಕ್ಷಿಸುತ್ತೇವೆ. ಸಿಎಂ ಬಿಎಸ್ವೈ ಅವರು ತಾವೂ ತಿನ್ನಬಾರದು, ಕುಟುಂಬದವರಿಗೂ ತಿನ್ನೋಕೆ ಬಿಡಬಾರದು. ಸಂಪುಟದಲ್ಲಿರುವ ಯಾರೂ ತಿನ್ನದಂತೆ ನೋಡಿಕೊಳ್ಳಬೇಕು. ಭ್ರಷ್ಟಾಚಾರ ರಹಿತ, ಜನಪರ, ಸ್ವಚ್ಛ ಆಡಳಿತ ನೀಡಬೇಕು. ಮುಂದೆ ಚುನಾವಣೆಗೆ ಹೋದರೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಸಿಗಬೇಕು ಎಂಬುದು ಹೈಕಮಾಂಡ್ ಉದ್ದೇಶವೆನ್ನಲಾಗಿದೆ.
ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲಾನ್ ಮಾಡಿದೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದಂತಹ ಸಮನ್ವಯ ಸಮಿತಿಯನ್ನು ಬಿಎಸ್ವೈ ಸರ್ಕಾರದಲ್ಲೂ ರಚಿಸಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ. ಆ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕೋರ್ ಕಮಿಟಿ ರಚನೆ ಆಗುವ ಸಾಧ್ಯತೆ ಇದೆ. ಈ ಸಮಿತಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ಜೊತೆಗೆ ಮುಖ್ಯಮಂತ್ರಿ, ಹಿರಿಯ ಸಚಿವರು, ಬಿಜೆಪಿಯ ಹಿರಿಯ ನಾಯಕರು ಇರಲಿದ್ಧಾರೆ.
ಸರಕಾರ ಯಾವ ರೀತಿ ನಡೆಯಬೇಕು ಎಂಬ ಸಲಹೆಗಳನ್ನು ನೀಡುವುದು. ಹೈಕಮಾಂಡ್ ನಿರ್ದೇಶನಗಳನ್ನು ಮುಖ್ಯಮಂತ್ರಿಗೆ ತಲುಪಿಸುವುದು ಈ ಸಮಿತಿಯ ಪ್ರಮುಖ ಉದ್ದೇಶವಾಗಿದೆ ಎನ್ನಲಾಗಿದೆ.
Comments are closed.