
ಮೈಸೂರು: ಮೈತ್ರಿ ಸರ್ಕಾರ ಪತನಗೊಂಡ ಬಳಿದ ಅಧಿಕಾರ ಹಿಡಿದಿರುವ ಬಿಜೆಪಿ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಚಾಮರಾಜನಗರದ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರು ಈ ವಿದ್ಯಮಾನಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದಲ್ಲಿ ಮೂರು ಉಪಮುಖ್ಯಮಂತ್ರಿಗಳ ನೇಮಕವಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಇವತ್ತಿನ ಪರಿಸ್ಥಿತಿಯಲ್ಲಿ ಉಪಮುಖ್ಯಮಂತ್ರಿಗಳನ್ನೇ ನೇಮಕ ಮಾಡಬಾರದಿತ್ತು. ಹೈಕಮಾಂಡ್ ತೆಗೆದುಕೊಂಡ ನಿರ್ಧಾರ ಸರಿಯಿಲ್ಲ. ಇದಕ್ಕೆ ನನ್ನ ವೈಯಕ್ತಿಕ ವಿರೋಧವಿದೆ. ರಾಜ್ಯದ ನಾಯಕರೂ ಕೂಡ ಹೈಕಮಾಂಡ್ಗೆ ಸರಿಯಾಗಿ ಮಾಹಿತಿ ನೀಡಬೇಕಿತ್ತು. ಮೂರು ಡಿಸಿಎಂಗಳು ಯಾಕ್ರೀ ಬೇಕು? ಎಂದು ಮಾಜಿ ಕಾಂಗ್ರೆಸ್ ಮುಖಂಡರೂ ಆದ ಅವರು ಖಾರವಾಗಿ ಪ್ರಶ್ನಿಸಿದರು.
ಬಿಜೆಪಿಯೊಳಗೆ ನಡೆಯುತ್ತಿರುವ ಆಂತರಿಕ ಕಲಹದ ಬಗ್ಗೆ ವಿಷಾದಿಸಿದ ಅವರು, ನಿಮಗೇನು 113 ಸ್ಥಾನ ಇತ್ತಾ? ಆ 17 ಶಾಸಕರು ಮೈತ್ರಿ ಸರ್ಕಾರದಿಂದ ಹೊರಬಂದಿದ್ದಕ್ಕೆ ತಾನೇ ನೀವು ಸರ್ಕಾರ ಮಾಡಿದ್ದು. ಯಾಕ್ರೀ ಈ ಥರ ಕಚ್ಚಾಡ್ತೀರಾ? ಉನ್ನತ ಖಾತೆ ಬೇಕು ಅಂತ ಕಚ್ಚಾಡೋದು ಸರಿಯಲ್ಲ. ಮೊದಲು ಹೊಂದಾಣಿಕೆ ಮಾಡಿಕೊಂಡು ಹೋಗ್ರೀ. ಈ ರೀತಿ ಕಚ್ಚಾಟದಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತಿದೆ ಎಂದು ವ್ಯಗ್ರಗೊಂಡರು.
ತಮ್ಮ ಪಕ್ಷಗಳನ್ನ ಬಿಟ್ಟು ಬಂದಿರುವ ಅನರ್ಹ ಶಾಸಕರ ಭವಿಷ್ಯದ ಬಗ್ಗೆ ನಿಮಗೆ ಗಮನ ಬೇಡವಾ? ಅವರು ಇಲ್ಲದಿದ್ದರೆ ನಿಮಗೆ ಸರ್ಕಾರ ರಚಿಸಲು ಸಾಧ್ಯವಾಗುತ್ತಿತ್ತಾ? ಇದನ್ನು ನೆನಪಿಟ್ಟುಕೊಳ್ಳಿ ಎಂದು ಬಿಜೆಪಿಯ ನಾಯಕರು ಮತ್ತು ಸಚಿವರಿಗೆ ವಿ. ಶ್ರೀನಿವಾಸ ಪ್ರಸಾದ್ ತಿಳಿಹೇಳಿದರು.
ಹಾಗೆಯೇ, ಸಿದ್ದರಾಮಯ್ಯ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕೂಡ ಅತೃಪ್ತ ಶಾಸಕನೇ. ಸಿಎಂಗೆ ಕೆಲಸ ಮಾಡಿಕೊಡಿ ಎಂದು 20 ಪತ್ರ ಬರೆದಿದ್ದರೂ ಒಂದೂ ಕೆಲಸವೂ ಮಾಡಿಕೊಡಲಿಲ್ಲ. ಇದನ್ನು ಸ್ವತಃ ಸಿದ್ರಾಮಯ್ಯರೇ ಹೇಳಿಕೊಂಡಿದ್ದಾರೆ. ಹಾಗಾಗಿ ಅವರೂ ಕೂಡ ಅತೃಪ್ತ ಶಾಸಕ ಎಂದು ತಮಾಷೆ ಮಾಡಿದರು.
Comments are closed.