ಕರಾವಳಿ

ಕೋಡಿ, ಹಳೆ‌ಅಳಿವೆ ಭಾಗದಲ್ಲಿ ತೀವೃಗೊಂಡ ಕಡಲ್ಕೊರೆತ: ಪಂಜರ ಮೀನು ಕೃಷಿಗೂ ವ್ಯಾಪಕ ಹಾನಿ

Pinterest LinkedIn Tumblr

ಕುಂದಾಪುರ: ಕೋಟೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ‌ಅಳಿವೆ ಹಾಗೂ ಕುಂದಾಪುರ ಪುರಸಭಾ ವ್ಯಾಪ್ತಿಯ ಕೋಡಿಯ ಎಂ ಕೋಡಿ, ಮದ್ಯ ಕೋಡಿ, ಕೋಡಿ ತಲೆ ಪ್ರದೇಶದಲ್ಲಿ ತೀವ್ರ ಕಡಲ ಕೊರೆತ ಸಂಭವಿಸಿದ್ದು ಕಳೆದ ಮೂರ್ನಾಲ್ಕು ದಿನಗಳಿಂದ ನಿತ್ಯ ಅಲೆಗಳ ಅಬ್ಬರವು ಹೆಚ್ಚಿ ಮನೆ ಅಂಗಳಕ್ಕೂ ಸಮುದ್ರ ನೀರು ನುಗ್ಗಿದ್ದು, ಪರಿಸರ ವಾಸಿಗಳಲ್ಲಿ ಆತಂಕ ಮೂಡಿದೆ.

ಕಳೆದ ಮೂರು ದಿನದಿಂದ ಕೋಡಿ, ಹಳೆ‌ಅಳಿವೆ, ಕಿನಾರೆ ಪರಿಸರದಲ್ಲಿ ಕಡಲ ಅಬ್ಬರ ಜಾಸ್ತಿಯಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಅಲೆಗಳು ಉಕ್ಕಿ ಸಮುದ್ರ ತೀರದಲ್ಲಿ ಹಾಕಿದ ತಡೆ ಗೋಡೆ ದಾಟಿ ಮನೆ ಅಂಗಳಕ್ಕೆ ಅಪ್ಪಳಿಸಿದೆ. ತಡೆಗೋಡೆ ಕಲ್ಲು ಸಮುದ್ರಕ್ಕೆ ಜಾರಿಕೊಂಡಿದೆ. ಅಲೆ ರಭಸಕ್ಕೆ ತಡೆ ಗೋಡೆ ಕಲ್ಲಿನ ಸಂಧುಗಳಲ್ಲಿ ನೀರು ನುಗ್ಗಿ ಡಾಮರ್ ರಸ್ತೆ ಒಳಭಾಗದಲ್ಲಿ ಟೊಳ್ಳು ಕೊರೆದಿದ್ದು, ರಸ್ತೆ ಕೂಡಾ ಅಪಾಯದಲ್ಲಿದೆ. ಒಂದು ಕಡೆ ಭೂಮಿ ಕೂಡಾ ಹೊಂಡ ಬಿದ್ದು, ತಡೆಗೋಡೆ ಕಲ್ಲು ಮಣ್ಣಲ್ಲಿ ಹೂತು ಹೋಗಿದೆ. ಎಂ.ಕೋಡಿ, ಮದ್ಯ ಕೋಡಿ ಹಾಗೂ ಕೋಡಿ ತಲೆ, ಹಾಯ್ಗುಳಿ ಸ್ಟಾಪ್ ಎಂಬಲ್ಲಿ ದೈತ್ಯ ಅಲೆಗಳ ಅಬ್ಬರವಿದ್ದು, ತಡೆಗೋಡೆಗೆ ಹಾಕಿದ ಕಲ್ಲುಗಳು ಸಮುದ್ರದ ನೀರಿನಲ್ಲಿ ಕೊಚ್ಚಿ ಕಡಲೊಡಲು ಸೇರುತ್ತಿದೆ. ಎಂ ಕೋಡಿ ಪ್ರದೇಶದಲ್ಲಿ ಪ್ರವಾಸಿಗರು ಕೂರಲು ಅಳವಡಿಸಿದ ಕಾಂಕ್ರಿಟ್ ಬೇಂಚುಗಳು ಕೂಡ ಹಾನಿಗೀಡಾಗಿದೆ. ಕಡಲ ತೀರ ಪ್ರದೇಶದ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳಿಗೂ ಕಡಲು ಕೊರೆತ ಅಪಾಯ ತಂದಿದ್ದು, ಹಲವು ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರಮ್ ಸೇರಿದಂತೆ ಗಾಳಿಗೆ ವಿದ್ಯುತ್ ದೀಪಗಳು ಹಾನಿಗೀಡಾಗಿದೆ.

ಕಳೆದ ಹತ್ತು ವರ್ಷದ ಹಿಂದೆ ಸಮುದ್ರ ಕೊರೆತದ ಬಾಧೆ ತೀವ್ರವಾಗಿ ಕಾಡಿದ್ದು, ತಡೆಗೋಡೆ ನಿರ್ಮಿಸಿದ ನಂತರವೂ ಕೂಡ ಅಲೆ ಮನೆ ಅಂಗಳಕ್ಕೆ ಬಂದಿದೆ. ಕಡಲು ಹೀಗೆ ಮುಂದೆ ಬಂದರೆ ಪರಿಸರದಲ್ಲಿ ಸಾವಿರಾರು ಮನೆಯಿದ್ದು, ಅಪಾಯ ಸಂಭವಿಸಿವ ಆತಂಕವಿದೆ. ತಕ್ಷಣ ಸಮುದ್ರ ಕೊರೆತಕ್ಕೆ ಶಾಶ್ವತ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಕಳೆದ ಬಾರಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸಹಿತ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರದ ಆಶ್ವಾಸನೆ ನೀಡಿದರೂ ಕೂಡ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಅನ್ನೋದು ಸ್ಥಳೀಯರ ನೋವಿನ ಮಾತುಗಳು. ಅಲ್ಲದೇ ಹಾನಿಗೀಡಾಗುವ ಪ್ರದೇಶದಲ್ಲಿ ಸ್ಥಳೀಯರೇ ಹಣ ವ್ಯಯಿಸಿ ಮಣ್ಣು ಹಾಕಿಸಿಕೊಂಡ ಉದಾಹರಣೆಯೂ ಹಲವಿದೆ.

ಮೀನು ಕೃಷಿ ನೀರು ಪಾಲು- ಲಕ್ಷಾಂತರ ನಷ್ಟ..
ಕೋಡಿ ಭಾಗದಲ್ಲಿ ಪಂಜರ ಮೀನು ಸಾಕಣಿಕೆ ಮಾಡಲಾಗುತ್ತಿದ್ದು ಅದರಲ್ಲಿ ಸೀ ಬಾಸ್ ಎನ್ನುವ ಮೀನು ತಳಿ ಬೆಳೆಯಲಾಗುತ್ತಿತ್ತು. ಮಂಗಳವಾರದ ವಿಪರೀತ ಗಾಳಿ ಮಳೆಗೆ ಸಮುದ್ರದಲೆಗಳ ಅಬ್ಬರ ಹೆಚ್ಚಿ ನದಿಯಲ್ಲೂ ನೀರಿನ ಮಟ್ಟ ಹಾಗೂ ಹರಿವು ಹೆಚ್ಚಿದ ಕಾರಣ ಮೀನು ಸಾಕಣಿಕೆಯ ಪಂಜರಗಳಷ್ಟು ಕೊಚ್ಚಿ ಹೋಗಿ ಲಕ್ಷಾಂತರ ನಷ್ಟ ಸಂಭವಿಸಿದೆ. ಮೀನುಗಾರರು ಹೇಳುವ ಪ್ರಕಾರ ಅಂದಾಜು ೧೦ ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.