ಕರ್ನಾಟಕ

ರೋಷನ್ ಬೇಗ್ ಬಿಜೆಪಿ ಸೇರ್ಪಡೆಯ ಹಾದಿ ಅಷ್ಟು ಸುಲಭ ಇಲ್ಲ!

Pinterest LinkedIn Tumblr


ಬೆಂಗಳೂರು(ಆ. 02): ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗವಾಗಿಯೇ ಟೀಕೆಗಳನ್ನು ಮಾಡಿ ರಾಜೀನಾಮೆ ನೀಡಿದ್ದ ರೋಷನ್ ಬೇಗ್ ಅವರು ಅತಂತ್ರ ಸ್ಥಿತಿಯಲ್ಲಿ ಮುಂದುವರಿಯುವ ಸಾಧ್ಯತೆಯೇ ಹೆಚ್ಚಿದೆ. ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಬೀಳಲು ಕಾರಣರಾದ ಶಾಸಕರನ್ನು ಸೇರಿಸಿಕೊಳ್ಳಲು ಬಿಜೆಪಿ ಸಜ್ಜಾಗಿದೆ. ಆದರೆ, ರೋಷನ್ ಬೇಗ್ ಸೇರಿದಂತೆ ಕೆಲ ಶಾಸಕರ ವಿಚಾರದಲ್ಲಿ ಬಿಜೆಪಿ ಮೀನಮೇಷ ಎಣಿಸುತ್ತಿದೆ ಎಂಬ ಮಾಹಿತಿ ಇದೆ.

ಐಎಂಎ ಹಗರಣದಲ್ಲಿ ರೋಷನ್ ಬೇಗ್ ಅವರ ಹೆಸರು ಪ್ರಧಾನವಾಗಿ ಕೇಳಿಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಸೇರಿಸಿಕೊಳ್ಳಲು ಬಿಜೆಪಿ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ರವಿಕುಮಾರ್ ಅವರು ಈ ನಿಟ್ಟಿನಲ್ಲಿ ಸುಳಿವು ನೀಡಿದ್ದಾರೆ. ಕಾರ್ಯಕರ್ತರ ಭಾವನೆ ಮತ್ತು ಅಭಿಪ್ರಾಯಗಳನ್ನು ಪರಿಗಣಿಸಿಯೇ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ರವಿಕುಮಾರ್ ಹೇಳಿದ್ದಾರೆ.

ರೋಷನ್ ಬೇಗ್ ಅವರನ್ನು ಅಷ್ಟು ಸುಲಭವಾಗಿ ಬಿಜೆಪಿಗೆ ಸೇರಿಸಿಕೊಳ್ಳಲು ಆಗುವುದಿಲ್ಲ ಎಂಬ ಅಭಿಪ್ರಾಯವನ್ನು ರವಿಕುಮಾರ್ ವ್ಯಕ್ತಪಡಿಸಿರುವುದು ತಿಳಿದುಬಂದಿದೆ. ಆರ್.ಆರ್.ನಗರದ ಅನರ್ಹ ಶಾಸಕ ಮುನಿರತ್ನಂ ವಿಚಾರದಲ್ಲೂ ಬಿಜೆಪಿ ಹಿಂದೇಟು ಹಾಕುತ್ತಿದೆಯಂತೆ.

ಇದೇ ವೇಳೆ, ಸಂಸತ್​ನಲ್ಲಿ ತ್ರಿವಳಿ ತಲಾಖ್ ಮಸೂದೆ ಮಂಡನೆ ಮಾಡಿದ ಬಳಿಕ ಬಿಜೆಪಿ ಅಲ್ಪಸಂಖ್ಯಾತರನ್ನು ಸೆಳೆಯುವ ಆಲೋಚನೆಯಲ್ಲಿದ್ದಂತಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಬಿಜೆಪಿ ಸದಸ್ಯತ್ನ ನೀಡುವ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ರವಿಕುಮಾರ್ ಈ ಬಗ್ಗೆ ಮಾತನಾಡಿ, 5 ಲಕ್ಷ ಅಲ್ಪಸಂಖ್ಯಾತರ ಸದಸ್ಯತ್ವ ನೊಂದಣಿ ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ.

ಹಾಗೆಯೇ, ಅಲ್ಪಸಂಖ್ಯಾತರು ಕಾಂಗ್ರೆಸ್​ನ ಆಸ್ತಿಯಲ್ಲ. ತಾವು ಮುಸ್ಲಿಮರ ಪರವಾಗಿಯೇ ಇದ್ದೇವೆ. ತ್ರಿವಳಿ ತಲಾಖ್​ ನಿಷೇಧದಂತಹ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದೇವೆ. ತಮ್ಮಿಂದ ದೂರ ಇರುವ ಅಲ್ಪಸಂಖ್ಯಾತರನ್ನು ಬಿಜೆಪಿಗೆ ಸೆಳೆದುಕೊಳ್ಳುತ್ತಿದ್ದೇವೆ ಎಂದು ರವಿಕುಮಾರ್ ಹೇಳಿದ್ದಾರೆ.

Comments are closed.