
ನವದೆಹಲಿ(ಜುಲೈ 28): ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು, ಇಬ್ಬರು ಸಾವನ್ನಪ್ಪಿ, ಒಬ್ಬರು ಗಾಯಗೊಂಡಿದ್ದಾರೆ. ಉನ್ನಾವೋ ರೇಪ್ ಘಟನೆಯ ಸಂತ್ರಸ್ತೆ ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ಧಾರೆ. ಕಾರಿನಲ್ಲಿದ್ದ ಆಕೆಯ ತಾಯಿ ಮತ್ತು ವಕೀಲರು ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವ ಮಹಿಳೆಯು ಉನ್ನಾವೋದಳವಾಗಿದ್ದು, ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಅಪಘಾತ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿದೆ.
ಈ ಮಹಿಳೆ ತನ್ನ ತಾಯಿ ಹಾಗೂ ವಕೀಲರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆ ಅಪಘಾತವಾಗಿದೆ. ಈಕೆಯ ವಕೀಲರೇ ಕಾರನ್ನು ಚಲಾಯಿಸುತ್ತಿದ್ದರೆನ್ನಲಾಗಿದೆ. ರಸ್ತೆಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಅಪಘಾತವಾಗಿದೆ. ರೇಪ್ ಸಂತ್ರಸ್ತೆಯ ತಾಯಿ ಮತ್ತು ವಕೀಲ ಇಬ್ಬರೂ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿರುವ ಈಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉನ್ನಾವೋದಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಈ ಮಹಿಳೆ ಆರೋಪಿಸಿದ್ದಳು. ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರು ಅತ್ಯಾಚಾರ ಎಸಗಿದ್ದರೆಂಬುದು ಈಕೆಯ ಆರೋಪ. ತನಗೆ ನ್ಯಾಯ ಒದಗಿಸಿ ಎಂದು ಈ ಮಹಿಳೆ ಕಳೆದ ವರ್ಷದ ಏಪ್ರಿಲ್ನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ಮನೆಯ ಎದುರು ಆತ್ಮಹತ್ಯೆಗೂ ಯತ್ನಿಸಿದ್ದರು. ತಾನು ಎಷ್ಟು ಬಾರಿ ದೂರು ನೀಡಿದರೂ ಪೊಲೀಸರು ಸ್ವೀಕರಿಸುತ್ತಿಲ್ಲ ಎಂಬುದು ಈಕೆಯ ಅಳಲಾಗಿತ್ತು.
ಬಿಜೆಪಿ ಶಾಸಕರ ಸಹೋದರ ಅತುಲ್ ಸಿಂಗ್ ಮತ್ತವನ ಬಂಟರು ಆಕೆಯ ತಂದೆಯ ಮೇಲೆ ಹಲ್ಲೆ ಮಾಡಿದರು. ಪೊಲೀಸರು ದುಷ್ಕರ್ಮಿಗಳನ್ನ ಬಂದಿಸದೇ ಮಹಿಳೆಯ ತಂದೆಯನ್ನು ಸುಳ್ಳು ಪ್ರಕರಣದಲ್ಲಿ ಬಂಧಿಸಿದರು. ನ್ಯಾಯಾಂಗ ಕಸ್ಟಡಿಯಲ್ಲಿ ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು.
ಈ ಘಟನೆಗಳು ರಾಜ್ಯಾದ್ಯಂತ ಹಲವು ಪ್ರತಿಭಟನೆಗಳಿಗೆ ಕಾರಣವಾದವು. ಅದಾದ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದರು. ಬಿಜೆಪಿ ಶಾಸಕ ಸೆಂಗರ್ ಅವರನ್ನು ಬಂಧಿಸಲಾಯಿತು.
ಈಗ ರೇಪ್ ಸಂತ್ರಸ್ತೆ ಹಾಗೂ ಆಕೆಯ ತಾಯಿ ಮತ್ತು ವಕೀಲ ಇದ್ದ ಕಾರು ಅಪಘಾತಗೊಂಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
Comments are closed.