ಮನೋರಂಜನೆ

ಕಾಶ್ಮೀರದಲ್ಲಿ ದಾಳಿಗೆ ಉಗ್ರರಿಂದ ಸಂಚು? ಕಣಿವೆ ರಾಜ್ಯಕ್ಕೆ 10 ಸಾವಿರ ಹೆಚ್ಚುವರಿ ಸೈನಿಕರು?

Pinterest LinkedIn Tumblr


ನವದೆಹಲಿ(ಜುಲೈ 28): ಕೇಂದ್ರ ಸರ್ಕಾರ ನಿನ್ನೆ ಸಂಜೆ ದಿಢೀರನೇ 10 ಸಾವಿರಕ್ಕೂ ಹೆಚ್ಚು ಅರೆಸೇನಾಪಡೆ ಯೋಧರನ್ನು ಕಾಶ್ಮೀರ ಕಣಿವೆಗೆ ಕಳುಹಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಆರ್ಟಿಕಲ್ 35ಎ ಮತ್ತು 370 ಅನ್ನು ಸಂವಿಧಾನದಿಂದ ತೆಗೆದುಹಾಕಲು ಕೇಂದ್ರ ಸರ್ಕಾರ ಮುಂದಾಗಬಹುದೆಂದೇ ಹಲವರು ವ್ಯಾಖ್ಯಾನಿಸುತ್ತಿದ್ದಾರೆ. ಆದರೆ, ಕಣಿವೆ ರಾಜ್ಯಕ್ಕೆ ನೂರಕ್ಕೂ ಹೆಚ್ಚು ಅರೆಸೇನಾ ತುಕಡಿಗಳನ್ನ ಕಳುಹಿಸುವ ಕೇಂದ್ರದ ನಿರ್ಧಾರದ ಹಿಂದೆ ಬೇರೆಯೇ ಕಾರಣ ಇದೆ ಎಂಬುದು ತಿಳಿದುಬಂದಿದೆ.

ಪಾಕಿಸ್ತಾನೀ ಸೇನೆ ಬೆಂಬಲಿತ ಉಗ್ರರ ಗುಂಪುಗಳು ಕಾಶ್ಮೀರದಲ್ಲಿ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಲು ಸಂಚು ರೂಪಿಸುತ್ತಿವೆ. ಈ ಹಿನ್ನೆಲೆಯಲ್ಲಿ ಹೆ್ಚಿನ ಭದ್ರತೆಗೆ ಹೆಚ್ಚಿನ ತುಕಡಿಗಳನ್ನ ಕಾಶ್ಮೀರದಲ್ಲಿ ನಿಯೋಜಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಮಗೆ ತಿಳಿಸಿವೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಉಗ್ರ ದಾಳಿಯಾಗುವ ಸಂಭವದ ಬಗ್ಗೆ ಗುಪ್ತಚರ ಮಾಹಿತಿ ಬಂದ ಬಳಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ತುರ್ತು ಸಭೆ ನಡೆಸಿದರು. ಕಾಶ್ಮೀರದಲ್ಲಿ ಹೆಚ್ಚುವರಿ ಸೇನಾ ತುಕಡಿಗಳ ನಿಯೋಜನೆಯ ಅಗತ್ಯ ಇದೆ ಎಂದು ಸಭೆಯಲ್ಲಿ ಸಲಹೆಗಳು ಬಂದವು. ಈ ಹಿನ್ನೆಲೆಯಲ್ಲಿ ನೂರಕ್ಕೂ ಹೆಚ್ಚು ಪ್ಯಾರಾಮಿಲಿಟರಿ ಕಂಪನಿಗಳನ್ನು ಕಾಶ್ಮೀರಕ್ಕೆ ಕಳುಹಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ.

ಕಣಿವೆ ರಾಜ್ಯದಲ್ಲಿ ಪಂಚಾಯಿತಿ ಚುನಾವಣೆಗಳು ಯಶಸ್ವಿಯಾಗಿ ನಡೆದಿರುವುದು; ಹಾಗೂ ಉಗ್ರರ ಬೆದರಿಕೆಯ ನಡುವೆಯೂ ಸೇನೆಯ ರಕ್ಷಣೆಯೊಂದಿಗೆ ಅಮರನಾಥ ಯಾತ್ರೆ ಯಶಸ್ವಿಯಾಗಿ ನಡೆದಿದ್ದು ಪಾಕಿಸ್ತಾನಕ್ಕೆ ಹಾಗೂ ಪಾಕಿಸ್ತಾನೀ ಬೆಂಬಲಿತ ಉಗ್ರ ಗುಂಪುಗಳಿಗೆ ಇರಿಸುಮುರುಸು ತಂದಿದೆ. ರಾಜ್ಯದಲ್ಲಿ ಮತ್ತೆ ಭಯದ ವಾತಾವರಣ ನಿರ್ಮಿಸಲು ಭಾರೀ ದಾಳಿಗಳನ್ನ ನಡೆಸಬೇಕೆಂಬ ಸಂಚು ರೂಪುಗೊಳ್ಳುತ್ತಿದೆ ಎಂದು ಗುಪ್ತಚರರು ಎಚ್ಚರಿಸಿದ್ದಾರೆ.

ನಿನ್ನೆ ಬಂದ 10 ಸಾವಿರ ಸೈನಿಕರು ಸೇರಿ ಕಾಶ್ಮೀರದಲ್ಲಿ ಒಟ್ಟು ಇರುವ ಸೈನಿಕರ ಪ್ರಮಾಣ 50 ಸಾವಿರ ದಾಟಿದಂತಾಗಿದೆ. ಜಮ್ಮು-ಕಾಶ್ಮೀರ ರಾಜ್ಯದ, ಅದರಲ್ಲೂ ದಕ್ಷಿಣ ಕಾಶ್ಮೀರದ ಹಳ್ಳಿ ಹಳ್ಳಿಯಲ್ಲೂ ಭಾರತೀಯ ಸೈನಿಕರು ಗಸ್ತು ತಿರುಗುವಂತಹ ಪರಿಸ್ಥಿತಿ ಇದೆ.

Comments are closed.