
ಮುಂಬಯಿ : ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಸಂಸ್ಥೆಯು ಇದೇ ಮೊದಲ ಬಾರಿಗೆ ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2019 ಪುರಸ್ಕಾರ ಪ್ರಕಟಿಸಿದ್ದು, ಪ್ರಥಮ ಪುರಸ್ಕಾರಕ್ಕೆ ಹಿರಿಯ ಪತ್ರಕರ್ತ ನ್ಯಾಯವಾದಿ ವಸಂತ ಕಲಕೋಟಿ ಇವರನ್ನು ಆಯ್ಕೆ ಮಾಡಿದೆ ಎಂದು ಪತ್ರಕರ್ತರ ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.
ಇತ್ತೀಚೆಗೆ ನಡೆಸಲ್ಪಟ್ಟ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸಭೆಯು ವಾರ್ಷಿಕ ಪುರಸ್ಕಾರದ ಬಗ್ಗೆ ನಿರ್ಧಾರಿಸಿದ್ದು ಪುರಸ್ಕಾರಕ್ಕಾಗಿ ತೀರ್ಪುಗಾರರ ಸಮಿತಿ ನಡೆಸಲಾಗಿದ್ದು ಸಂಘದ ಸಲಹಾ ಸಮಿತಿ ಸದಸ್ಯೆ ಡಾ| ಸುನೀತಾ ಎಂ.ಶೆಟ್ಟಿ ಇವರನ್ನು ಪುರಸ್ಕಾರ ಸಮಿತಿ ಕಾರ್ಯಧ್ಯಕ್ಷೆಯನ್ನಾಗಿ ಹಾಗೂ ಸಮಿತಿ ಸದಸ್ಯರನ್ನಾಗಿ ಸಂಘದ ವಿಶೇಷ ಆಮಂತ್ರಿತ ಸದಸ್ಯರುಗಳಾದ ಹರೀಶ್ ಹೆಜ್ಮಾಡಿ (ಮಾಜಿ ಗೌರವ ಕಾರ್ಯದರ್ಶಿ) ಹಾಗೂ ಸಾ.ದಯಾ (ದಯಾನಂದ ಸಾಲ್ಯಾನ್) ಇವರನ್ನು ಆಯ್ಕೆ ನಡೆಸಲಾಗಿದೆ. ವಾರ್ಷಿಕವಾಗಿ ಪ್ರದಾನಿಸಲ್ಪಡುವ ಈ ಪುರಸ್ಕಾರವು ರೂಪಾಯಿ 25,000/- ನಗದು, ಸ್ಮರಣಿಕೆ ಮತ್ತು ಪುರಸ್ಕಾರಪತ್ರ ಹೊಂದಿರುತ್ತದೆ.
ಸಮಾಜಮುಖಿ ದೃಷ್ಠಿಕೋನವುಳ್ಳವರಾಗಿ, ಪತ್ರಿಕೋದ್ಯಮವನ್ನು ಪ್ರತಿಷ್ಠಿತವಾಗಿರಿಸಿ ಓರ್ವ ಹಿರಿಯ ಪತ್ರಕರ್ತನಾಗಿ ಮುಂಬಯಿ ಕನ್ನಡ ಪತ್ರಿಕೋದ್ಯಮ ರಂಗಕ್ಕೆ ಸುಮಾರು ಮೂರುವರೆ ದಶಕಗಳ ದೀರ್ಘಾವಧಿಯ ಅನುಪಮ, ಅತ್ಯಮೂಲ್ಯ ಸೇವೆಗೈದಿರುವರು. ನಿಷ್ಠುರತೆಯೊಂದಿಗೆ ಅಗ್ರಗಣ್ಯ ಪತ್ರಕರ್ತರೆನಿಸಿದ ಸ್ವರ್ಗೀಯ ಶ್ರೀ ಕೆ.ಟಿ ವೇಣುಗೋಪಾಲ್ ಅವರ ಸೇವೆ ಅನನ್ಯವೂ ಸ್ಮರಣೀಯವೂ ಆಗಿದೆ. ಕಥೆಗಾರನೂ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಹಿರಿಯ ಸದಸ್ಯರಾಗಿದ್ದು ಸಂಘದ ಸಂವಿಧಾನ ರಚನಾ ಸಮಿತಿ ಕಾರ್ಯಾಧ್ಯಕ್ಷ ಆಗಿದ್ದ ಶ್ರೀಯುತರು ತಮ್ಮ ನಿವೃತ್ತ ಜೀವನದ ಬಳಿಕ ಪುಣೆಯಲ್ಲಿ ನೆಲೆಯಾಗಿದ್ದು 2009ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರೂ ಈಗಲೂ ಜನಮಾನಸದಲ್ಲಿ ನೆಲೆಯಾಗಿರುವ ಶ್ರೇಷ್ಠ ಪತ್ರಕರ್ತರಾಗಿದ್ದಾರೆ.
ಪತ್ರಿಕೋದ್ಯಮದ ಘನತೆಯನ್ನೇ ಪ್ರತಿಷ್ಠಿತವಾಗಿರಿಸಿದ ಕೆಟಿವಿ ನಿಷ್ಠೆಯನ್ನು ಭವಿಷ್ಯತ್ತಿನ ಪತ್ರಕರ್ತ ಸಮುದಾಯಕ್ಕೆ ಮಾದರಿ ಆಗಿಸುವ ನಿಟ್ಟಿನಲ್ಲಿ ಕೆ.ಟಿ ವೇಣುಗೋಪಾಲ್ ಸ್ಮರಣಾರ್ಥ ಕನ್ನಡಿಗ ಪತ್ರಕರ್ತರ ಸಂಘವು ವರ್ಷಂಪ್ರತಿ (ಅಂದಾಜು ಪ್ರತೀ ವರ್ಷದ ಜುಲಾಯಿ ತಿಂಗಳಲ್ಲಿ ಅಥವಾ ತನ್ನ ಸಂಘದ ವಾರ್ಷಿಕೋತ್ಸವ ಸಂಭ್ರಮದಲ್ಲಿ ಈ ಪುರಸ್ಕಾರ ಪ್ರದಾನಿಸಲಿದೆ. ಒಂದು ವರ್ಷಕ್ಕೆ ಮುಂಬಯಿ/ ಮಹಾರಾಷ್ಟ್ರದೊಳಗಿನ ಕನ್ನಡಿಗ ಪತ್ರಕರ್ತರಿಗೆ ಹಾಗೂ ಮತ್ತೊಂದು ವರ್ಷಕ್ಕೆ ರಾಷ್ಟ್ರದಾದ್ಯಂತದ (ವಿಶೇಷವಾಗಿ ಒಳನಾಡ ಕರ್ನಾಟಕ ರಾಜ್ಯ ಅಥವಾ ಕೇರಳ ರಾಜ್ಯದೊಳಗಿನ) ಕನ್ನಡಿಗ ಪತ್ರಕರ್ತರಿಗೆ ಪ್ರದಾನಿಸಲಾಗುವುದು ಎಂದು ತಿಳಿಸಲಾಗಿದೆ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಗೌ| ಪ್ರ| ಕಾರ್ಯದರ್ಶಿ ಅಶೋಕ ಎಸ್.ಸುವರ್ಣ ತಿಳಿಸಿದ್ದಾರೆ.
ಇದೇ ಜು.28ನೇ ಭಾನುವಾರ ಬೆಳಿಗ್ಗೆ ಸ್ವರ್ಗೀಯ ಸಂಪದಮನೆ ಶ್ರೀ ನಾಗಯ್ಯ ಶೆಟ್ಟಿ ವೇದಿಕೆ, ಲೋಟಸ್ ಸಭಾಗೃಹ, ಸಾಲೀಟರಿ ಕಾರ್ಪೋರೆಟ್ ಪಾರ್ಕ್, ಅಂಧೇರಿ ಪೂರ್ವ ಮುಂಬಯಿ ಇಲ್ಲಿ ಪತ್ರಕರ್ತರ ಸಂಘವು ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಪತ್ರಕರ್ತರ ದಿನಾಚರಣೆ ಆಚರಿಸಲಿದೆ. ಈ ಸಮಾರಂಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು ಅಧ್ಯಕ್ಷ ಡಾ| ಪದ್ಮರಾಜ ದಂಡಾವತಿ, ಮುಂಬಯಿ ಮರಾಠಿ ಪತ್ರಕಾರ್ ಸಂಘ್ ಅಧ್ಯಕ್ಷ ನರೇಂದ್ರ ವಿ.ವಾಬ್ಲೆ ಅವರು ವಸಂತ ಕಲಕೋಟಿ ಇವರಿಗೆ ಪುರಸ್ಕಾರ ಪ್ರದಾನಿಸಲಿದ್ದಾರೆ ಎಂದು ಗೌರವ ಕಾರ್ಯದರ್ಶಿ ರವೀಂದ್ರ ಆರ್.ಶೆಟ್ಟಿ ತಾಳಿಪಾಡಿ ತಿಳಿಸಿದ್ದಾರೆ.
ಮುಂಬಯಿಗರು ಕಂಡ ಹಿರಿಯ ಪತ್ರಕರ್ತ ನ್ಯಾ| ವಸಂತ ಕಲಕೋಟಿ :
ರಾಷ್ಟ್ರದ ಆಥಿಕ ರಾಜಧಾನಿ ಬೃಹನ್ಮುಂಬಯಿ ಕಂಡ ಹಿರಿಯ ಪತ್ರಕರ್ತ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಪೋಷಕ ಸದಸ್ಯ ನ್ಯಾಯವಾದಿ ವಸಂತ ಎಸ್.ಕಲಕೋಟಿ ಅವರು ಧಾರವಾಡ ಜಿಲ್ಲೆಯ ಹುಬ್ಬಳ್ಳಿಲ್ಲಿ ೨೦.೦೪.೧೯೩೯ರಂದು (ಇದೀಗ ಎಂಭತ್ತು ವರ್ಷಗಳ ಹರೆಯ) ಶ್ರೀನಿವಾಸ ಕಲಕೋಟಿ ಮತ್ತು ಶ್ರೀಮತಿ ಲಂಕುಭಾಯಿ ದಂಪತಿ ಸುಪುತ್ರರಾಗಿ ಜನಿತ ವಸಂತ ಕಲಕೋಟಿ ಅವರು ೧೯೫೮ರಲ್ಲಿ ಎಲ್ಲರಂತೇ ಉದರ ಪೋಷಣೆಗಾಗಿ ಮುಂಬಯಿ ಸೇರಿದ ಕನ್ನಡಿಗರಲ್ಲೊಬ್ಬರು. ಸರಳ ಸಜ್ಜನಿಕಾ ಅಜಾತಶತ್ರು ವ್ಯಕ್ತಿಯಾಗಿದ್ದು ಇದೀಗ ಕಲ್ಯಾಣ್ ಕೋರ್ಟ್ನಲ್ಲಿ ವಕೀಲರಾಗಿ ಕಾರನಿರತರಾಗಿದ್ದಾರೆ.
ಪತ್ರಕರ್ತರಾಗಿ….
ಪ್ರಪಂಚ್ ಪಬ್ಲಿಕೇಶನ್ಸ್ನ ಪ್ರಪಂಚ ಕನ್ನಡ ವಾರಪತ್ರಿಕೆಯ ಮುಂಬಯಿ ವರದಿಗಾರರಾಗಿ, ೧೯೬೦-೬೫ರ ವೇಳೆಗೆ ಬೆಂಗಳೂರು ಮತ್ತು ಹುಬ್ಬಳ್ಳಿಯಿಂದ ಪ್ರಕಾಶಿತ ಮನೋರಮ ಕನ್ನಡ ಸಿನೇಮಾ ತ್ರೈಮಾಸಿಕದ ಭಾತ್ಮಿದಾರರಾಗಿ, ಕರ್ಮವೀರ ಕನ್ನಡ ಸಾಪ್ತಾಹಿಕ, ಸಂಯುಕ್ತ ಕರ್ನಾಟಕ ರಾಷ್ಟ್ರೀಯ ಕನ್ನಡ ದೈನಿಕ ಇತ್ಯಾದಿ ಪತ್ರಿಕೆಗಳ ಮುಂಬಯಿ ವರದಿಗಾರರಾಗಿ, ಲಯನ್ಸ್ ಕ್ಲಬ್ ಆಫ್ ಡ್ಂಬಿವಿಲಿ ಇದರ ಬುಲೆಟಿನ್ನ ಸಂಪಾದಕರಾಗಿ ಪತ್ರಿಕೋದ್ಯಮದ ಕೃಷಿಯಲ್ಲಿ ತೊಡಗಿಸಿ ಕೊಂಡಿದ್ದರು.
೫೦೦ಕ್ಕೂ ಮಿಕ್ಕಿದ ಲೇಖನಗಳು, ಕಿರು ಕಥೆಗಳು, ಸಂದರ್ಶನಗಳು, ವೈಶಿಷ್ಟ್ಯ ಲೇಖನಗಳು, ವ್ಯಕ್ತಿಚಿತ್ರ ಬರಹಗಳು, ವಿಶೇಷ ಆಚ್ಛಾದನಾ ಲೇಖನ ಇತ್ಯಾದಿಗಳನ್ನು ತಾಯ್ನುಡಿ, ಪ್ರಜಾವಾಣಿ, ಉದಯವಾಣಿ, ಸಂದರ್ಶನ, ಜಯಂತಿ, ಸಚೇತ್ನಾ, ಕಲ್ಯಾಣ್, ಪಂಚಾಮೃತ ಸೇರಿದಂತೆ ರಾಷ್ಟ್ರದ ಹತ್ತಾರು ಪತ್ರಿಕೆಗಳಲ್ಲಿ ಪ್ರಕಟಿಸಿರುವರು. ಅಲ್ಲದೆ ಹಳೆಯದು ಹೊನ್ನಲ್ಲವೇ… ಕನ್ನಡ ಕೃತಿಯನ್ನೂ ಪ್ರಕಟಿಸಿದ್ದಾರೆ. ಆಲ್ಇಂಡಿಯಾ ರೇಡಿಯೋ, ಮುಂಬಯಿ ಆಕಾಶವಾಣಿಯಲ್ಲೂ ಕನ್ನಡದಲ್ಲಿ ವಿಶೇಷ ಸಮಕಾಲೀನ ಲೇಖನ, ಕಿರು ಕಥೆಗಳು, ಚರ್ಚೆಗಳಲ್ಲಿ ಭಾಗವಹಿಸಿ ಸಂದರ್ಶನಗಳನ್ನು ನೀಡಿರುವರು. ೧೯೮೩ರಲ್ಲಿ ನಡೆದ ಬೋಂಬೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕನ್ನಡ ಪತ್ರಿಕೋದ್ಯಮದ ಬಗ್ಗೆ ಭಾಷಣ ಮಂಡಿಸಿದ್ದಾರೆ.
೧೯೯೭ರಲ್ಲಿ ಮುಂಬಯಿಯಲ್ಲಿ ಯಶವಂತ ಚಿತ್ತಾಲರ ಅಧ್ಯಕ್ಷತೆಯಲ್ಲಿ ಜರುಗಿದ ಮಹಾರಾಷ್ಟ್ರ ಕನ್ನಡ ಸಮ್ಮೇಳನದಲ್ಲಿ ಮುಂಬಯಿ ಕನ್ನಡಿಗ ಅಂದು ಇಂದು ಮುಂದು ವಿಚಾರವನ್ನೂ ಮಂಡಿಸಿರುವರು. ಸಾಹಿತ್ಯ ಮತ್ತು ಪತ್ರಿಕೋದ್ಯಮದ ಜೊತೆ ಅವಿನಾಭಾವ ಸಂಬಂಧ ಹೊಂದಿರುವ ಇವರ ನೂರಾರು ಲೇಖನಗಳು ರಾಷ್ಟ್ರದ ಮತ್ತು ಹೊರನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ೧೯೬೯ರಿಂದ ಮುಂಬಯಿಯಲ್ಲಿನ ಹೆಸರಾಂತ ಕಾರ್ಯನಿರತ ಪತ್ರಕರ್ತರಾಗಿ ಪರಿಚಿತ ಇವರು ಸುಮಾರು ನಾಲ್ಕುವರೆ ದಶಕಗಳಿಂದ ಹೆಸರಾಂತ ಲೇಖಕ, ಪತ್ರಕರ್ತರಾಗಿ ಮೆರೆದಿದ್ದಾರೆ. ಕಲಕೋಟಿ ಅವರು ಪ್ರಪಂಚ, ಕರ್ಮವೀರ, ಸಂಯುಕ್ತ ಕರ್ನಾಟಕ ಮುಂತಾದ ಪತ್ರಿಕೆಗಳಿಗೆ ಮುಂಬಯಿ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಹುಮುಖ ವ್ಯಕ್ತಿತ್ವದ ಇವರಿಗೆ ಪತ್ರಿಕೋದ್ಯಮದ ಸೇವೆಗಾಗಿ ಕರ್ನಾಟಕ ಸಂಘ ಮುಂಬಯಿ ಸಂಸ್ಥೆಯು ಶ್ರೇಷ್ಠ ಪತ್ರಕರ್ತ ಗೌರವ ಪ್ರಶಸ್ತಿ ಪ್ರದಾನಿಸಿ ಗೌರವಿಸಿದೆ. ಮುಂಬಯಿ, ಥಾಣೆ, ಅಂಬರ್ನಾಥ್, ಕಲ್ಯಾಣ್ ಇನ್ನಿತರ ಪ್ರದೇಶಗಳಲ್ಲಿನ ಹತ್ತಾರು ಕನ್ನಡ ಸಂಸ್ಥೆಗಳೂ ಇವರ ಸೇವೆ ಗುರುತಿಸಿ ಗೌರವಿಸಿದೆ. ೨೦೧೩ರಲ್ಲಿ ಡೊಬಿವಿಲಿಯಲ್ಲಿ ನಡೆದ ಅಖಿಲ ಭಾರತ ಹೊರನಾಡ ಕನ್ನಡಿಗರ ಸಮ್ಮೇಳನ ಸಮಾರಂಭದಲ್ಲಿ ನಾಡೋಜ ಪಾಟೀಲ ಪುಟ್ಟಪ್ಪ ಅವರಿಂದ ಹೊರನಾಡ ಶ್ರೇಷ್ಠ ಕನ್ನಡಿಗರಾಗಿ ಸನ್ಮಾನಿಸಲ್ಪಟ್ಟಿದ್ದಾರೆ.
೨೦೦೩ರಲ್ಲಿ ಪತ್ನಿ ಗೀತಾ ವಸಂತ್ ಇಹಲೋಕ ತ್ಯಜಿಸಿಸಿದ್ದು, ವಸಂತ ಕಲಕೋಟಿ ಸದ್ಯ ತಮ್ಮ ನಾಲ್ವರು ಪದವೀಧರೆ ಮತ್ತು ವಿವಾಹಿತ ಸುಪುತ್ರಿಯರಾದ ಉಮಾ, ವರ್ಷ, ವೀಣಾ ಮತ್ತು ಜಯ ಅವರೊಂದಿಗೆ ತಮ್ಮ ಬದುಕನ್ನು ಕಳೆಯುತ್ತಿದ್ದಾರೆ. ಸುಪುತ್ರ ವಿದೇಶದಲ್ಲಿ ಉನ್ನತ ಶಿಕ್ಷಣದಲ್ಲಿ ನಿರತರಾಗಿದ್ದಾರೆ. ಸಿಂಗಾಪುರಾ, ಮಲೇಷಿಯಾ, ಥೈಲ್ಯಾಂಡ್, ಯೂರೋಪ್, ಇಂಗ್ಲೆಂಡ್, ಲಂಡನ್, ಫ್ರಾನ್ಸ್, ಪ್ಯಾರಿಸ್, ಸ್ವಿಸರ್ಲ್ಯಾಂಡ್, ಇಟೆಲಿ, ರೋಮ್ ಸೇರಿದಂತೆ ವಿಶ್ವದ ಹತ್ತಾರು ರಾಷ್ಟ್ರಗಳನ್ನು ಸುತ್ತಾಡಿ ಅಪಾರ ಅನುಭವ ಮೈಗೂಡಿಸಿರುವ ವಸಂತ ಕಲಕೋಟಿ ಅವರು ಅಪರೂಪದ ಸಜ್ಜನ ಬದುಕಿನ ಅಜಾತಶತ್ರು ವ್ಯಕ್ತಿಯಾಗಿ ನಮ್ಮೊಂದಿಗಿರುವುದು ಕನ್ನಡಿಗರ ಹಿರಿಮೆಯಾಗಿದೆ.
ಮುಂಬಯಿ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂಎ ಪದವೀಧರರಾಗಿ ನಂತರ ಕಾನೂನು ಪದವಿಯೊಂದಿಗೆ ಎಲ್ಎಲ್ಬಿಯನ್ನೂ ಪೂರೈಸಿದರು. ಜಮ್ನಾಲಾಲ್ ಬಜಾಜ್ ಇನ್ಸ್ಟಿಟ್ಯೂಟ್ ಆಫ್ ಮೇನೆಜ್ಮೆಂಟ್ ಸ್ಟಡೀಸ್ ಸಂಸ್ಥೆಯಲ್ಲಿ ಅಡ್ಮಿನಿಸ್ಟ್ರೇಟಿವ್ ಮೇನೆಜ್ಮೆಂಟ್ನಲ್ಲೂ ಡಿಪ್ಲೋಮಾ ಓದುತ್ತಲೇ ಇಂಗ್ಲೀಷ್, ಹಿಂದಿ ಮರಾಠಿ ಕನ್ನಡ ಭಾಷಾ ಪ್ರವೀಣತರಾದರು. ಎಂಎಎಲ್ಎಲ್, ಬಿಡಿಎಎಂ ವ್ಯಾಸಂಗ ಪಡೆದ ಬಲು ಅಪರೂಪದ ತೀರಾ ಸೌಮ್ಯತನದ ವಸಂತ ಕಲಕೋಟಿ ಅವರು ೧೯೬೫-೧೯೮೪ರ ಇಸವಿ ಮಧ್ಯೆ ಮುಂಬಯಿ ವಿವಿಯ ಕೆಮಿಕಲ್ ಟೆಕ್ನಾಲಜಿ ವಿಭಾಗದಲ್ಲಿ ಸ್ಟೋರ್ ಪರ್ಚಸ್ ಅಧಿಕಾರಿಯಾಗಿ ನಂತರ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಉಪಕುಲ ಸಚಿವರಾಗಿ ಸೇವೆ ಸಲ್ಲಿಸಿ ೧೯೯೭ರಲ್ಲಿ ನಿವೃತ್ತಿ ಹೊಂದಿದರು.
ಕ್ರಮೇಣ ಕಲ್ಯಾಣ್, ಥಾಣೆ, ಮುಂಬಯಿ ಜಿಲ್ಲಾ ಕೋರ್ಟ್ಗಳಲ್ಲಿ ಮತ್ತು ಮುಂಬಯಿ ಉಚ್ಛನ್ಯಾಯಲಯದಲ್ಲಿ ಸಿವಿಲ್, ಕ್ರಿಮಿನಲ್, ಕೋ.ಆಪರೇಟಿವ್ ಮತ್ತು ಗ್ರಾಹಕ ವಿಷಯಗಳಲ್ಲಿ ವಕೀಲ ವೃತ್ತಿಯಲ್ಲಿ ಪಳಗಿದ ನ್ಯಾಯವಾದಿ ಕಲಕೋಟಿ ಅವರು ಕಾನೂನುತಜ್ಞರಾಗಿ ಶ್ರಮಿಸಿರುವರು.
೧೯೮೭-೯೨ರಲ್ಲಿ ಬೊಂಬೇ ಯುನಿವರ್ಸಿಟಿ ಆಫೀಸರ್ಸ್ ಅಸೋಸಿಯೇಶನ್ನ ಗೌ| ಕಾರ್ಯದರ್ಶಿಯಾಗಿ ೧೯೯೨-೯೪ರ ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಅಸೋಸಿಯೇಶನ್ ಆಫ್ ಯುನಿವರ್ಸಿಟಿ ಅಡ್ಮಿನಿಸ್ಟ್ರೇಟರ್ಸ್ ಇಂಡಿಯಾ ಇದರ ಮಹಾರಾಷ್ಟ್ರ ರಾಜ್ಯ ವಿಭಾಗೀಯ ಗೌ| ಕಾರ್ಯದರ್ಶಿಯಾಗಿ ರಾಜ್ಯ ಮಟ್ಟದ ಸಮಾವೇಶ ನಡೆಸಿದ ಕೀರ್ತಿ ಇವರದ್ದಾಗಿದೆ. ನೇಶನಲ್ ಎಕ್ಸಿಕ್ಯೂಟಿವ್ ಕೌನ್ಸಿಲ್ ಅಸೋಸಿಯೇಶನ್ನ ಆಫ್ ಯುನಿವರ್ಸಿಟಿ ಅಡ್ಮಿನಿಸ್ಟ್ರೇಟರ್ಸ್ನ ಸದಸ್ಯರಾಗಿ ನಾಗ್ಪುರಾ, ನವದೆಹಲಿ ಮತ್ತು ಪಾಂಡಿಚೇರಿಯಲ್ಲಿ ನಡೆಸಲ್ಪಟ್ಟ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿರುವರು.
೧೯೬೭-೬೮ರಲ್ಲಿ ಕರ್ನಾಟಕ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಮುಂಬಯಿ, ೧೯೬೮-೭೦ರಲ್ಲಿ ಕರ್ನಾಟಕ ಸಂಘ ಮುಂಬಯಿ, ೧೯೭೩-೭೮ರಲ್ಲಿ ಕನ್ನಡ ಸಾಹಿತ್ಯ ಕೂಟ ಮುಂಬಯಿ ಇತ್ಯಾದಿ ಸಂಸ್ಥೆಗಳ ಗೌರವ ಕಾರ್ಯದರ್ಶಿ ಆಗಿ, ೧೯೭೧-೭೮ರಲ್ಲಿ ಕರ್ನಾಟಕ ಸಂಘ ಮುಂಬಯಿ ಇದರ ಡಾ| ಎಂ.ವಿಶ್ವೇಶ್ವರಯ್ಯ ಸ್ಮಾರಕ ಕಟ್ಟಡ ಸಮಿತಿಯ ಆಡಳಿತ ಸಮಿತಿ ಸದಸ್ಯರಾಗಿ, ೧೯೬೯ರಿಂದ ಕರ್ನಾಟಕ ಸಂಘ ಡೊಂಬಿವಿಲಿ ಸಂಸ್ಥೆಯಲ್ಲಿ ಸಕ್ರೀಯರಾಗಿ, ವಿವಿಧ ಹುದ್ದೆಗಳನ್ನಲಂಕರಿಸಿ ೧೯೯೦-೯೯ ಮತ್ತು ೨೦೦೫-೨೦೦೮ರ ಅಧ್ಯಕ್ಷರಾಗಿ, ಮಂಜುನಾಥ ವಿದ್ಯಾಲಯ ಡೊಂಬಿವಿಲಿ ಇದರ ವಿದ್ಯಾ ಸಂಘಟನಾ ಸಮಿತಿ ಕಾರ್ಯಧ್ಯಕ್ಷರಾಗಿ, ೨೦೦೫-೨೦೧೧ರ ಸಾಲಿಗೆ ಶಾಲಾ ಸಮನ್ವಯ ಸಮಿತಿ ಕಾರ್ಯಾಧ್ಯಕ್ಷರಾಗಿ, ೨೦೦೨-೨೦೦೫ ರಲ್ಲಿ ಗವರ್ನಿಂಗ್ ಬಾಡಿ ಆಫ್ ಮಂಜುನಾಥ ಕಾಲೇಜ್ ಆಫ್ ಆರ್ಟ್ಸ್ ಎಂಡ್ ಕಾಮರ್ಸ್ ಡೊಂಬಿವಿಲಿ ಇದರ ಕಾರ್ಯಧ್ಯಕ್ಷರಾಗಿ ಅಂತೆಯೇ ಲಯನ್ಸ್ ಕ್ಲಬ್ ಆಫ್ ಇಂಟರ್ನೇಶನಲ್ ಸಂಸ್ಥೆಯಲ್ಲೂ ಸೇವೆ ಸಲ್ಲಿಸುವ ಜೊತೆಗೆ ಮುಂಬಯಿ ಹಾಗೂ ಉಪನಗರಗಳಲ್ಲಿನ ಅನೇಕ ಕನ್ನಡ ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವರು.
ಹಿರಿಯ ಪತ್ರಕರ್ತರಾಗಿರುವ ಕಲಕೋಟಿ ಅವರನ್ನು ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ತನ್ನ ದಶಮಾನೋತ್ಸವ ಸಂಭ್ರಮದಲ್ಲಿ (2018ರ ಆ.22ರಂದು ಕುರ್ಲಾ ಪೂರ್ವದಲ್ಲಿನ ಬಂಟರ ಭವನದಲ್ಲಿ) ಸನ್ಮಾನಿಸಿ ಗೌರವಿಸಿದೆ.
Comments are closed.