ಕರ್ನಾಟಕ

ನಾಳೆ ಬೆಳಗ್ಗೆಯೇ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೋ: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಯಡಿಯೂರಪ್ಪ ಹೇಳ್ತಿದ್ದಾರೆ ಬಹುಮತ ಸಾಬೀತಿಗೆ ಇವತ್ತೇ ಕೊನೆಯಲ್ಲ, ಸೋಮವಾರ, ಮಂಗಳವಾರವೂ ಮಾಡಬಹುದು ಎಂದು ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟರು.

ಇದೀಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ

ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ನಾವು ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ, ಸರ್ಕಾರ ರಚನೆಯಾದಾಗಿನಿಂದ ಬೀಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ನಾಳೆ ಬೆಳಗ್ಗೆ ಯಡಿಯೂರಪ್ಪ ಬಂದು ಮುಖ್ಯಮಂತ್ರಿಯಾಗಿ ಕೂರುತ್ತಾರೋ ಗೊತ್ತಿಲ್ಲ, ನಾನು ಅಧಿಕಾರಕ್ಕೆ ಅಂಟಿಕೊಂಡು ಕೂರುವವನಲ್ಲ, ಇದೀಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಶಾಸಕರು ರಾಜೀನಾಮೆ ನೀಡಿದ್ದಾರೆ. ಕಾನೂನು ತಿರುಚುವ ಪ್ರಯತ್ನಗಳೂ ನಡೆದಿವೆ. ಪಕ್ಷಾಂತರ ನಿಷೇಧ ಕಾಯ್ದೆಗೂ ಭಂಗಬಂದಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಮಾಟ-ಮಂತ್ರ ಮಾಡ್ತಾನೆ ಎಂದು ಹೀಗಳೆಯೋದು ತಪ್ಪು

ನಮ್ಮದು ಮಾಟ-ಮಂತ್ರ ಮಾಡೋ ಕುಟುಂಬವಲ್ಲ, ದೇವಸ್ಥಾನಕ್ಕೆ ಹೋದಾಗ ಲಿಂಬೆಹಣ್ಣು, ಏಲಕ್ಕಿ ಕೊಡ್ತಾರೆ, ಅದನ್ನು ರೇವಣ್ಣ ತಗೊಂಡು ಬರ್ತಾರೆ. ಲಿಂಬೆಹಣ್ಣು ಹಿಡಿದುಕೊಂಡು ಮಾಟ-ಮಂತ್ರ ಮಾಡ್ತಾನೆ ಎಂದು ಹೀಗಳೆಯೋದು ತಪ್ಪು, ನಾವು ದೇವರನ್ನು ನಂಬುತ್ತೇವೆ, ಪೂಜೆ ಮಾಡುತ್ತೇವೆ, ಬಿಜೆಪಿಯವರೂ ದೇವಸ್ಥಾನಕ್ಕೆ ಹೋಗೋದಿಲ್ವ? ರಾಮನ ಹೆಸರಲ್ಲೇ ಅವರು ಅಧಿಕಾರಕ್ಕೆ ಬಂದವರು ಮಾಟ-ಮಂತ್ರ ಮಾಡಿಕೊಂಡು ಅಧಿಕಾರ ಪಡೆಯೋದಾದರೆ ಜನರ ಬಳಿ ಯಾಕೆ ಹೋಗಬೇಕು ಎಂದು ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಹೇಳಿದರು.

ನಾನು ದೇವರನ್ನು ನಂಬ್ತೀನಿ, ಸುಳ್ಳು ಹೇಳಲ್ಲ

ಮೊದಲ ದಿನದಿಂದಲೇ ಸರ್ಕಾರ ಪತನಕ್ಕೆ ಯತ್ನ ನಡೆಯುತ್ತ ಇದೆ, 14 ತಿಂಗಳಿಂದ ಸರ್ಕಾರ ಕೆಡವಲು ಯತ್ನಿಸಿದರು. ಅಧಿಕಾರ ಹಸ್ತಾಂತರದಲ್ಲಿ ನನ್ನಿಂದ ತಪ್ಪಾಗಿಲ್ಲ, ಅಂದು ಕೂಡ ನನ್ನಿಂದ ಚ್ಯುತಿಯಾಗಿಲ್ಲ, ಆದರೆ ನನ್ನನ್ನು ವಚನಭ್ರಷ್ಟ ಎಂದು ಹೇಳಿದರು. ನಾನು ದೇವರನ್ನು ನಂಬ್ತೀನಿ, ಸುಳ್ಳು ಹೇಳಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ನನ್ನ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು

ಅನಿವಾರ್ಯವಾಗಿ ಬಿಜೆಪಿ ಜೊತೆ ಸರ್ಕಾರ, ನನಗೇನೂ ಸಿಎಂ ಆಗುವ ಆಸೆಯಿರಲಿಲ್ಲ, ನನಗೆ ಪಕ್ಷ ಬೆಳೆಸುವುದೇ ಮುಖ್ಯವಲ್ಲ, ಆದರೆ ಪಕ್ಷದ ಶಾಸಕರಿಂದ ಒತ್ತಡವಿತ್ತು, ಬಿಜೆಪಿ ಜೊತೆ ಹೋದದ್ದು ದೊಡ್ಡ ತಪ್ಪು, ನನ್ನ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು, ಇದು ತಂದೆಯವರಿಗೆ ಆಘಾತವುಂಟು ಮಾಡಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ರಾಜಕೀಯಕ್ಕೆ ಅನಿವಾರ್ಯವಾಗಿ ಬಂದಿದ್ದೇನೆ. ಸದನಕ್ಕೆ 2004ರಲ್ಲಿ ಮೊದಲು ಪ್ರವೇಶಿಸಿದ್ದೆ, ಆಗಲೂ ಇಂಥದ್ದೇ ಅತಂತ್ರ ಪರಿಸ್ಥಿತಿಯಿತ್ತು, 12 ವರ್ಷದ ರಾಜಕೀಯದಲ್ಲಿ ನನ್ನ ಸಣ್ಣ ಪಾತ್ರ , ನನ್ನ ನಿರ್ಧಾರ ಸರಿಯಿರಬಹುದು, ತಪ್ಪಿರಬಹುದು ಎಂದು ಸಿಎಂ ಕುಮಾರಸ್ವಾಮಿ ಮಾತನಾಡಿದರು.

ಮುಂದೆ ನಿಮಗೂ ಹಬ್ಬ ಕಾದಿದೆ

ನೀವು ಎಷ್ಟು ದಿನ ಇಲ್ಲಿ ಉಳಿಯುತ್ತೀರ, ಮುಂದೆ ನಿಮಗೂ ಹಬ್ಬ ಕಾದಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಟಾಂಗ್ ಕೊಟ್ಟರು.

Comments are closed.