ಕರಾವಳಿ

ಬಿ.ಸಿ.ರೋಡ್ ಬಳಿ ಟ್ಯಾಂಕರ್ ಹಾಗೂ ಕಾರು ಮಧ್ಯೆ ಭೀಕರ ಅಪಘಾತ : ನಾಲ್ವರು ಮೃತ್ಯು – ಓರ್ವ ಗಂಭೀರ

Pinterest LinkedIn Tumblr

ಮಂಗಳೂರು / ಬಂಟ್ವಾಳ, ಜುಲೈ.19: ಬೆಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಮತ್ತು ಮಂಗಳೂರು ಕಡೆಯಿಂದ ಬರುತ್ತಿದ್ದ ಟ್ಯಾಂಕರ್ ನಡುವೆ ಉಂಟಾದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ಬಿ ಸಿ ರೋಡ್ ಸಮೀಪದ ತುಂಬೆ ಬ್ರಹ್ಮರ ಕೂಟ್ಲು ಟೋಲ್‌ ಗೇಟ್‌ ಸಮೀಪ ಸಂಭವಿಸಿದೆ.

ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ದುರ್ದೈವಿಗಳನ್ನು ಭಟ್ಕಳ ಮೂಲದವರೆನ್ನಲಾದ ಗೋವಿಂದ (55), ಅವರ ಪತ್ನಿ ಪದ್ಮಾವತಿ (45) ಇವರ ಮಕ್ಕಳಾದ ನಾಗರಾಜ (22) ಮತ್ತು ಗಣೇಶ (28) ಎಂದು ಹೆಸರಿಸಲಾಗಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಾಗೊಂಡಿರುವ ಶಿವಾನಂದ ಅವರ ಸ್ಥಿತಿ ಚಿಂತಾಜನಕವಾಗಿದೆ.ಕಾರಿನಲ್ಲಿದ್ದ ಶಿವಾನಂದ ಅವರ ಪತ್ನಿ ಜ್ಯೋತಿ ಮತ್ತು ಈಕೆಯ ಮಕ್ಕಳಾದ ಎರಡು ವರ್ಷದ ಯಶ್ವಿನ್ ಹಾಗೂ ಒಂದು ವರ್ಷದ ವರ್ಷ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಟ್ಯಾಂಕರ್ ಢಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನ ಚಾಲಕ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.ಅಪಘಾತದಲ್ಲಿ ಮೃತಪಟ್ಟವರನ್ನು ಭಟ್ಟಳದ ಗಾಂಧಿನಗರ ನಿವಾಸಿಗಳೆಂದು ಹೇಳಲಾಗಿದೆ.

ಎರಡು ಕುಟುಂಬಗಳ ಒಟ್ಟು ಎಂಟು ಜನ ಸದಸ್ಯರು ಗುರುವಾರದಂದು ವಿವಿಧ ದೇವಸ್ಥಾನಗಳ ದರ್ಶನಕ್ಕೆಂದು ಬಾಡಿಗೆ ವಾಹನದಲ್ಲಿ ಹೊರಟಿದ್ದರು. ಆ ಪ್ರಕಾರ ನಿನ್ನೆ ಕೊಲ್ಲೂರು, ಶೃಂಗೇರಿ ಮತ್ತು ಹೊರನಾಡು ಕ್ಷೇತ್ರಗಳ ದರ್ಶನವನ್ನು ಮುಗಿಸಿಕೊಂಡು ದರ್ಮಸ್ಥಳದಲ್ಲಿ ಉಳಿದುಕೊಂಡಿದ್ದರು. ಇಂದು ಬೆಳಿಗ್ಗೆ ಧರ್ಮಸ್ಥಳದಲ್ಲಿ ದೇವರ ದರ್ಶನವನ್ನು ಮುಗಿಸಿಕೊಂಡು ಮಂಗಳೂರು ಮೂಲಕ ಭಟ್ಕಳಕ್ಕೆ ಹೊರಟಿದ್ದರು.

ಈ ಸಂದರ್ಭದಲ್ಲಿ ಬಿ.ಸಿ.ರೋಡ್ ದಾಟಿ ಬ್ರಹ್ಮರಕೂಟ್ಲು ಬಳಿ ಬರುವ ಸಂದರ್ಭದಲ್ಲಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಮೊದಲಿಗೆ ಬುಲೆಟ್ ಟ್ಯಾಂಕರ್ ಗೆ ಅಪ್ಪಳಿಸಿ ಬಳಿಕ ರಸ್ತೆ ಬದಿಯ ತಡೆಗೋಡೆಗೆ ಅಪ್ಪಳಿಸಿದೆ. ಪರಿಣಾಮ ಕಾರಿನ ಬಾಗಿಲುಗಳು ತೆರೆದುಕೊಂಡು ಒಳಗಿದ್ದವರು ರಸ್ತೆಗೆ ಎಸೆಯಲ್ಪಟ್ಟ ಕಾರಣ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಭೀಕರ ಅಪಘಾತದಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದ ಪರಿಣಾಮ ಹೆದ್ದಾರಿಯಲ್ಲಿ ಕೆಲ ತಾಸುಗಳ ಕಾಲ ಸಂಚಾರಕ್ಕೆ ತಡೆ ಉಂಟಾಗಿತ್ತು. ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.