
ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಇಂದು ವಿಶ್ವಾಸಮತ ಯಾಚನೆ ಮಂಡಿಸುತ್ತಾರೆ. ಸಿಎಂ ವಿದಾಯದ ಭಾಷಣ ಮಾಡುತ್ತಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಕಾಂಗ್ರೆಸ್ ಜೆಡಿಎಸ್ ಏನೇ ತಂತ್ರ ಮಾಡಿದರೂ ಸರ್ಕಾರ ಉಳಿಯಲ್ಲ, ಅಲ್ಪಮತಕ್ಕೆ ಕುಸಿದ ಸರ್ಕಾರ ಮುಂದುವರಿಯಲ್ಲ, ಸುಪ್ರೀಂ ಕೋರ್ಟ್ ರಾಜೀನಾಮೆ ನೀಡಿದ ಶಾಸಕರಿಗೆ ವಿಪ್ ಅನ್ವಯ ಆಗಲ್ಲ ಎಂದಿದೆ. ಹೀಗಾಗಿ ವಿಪ್ ನೀಡುವ ಅಗತ್ಯವಿಲ್ಲ ಎಂದರು.
ನಂತರ ವಿಧಾನಸೌಧದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಈ ಸರ್ಕಾರದ ವಿರುದ್ಧ ಜನ ತೀರ್ಮಾನ ಕೊಟ್ಟಿದ್ದರು. ಆದರೆ ಮೈತ್ರಿ ಮಾಡಿಕೊಂಡು ಬಂದರು. ಸಿಎಂ ಕುಮಾರಸ್ವಾಮಿ ವಿದಾಯದ ಭಾಷಣ ಮಾಡಲಿ, ಭಾಷಣದ ನೆಪದಲ್ಲಿ ದಿನದೂಡುವುದನ್ನು ಬಿಡಿ, ಉಳಿದ ನಾಲ್ಕು ವರ್ಷ ಪೂರ್ತಿಭಾಷಣ ಮಾಡಲು ಸಾಧ್ಯವಿಲ್ಲ, ವಿಶ್ವಾಸಮತ ಯಾಚನೆಯಲ್ಲಿ ಸಿಎಂ ಸೋಲುತ್ತಾರೆ ಎಂದರು.
ಬಿಜೆಪಿ ಶಾಸಕ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು, ನಮ್ಮ ಹೋರಾಟ ಹಿಂದಿನಿಂದಲೂ ಇದೆ. ಸದನದಲ್ಲೂ ಹೋರಾಟ ಮುಂದುವರಿಯಲಿದೆ. ಅವರಿಗೆ ಬಹುಮತವೇ ಇಲ್ಲ, ಇನ್ನೆಲ್ಲೆ ವಿಶ್ವಾಸಮತ, ವಿಶ್ವಾಸಮತಯಾಚನೆ ಮತ್ತಷ್ಟು ಎಳೆಯುವ ಪ್ರಯತ್ನ ನಡೆಸಿದ್ದಾರೆ. ಇವತ್ತೇ ಅವರ ಬಹುಮತ ಬಿದ್ದುಹೋಗಲಿದೆ. ಮೊದಲು ಸರ್ಕಾರ ಬೀಳಲಿ, ಆಮೇಲೆ ಸರ್ಕಾರ ರಚನೆಯ ಮಾತು ಎಂದರು.
ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಮಾಧುಸ್ವಾಮಿ ಕೂಡ ಮಾತನಾಡಿದ್ದು, ಸದನ ಸಂಪೂರ್ಣ ಸ್ಪೀಕರ್ ವಿವೇಚನೆಗೆ ಬಿಟ್ಟದ್ದು, ಅವರು ತೆಗೆದುಕೊಳ್ಳುವ ತೀರ್ಮಾನ ಅಂತಿಮ. ಅವರು ಪ್ರಸ್ತಾವದ ಮೇಲಿನ ಭಾಷಣಕ್ಕೆ ಅವಕಾಶ ನೀಡುತ್ತಾರೆ. ದಿನದೂಡಿದಷ್ಟು ದೋಸ್ತಿ ಪಕ್ಷಗಳಿಗೆ ನಷ್ಟ, ದಿನದಿನವೂ ಅವರ ಶಾಸಕರು ಬಿಟ್ಟು ಹೋಗುತ್ತಿದ್ದಾರೆ. ಇನ್ನೂ ಮುಂದೂಡಿದರೆ ಇರುವ ಶಾಸಕರನ್ನು ಕಳೆದುಕೊಳ್ಳುತ್ತಾರೆ . ಬಿಜೆಪಿ ಸರ್ಕಾರ ರಚನೆ ಆಗುತ್ತದೆ ಎಂದರು.
Comments are closed.