
ಪ್ರಮೋಷನಲ್ ಸಾಂಗ್ ಹಾಗೂ ಟ್ರೈಲರ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದಿದ್ದ ‘ಯಾನ’ ಸಿನಿಮಾ ಇದೇ ಶುಕ್ರವಾರ ರಾಜ್ಯಾದ್ಯಂತ 100 ಕ್ಕೂ ಹೆಚ್ಚು ಸಿನೆಮಾ ಮಂದಿರಗಳಲ್ಲಿ ತೆರೆಕಾಣಲಿದೆ.
ಈ ಸಿನಿಮಾ ಮೂಲಕ ಹಿರಿಯ ಸಿನಿಮಾ ನಟ ಜೈಜಗದೀಶ್ ಹಾಗೂ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರ ಮೂವರು ಮಕ್ಕಳು ಸಿನಿರಂಗಕ್ಕೆ ನಾಯಕಿಯರಾಗಿ ಪಾದರ್ಪಣೆ ಮಾಡಲಿದ್ದಾರೆ.

ಮೂವರು ಹುಡುಗಿಯರ ಬದುಕಿನ ಪಯಣದ ಕಥೆ ಹೇಳಲಿರುವ ಈ ‘ಯಾನ’ ದಲ್ಲಿ ವೈಭವಿ ವೈನಿಧಿ ಹಾಗು ವೈಸಿರಿ ನಾಯಕಿಯರಾಗಿ ಅಭಿನಯಿಸಿದರೆ, ತಾಯಿ ವಿಜಯಲಕ್ಷ್ಮಿ ಸಿಂಗ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನು ಜೋಶ್ವಾ ಶ್ರೀಧರ್ ಸಂಗೀತ ನಿರ್ದೇಶನ ಮಾಡಿದ್ದು, ಅನೂಪ್ ಸೀಳಿನ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ.
ACME ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ನಿರ್ಮಾಪಕರಾಗಿರುವ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಹಾಗು ‘ಐ’ ಎಂಟರ್ಟೈನ್ಮೆಂಟ್’ನ ವೈಭವಿ, ವೈನಿಧಿ ಮತ್ತು ವೈಸಿರಿ ಸಿನೆಮಾಕ್ಕೆ ಬಂಡವಾಳ ಹೂಡಿದ್ದಾರೆ.

ಈ ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಕೂಡ ಸಾಹಿತ್ಯ ಬರೆದಿದ್ದಾರೆ. ಯಾನದ ಮತ್ತೊಂದು ವಿಶೇಷತೆ ಎಂದರೆ ನಾಯಕ, ನಾಯಕಿಯರು ಅಷ್ಟೇ ಅಲ್ಲದೆ ತಂತ್ರಜ್ಞರು ಸೇರಿ ಒಟ್ಟು 40 ಮಂದಿ ಹೊಸಬರಿಗೆ ಸಿನಿಮಾದಲ್ಲಿ ಅವಕಾಶ ಕಲ್ಪಿಸಿರುವುದು.
ಈಗಾಗಲೇ ಚಿತ್ರದ ವಿಡಿಯೋ ತುಣುಕುಗಳನ್ನು ನೋಡಿರುವ ಸ್ಯಾಂಡಲ್ವುಡ್ ನಾಯಕಿ ರಾಗಿಣಿ ಮೂವರು ಕನ್ನಡ ಚಿತ್ರರಂಗದಲ್ಲಿ ನೆಲೆಯೂರಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನು ಚಿತ್ರದ ಪ್ರಮುಖ ಪಾತ್ರದಲ್ಲಿ ಸುಮುಖ್ ಚಕ್ರವರ್ತಿ ಅಭಿಷೇಕ್, ಅನಂತ್ ನಾಗ್, ಸುಹಾಸಿನಿ, ಸಾಧುಕೋಕಿಲ, ಚಿಕ್ಕಣ್ಣ, ರಂಗಾಯಣ ರಘು ಇನ್ನೂ ಅನೇಕರು ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ಸುತ್ತಮುತ್ತ ಹಾಗೂ ಕರ್ನಾಟಕದ ಪ್ರಸಿದ್ಧ ತಾಣಗಳಲ್ಲಿ ಚಿತ್ರೀಕರಿಸಲಾಗಿರುವ ಯಾನದ ಕಥೆಯ ಬಹುಭಾಗವು ಗೋವಾದಲ್ಲಿ ನಡೆಯಲಿದೆ.
Comments are closed.