ಆರೋಗ್ಯ

ಪಾದ ಮತ್ತು ಕಣಕಾಲುಗಳ ಊತಕ್ಕೆ ಕಾರಣಗಳೇನು ತಿಳಿಯಿರಿ..!

Pinterest LinkedIn Tumblr

ಊದಿಕೊಂಡ ಪಾದಗಳಿಗೆ ಅನೇಕ ಕಾರಣಗಳಿವೆ, ಅದು ಸಣ್ಣದಾಗಿರಬಹುದು, ತಾತ್ಕಾಲಿಕವಾಗಿರಬಹುದು ಅಥವಾ ತೀರಾ ಚಿಕ್ಕದಾಗಿರ ಬಹುದು. ಪಾದ ಮತ್ತು ಕಣಕಾಲುಗಳ ಉರಿಯೂತವು ಸಾಮಾನ್ಯವಾಗಿ ಯಾವುದೇ ರೀತಿಯ ಆರೋಗ್ಯದ ಅಪಾಯವನ್ನು ಉಂಟುಮಾಡುವುದಿಲ್ಲ, ಆದರೆ ನಿಮ್ಮ ವೈದ್ಯರನ್ನು ಒಮ್ಮೆ ಭೇಟಿ ಮಾಡುವುದು ಮುಖ್ಯ. ಇದು ಸಾಮಾನ್ಯವಾಗಿ ತನ್ನ ಇಷ್ಟದ ರೀತಿಯಲ್ಲಿ ಚಲಿಸುತ್ತದೆ, ಆದರೆ ಕೆಲವೊಮ್ಮೆ ಇದು ಕಡಿಮೆ ಪ್ರೋಟೀನ್ ಮಟ್ಟಗಳು, ಹೃದಯ ವೈಫಲ್ಯ, ಮೂತ್ರಪಿಂಡ ಅಥವಾ ಪಿತ್ತಜನಕಾಂಗದ ಕಾಯಿಲೆಗಳಂತಹ ಆರೋಗ್ಯ ಸಮಸ್ಯೆಗಳ ಸಂಕೇತವಾಗಿದೆ. ಸಾಮಾನ್ಯ ಪರಿಸ್ಥಿತಿಗಳಿಂದ ಉಂಟಾಗುವ ಊತವನ್ನು ಚಿಕಿತ್ಸೆ ನೀಡದೆ ಇದ್ದಲ್ಲಿ ಇದು ಕಾಲಕ್ರಮೇಣ ಗಂಭೀರ ತೊಂದರೆಗಳನ್ನು ಉಂಟುಮಾಡಬಹುದು.

ಪಾದ, ಕಾಲು ಮತ್ತು ಕಣಕಾಲುಗಳ ಊತವನ್ನು ಸಾಮಾನ್ಯವಾಗಿ ಪೆರಿಫೆರಲ್ ಎಡಿಮಾಎಂದು ಕರೆಯುತ್ತಾರೆ, ಮತ್ತು ದೇಹದ ಈ ಭಾಗಗಳಲ್ಲಿ ನೀರಿನ ಶೇಖರಣೆಯಾಗಿ ಊತಕ್ಕೆ ಕಾರಣವಾಗಿರುತ್ತದೆ. ಇದರಿಂದ ಯಾವುದೇ ರೀತಿಯ ನೋವು ಅಥವಾ ಅಸ್ವಸ್ಥತೆ ಇರುವುದಿಲ್ಲ. ಇದು ಗುರುತ್ವಾಕರ್ಷಣೆಯ ಕಾರಣದಿಂದ ದೇಹದ ಕೆಳಗಿನ ಭಾಗದಲ್ಲಿ ಅಥವಾ ಅಂಗಗಳಲ್ಲಿ ನೀರು ಶೇಖರಣೆಯಾಗಿ ಊತ ಉಂಟಾಗುತ್ತದೆ.

ಕಾರಣಗಳು
*ಜೀವನಶೈಲಿ:ಬಹಳಷ್ಟು ಪ್ರಕರಣಗಳಲ್ಲಿ ಇದು ಜೀವನಶೈಲಿಯ ಅಂಶಗಳಿಂದ ಕಾರಣವಾಗಿರುತ್ತದೆ

*ಸ್ಥೂಲಕಾಯ: ದೇಹದ ಅಧಿಕ ಕೊಬ್ಬು ರಕ್ತ ಸಂಚಾಲನೆಯನ್ನು ಕಡಿಮೆ ಮಾಡಿ ಕಾಲು, ಪಾದ ಮತ್ತು ಕಣಕಾಲುಗಳಲ್ಲಿ ದ್ರವ ಶೇಖರಣೆಯಾಗಲು ಕಾರಣವಾಗುತ್ತದೆ.

ನಿರಂತರವಾಗಿ ನಿಂತುಕೊಳ್ಳುವುದು ಅಥವಾ ಕುಳಿತುಕೊಳ್ಳುವುದು: ಒಂದೇ ಸಮನೆ ಕೂಡುವುದು ಅಥವಾ ನಿಂತುಕೊಳ್ಳುವುದರಿಂದ ದೇಹದ ಸ್ನಾಯುಗಳು ನಿಷ್ಕ್ರಿಯೆಗೊಂಡು ದ್ರವಗಳನ್ನು ಹೃದಯಕ್ಕೆ ತಿರುಗಿಸಲು ಸಾಧ್ಯವಾಗುವುದಿಲ್ಲ. ಇದರಿಂದ ನೀರು ಮತ್ತು ರಕ್ತದ ಶೇಖರಣೆಯಾಗಿ ಕಾಲುಗಳಲ್ಲಿ ಊತವನ್ನು ಉಂಟುಮಾಡಬಹುದು.

ಪ್ರಾಕೃತಿಕ ಹಾರ್ಮೋನಿನ ಬದಲಾವಣೆಗಳು: ಗರ್ಭಾವಸ್ಥೆಯ ಸಮಯ ಅಥವಾ ಮಹಿಳೆಯರ ತಿಂಗಳ ಮುಟ್ಟಿನ ಸಮಯದಲ್ಲಾಗುವ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟ್ರೊನ್ ಹಾರ್ಮೋನುಗಳ ಏರಿಳಿತಗಳ ಕಾರಣಗಳಿಂದಾಗಿ ಕಾಲುಗಳಲ್ಲಿ ರಕ್ತ ಸಂಚಲನೆ ಕಡಿಮೆಯಾಗಿ ಊತಉಂಟಾಗುತ್ತದೆ.

ಕೆಲವೊಮ್ಮೆ ಪಾದ, ಕಾಲು ಮತ್ತು ಕಣಕಾಲುಗಳ ಊತ ಕೆಲವು ನಿರ್ದಿಷ್ಟ ಔಷಧಿಗಳು 

ಸ್ಟೀರಾಯ್ಡ್ಗಳು
ಈಸ್ಟ್ರೋಜೆನ್ ಅಥವಾ ಟೆಸ್ಟೋಸ್ಟೆರಾನ್
ಖಿನ್ನತೆ ನಿವಾರಕ ಔಷಧಿಗಳಾದ ಟ್ರೈಸೈಕ್ಲಿಕ್ ಮತ್ತು ಎಂಎಓ ಇಂಹಿಬಿಟಾರ್ಗಳು
ಸ್ಟೀರಾಯ್ಡ್ ಅಲ್ಲದ ಉರಿಊತ ನಿವಾರಕ ಔಷಧಿಗಳು ಉದಾ- ಇಬುಪ್ರೋಫಿನ್ ಮತ್ತು ಆಸ್ಪಿರಿನ್
ಈ ರೀತಿಯ ಔಷಧಿಗಳು ರಕ್ತ ಸಂಚಾಲನೆಯನ್ನು ಕಡಿಮೆ ಮಾಡಿ ರಕ್ತದ ಘಾಢತೆಯನ್ನು ಹೆಚ್ಚಿಸಿ ಕಾಲುಗಳಲ್ಲಿ ಊತಕ್ಕೆ ಕಾರಣವಾಗುತ್ತದೆ.

ನೀವು ತೆಗೆದುಕೊಳ್ಳುವ ಔಷಧಿಗಳಿಂದ ನಿಮಗೇನಾದರೂ ಕಾಲುಗಳಲ್ಲಿ ಊತದ ಸಮಸ್ಯೆ ಶುರುವಾದರೆ, ನಿಮ್ಮ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳಿ. ವೈದ್ಯರು ಹೇಳುವ ತನಕ ಯಾವುದೇ ಔಷಧಿ ತೆಗೆದುಕೊಳ್ಳುವುದನ್ನು ಬಿಡಬೇಡಿ.

ಇತರೆ ಕಾರಣಗಳು
ಯಾವುದೇ ಒಂದೇ ಭಾಗದ ಪಾದ, ಕಾಲು ಅಥವಾ ಕಣಕಾಲುಗಳಲ್ಲಿ ಊತ ಬಂದರೆ ಅದು ದೇಹದ ಅನಾರೋಗ್ಯ ಅಥವಾ ದೇಹದಲ್ಲಿನ ಬದಲಾವಣೆಗಳಿಂದ ಆಗಿರಬಹುದು. ಅವು ಯಾವುವೆಂದರೆ

ಊತ ಬರಬೇಕಾದರೆ ದೇಹದ ಯಾವುದೇ ಭಾಗದಲ್ಲಿ ನೀರು ಇರಬೇಕು. ಇದರಿಂದ ನಿಮ್ಮ ಪಾದಗಳಷ್ಟೇ ಅಲ್ಲದೆ ಕೈಗಳು ಮತ್ತು ಮುಖವೂ ಊದಬಹುದು. ನೀವು ಇದನ್ನು ಸಾಮಾನ್ಯವಾಗಿ ಹೆಚ್ಚು ಹೊತ್ತು ನಿಂತುಕೊಂಡಿದ್ದಾಗ ಅಥವಾ ಪ್ರಯಾಣ ಮಾಡುವಾಗ ನೋಡಿರುತ್ತೀರಿ. ಮತ್ತು ಕೆಲವು ಮಹಿಳೆಯರು ತಮ್ಮ ತಿಂಗಳ ಮುಟ್ಟಿನ ಸಮಯದಲ್ಲೂ ಕಾಣುತ್ತಾರೆ.

ಕೆಲವೊಮ್ಮೆಗಾಯ ಅಥವಾ ಮೂಳೆ ಮುರಿತಗಳಿಂದಾಗಿಯೂ ಕೂಡ ಮೂಳೆಗಳ ಸುತ್ತವಿರುವ ಸ್ನಾಯುಗಳಲ್ಲಿ ಬಿರುಕಾಗುತ್ತದೆ. ಇಲ್ಲಿ ಆಗಿರುವ ಗಾಯವನ್ನು ವಾಸಿಮಾಡಲು ತಕ್ಷಣವೇ ನಿಮ್ಮ ರಕ್ತವು ಆ ಜಾಗಕ್ಕೆ ಹರಿಯುತ್ತದೆ. ಅದು ಅಲ್ಲಿಯೇ ಹೆಪ್ಪುಗಟ್ಟಿ ರಕ್ತಚಲನೆಯನ್ನು ಅಡ್ಡಗಟ್ಟುತ್ತದೆ ಮತ್ತು ಊತ ಮತ್ತು ಅಸ್ವಸ್ತತೆಯನ್ನುಂಟುಮಾಡುತ್ತದೆ.

ದೇಹದ ಪ್ರಾಕೃತಿಕ ಪ್ರತಿಕ್ರಿಯೆಯಿಂದಾಗಿಯೂ ಸಹ ಪಾದವು ಗರ್ಭಾವಸ್ಥೆಯಲ್ಲಿ ಊದುತ್ತದೆ. ಮಹಿಳೆಯು ಗರ್ಭಧರಿಸಿದಾಗ ತನ್ನ ದೇಹದಲ್ಲಿ ಹೆಚ್ಚು ನೀರನ್ನು ಶೇಖರಣೆ ಮಾಡುತ್ತಾಳೆ ಮತ್ತು ಅವಳು ಹೆಚ್ಚು ಕಾಲ ಒಂದೇ ಸಮನೆ ನಿಂತುಕೊಂಡಾಗ ಇನ್ನು ಹೆಚ್ಚು ಊತ ಕಾಣಿಸಿಕೊಳ್ಳುತ್ತದೆ. ಸ್ವಲ್ಪ ಕಿರಿಕಿರಿಯೆನಿಸಿದರೂ ಇದರಿಂದ ತಾಯಿ ಅಥವಾ ಮಗುವಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ.

ಹಲವು ಗರ್ಭಿಣಿ ಮಹಿಳೆಯರಲ್ಲಿ ಪಾದದ ಊತವನ್ನು ಸಾಮಾನ್ಯ ಸ್ಥಿತಿಯೆಂದು ಪರಿಗಣಿಸಲಾಗಿದ್ದರೂ, ಕೆಲವೊಮ್ಮೆ ಇದರ ಜೊತೆಯಲ್ಲಿ ಕಾಣಿಸಿಕೊಳ್ಳುವ ತಲೆನೋವು, ವಾಕರಿಕೆ, ಉಸಿರಾಟದಲ್ಲಿ ತೊಂದರೆ ಅಥವಾ ಹೊಟ್ಟೆ ನೋವು ಇದ್ದರೆ, ಆ ಸ್ಥಿತಿಯನ್ನು ಪ್ರಿಕ್ಲಾಂಪ್ಸಿಯ ಎಂದು ಕರೆಯುತ್ತೇವೆ. ಇದು ಗರ್ಭಾವಸ್ಥೆಯ 20 ವಾರಗಳ ನಂತರ ಶುರುವಾಗುತ್ತದೆ ಮತ್ತು ಇದು ಅಧಿಕ ರಕ್ತದೊತ್ತಡ ಸಮಸ್ಯೆಯ ಜೊತೆ ತಳಕು ಹಾಕಿಕೊಂಡಿದೆ. ಇದು ಮೂತ್ರಪಿಂಡ ಅಥವಾ ಯಕೃತ್ತನ್ನು ಹಾನಿ ಮಾಡುತ್ತದೆ ಹಾಗಾಗಿ ಈ ರೀತಿಯ ಯಾವುದೇ ಲಕ್ಷಣಗಳು ಕಂಡಲ್ಲಿ ಕೂಡಲೇ ನಿಮ್ಮ ಪ್ರಸೂತಿ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು.

ಲಿಂಫ್ಎಡಿಮಾ:ಇದು ನಿಮ್ಮ ಹಾನಿಗೊಳಗಾದ ದುಗ್ಧರಸ ಗ್ರಂಥಿಗಳನ್ನು ಕ್ಯಾನ್ಸರ್ ಚಿಕಿತ್ಸೆ ಸಮಯದಲ್ಲಿ ತೆಗೆದುಹಾಕಿದ ನಂತರ (ನಿಮ್ಮ ರೋಗನಿರೋಧಕ ವ್ಯವಸ್ಥೆಯ ಭಾಗವಾಗಿರುವ ಸಣ್ಣ ಗ್ರಂಥಿಗಳು) ಸಂಭವಿಸುತ್ತದೆ. ಪರಿಣಾಮವಾಗಿ, ನಿಮ್ಮ ದೇಹವು ಕಡಿಮೆ ದ್ರವವನ್ನು ತೊಡೆದುಹಾಕುತ್ತದೆ ಮತ್ತು ನಿಮ್ಮ ತೋಳುಗಳು, ಕಾಲುಗಳು ಮತ್ತು ಪಾದಗಳಲ್ಲಿ ಊತ ಉಂಟಾಗುತ್ತದೆ. ಇದಕ್ಕಾಗಿ ಮಾಡುವ ಚಿಕಿತ್ಸೆಯನ್ನು ನ್ಯೂಮ್ಯಾಟಿಕ್ ಕಂಪ್ರೆಶನ್ ಎಂದು ಕರೆಯುತ್ತಾರೆ. ನೀವು ಪೀಡಿತ ಪ್ರದೇಶಗಳ ಮೇಲೆ ಒಂದು ತೋಳು ಧರಿಸಿ ಮತ್ತು ಇದರಲ್ಲಿ ದ್ರವವನ್ನು ಸಾಗಿಸಲು ಆಗಾಗ್ಗೆ ಗಾಳಿಯನ್ನು ಊದುತ್ತದೆ. ವ್ಯಾಯಾಮಗಳು, ಮಸಾಜ್ ಮತ್ತು ಕಂಪ್ರೆಶನ್ ತೋಳುಗಳು ಅಥವಾ ಸಾಕ್ಸ್ ಸಹ ಸಹಾಯ ಮಾಡಬಹುದು.

ಹೃದಯ ವೈಫಲ್ಯ: ಇದು ನಿಮ್ಮ ಹೃದಯವು ಸರಿಯಾಗಿ ಕೆಲಸ ಮಾಡದೆ ಇರುವುದರಿಂದ ಆಗುತ್ತದೆ. ನಿಮ್ಮ ರಕ್ತ ಚಲನೆಯು ಸರಿಯಾಗಿ ಆಗುತ್ತಿಲ್ಲವೆಂದರೆ ಅಥವಾ ಸರಿಯಾದ ದಿಕ್ಕಿನಲ್ಲಿ ಹರಿಯದೆ ಇದ್ದಲ್ಲಿ ಅದು ಕಾಲು ಮತ್ತು ಪಾದಗಳಲ್ಲಿ ಸೇರಿ ಊತವನ್ನುಂಟುಮಾಡುತ್ತದೆ. ಹೃದಯ ವೈಫಲ್ಯ ಇದ್ದವರು ಮಲಗಲು ಅಸ್ವಸ್ಥರಾಗಿದ್ದು, ನಿಮ್ಮ ಹೃದಯವು ಸಾಮಾನ್ಯಕ್ಕಿಂತ ಅಧಿಕವಾಗಿ ಮತ್ತು ಜೋರಾಗಿ ಅಥವಾ ಅನಿಯಮಿತವಾಗಿ ಬಡಿದುಕೊಳುತ್ತದೆ ಮತ್ತು ನೀವು ಉಸಿರುತೆಗೆದುಕೊಳ್ಳಲೂ ಕಷ್ಟವಾಗುತ್ತದೆ.

ಮೂತ್ರಪಿಂಡದ ಸಮಸ್ಯೆ: ನಿಮ್ಮ ಮೂತ್ರಪಿಂಡಗಳು ರಕ್ತದಲ್ಲಿನ ತ್ಯಾಜ್ಯವನ್ನು ಸೋಸುತ್ತದೆ. ಮಧುಮೇಹ ಅಥವಾ ಅಧಿಕರಕ್ತದೊತ್ತಡ ಸಮಸ್ಯೆ ಇದ್ದವರಲ್ಲಿ ನಿಮ್ಮ ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡದೆ ರಕ್ತದಲ್ಲಿನ ಉಪ್ಪನ್ನು ಅಲ್ಲಿಯೇ ಬಿಟ್ಟುಬಿಡುತ್ತದೆ. ಇದರಿಂದ ದೇಹದಲ್ಲಿನ ನೀರು ಹೆಚ್ಚಾಗಿ ಗುರುತ್ವಾಕರ್ಷಣೆಯಿಂದ ನೀರು ಕೆಳಬಂದಾಗ ಪಾದ ಮತ್ತು ಕಣಕಾಲುಗಳಲ್ಲಿ ಊತ ಕಾಣಿಸುತ್ತದೆ.

ಯಕೃತ್ತಿನ ಸಿರೋಸಿಸ್: ಇದು ಯಕೃತ್ತುವಿನ ತೀವ್ರ ಹಾನಿಯಾಗಿದ್ದು, ಇದು ಸಾಮಾನ್ಯವಾಗಿ ಅತಿಯಾದ ಮದ್ಯಪಾನ ಮಾಡುವುದರಿದ ಅಥವಾ ಸೋಂಕುಗಳಾದ (ಹೆಪಟೈಟಿಸ್ ಬಿ ಅಥವಾ ಸಿ ). ಈ ಸ್ಥಿತಿಯುಅಧಿಕ ರಕ್ತದೊತ್ತಡ ಮತ್ತು ಪಾದ, ಕಾಲು ಮತ್ತು ಕಣಕಾಲುಗಳ ಕಡಿಮೆ ರಕ್ತ ಸಂಚಲನೆಯನ್ನುಂಟುಮಾಡುತ್ತದೆ.

ನಿಮ್ಮ ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?
ನಿಮಗೇನಾದರೂ ಪಾದದ ಊತದ ಜೊತೆಯಲ್ಲಿ ಎದೆ ನೋವು ಅಥವಾ ಎದೆಯುಸಿರು ಕಾಣಿಸಿಕೊಂಡರೆ ತಕ್ಷಣ ನಿಮ್ಮ ವೈದ್ಯರನ್ನು ಭೇಟಿಯಾಗಿ. ಇದು ನಿಮ್ಮ ಎದೆಯಲ್ಲಿ ಅಥವಾ ಶ್ವಾಸಕೋಶದಲ್ಲಿ ಇರುವ ರಕ್ತದ ಹೆಪ್ಪುಗಟ್ಟುವಿಕೆಯಿಂದಾಗಿರುತ್ತದೆ. ಈ ಕೆಳಗಿನ ಲಕ್ಷಣಗಳು ಇದ್ದರೂ ನಿಮ್ಮ ವೈದ್ಯರನ್ನು ಭೇಟಿ ಮಾಡಿ:
ನಿಮ್ಮ ಊದಿದ ಪಾದಗಳಲ್ಲಿ ಬೆರಳಿಟ್ಟು ಸ್ವಲ್ಪ ಅದುಮಿದರೆ ಗುಳಿ ಬೀಳುತ್ತದೆ.
ಊತವಿರುವ ಜಾಗದಲ್ಲಿ ಚರ್ಮ ಎಳೆದಂತೆ ಅಥವಾ ಬಿರುಕು ಬಂದಂತಾಗುವುದು.
ಊತದ ಜೊತೆಯಲ್ಲಿ ನೋವು ಇದ್ದರೆ, ಮತ್ತು ನೋವು ಒಂದೆರಡು ದಿನಗಳಲ್ಲಿ ಹೋಗದೆ ಇದ್ದರೆ

ಮನೆ ಮದ್ದುಗಳು
ನಿಮ್ಮ ಕಾಲು, ಪಾದ ಅಥವಾ ಕಣಕಾಲುಗಳು ಊದಿಕೊಂಡಿದ್ದರೆ ಅದನ್ನು ಸರಿಪಡಿಸಲು ಹಲವು ಉತ್ತಮ ಮನೆ ಮದ್ದುಗಳು ಇವೆ. ಇವುಗಳು ನಿಮಗೆ ಊತ ಬಂದಾಗ ಸಹಾಯವಾಗುತ್ತದೆ:

ಕಂಪ್ರೆಶನ್ ಸಾಕ್ಸ್: ಇದು ಸಾಮಾನ್ಯವಾಗಿ ನಿಮ್ಮ ಮನೆಯ ಹತ್ತಿರವಿರುವ ಔಷಧ ಅಂಗಡಿಗಳಲ್ಲಿ ಸುಲಭವಾಗಿ ಸಿಗುತ್ತದೆ. ಇದು ಹಾಕಿಕೊಳ್ಳುವುದರಿಂದ ನೋವು ಕಡಿಮೆಯಾಗಿ ಪಾದ ಮತ್ತು ಕಾಲುಗಳಲ್ಲಿ ನೀರು ಸೇರುವುದನ್ನು ತಡೆಗಟ್ಟುತ್ತದೆ. ಇದು ವಿವಿಧ ಅಳತೆಗಳಲ್ಲಿ ಲಭ್ಯವಿದ್ದು, ನಿಮ್ಮ ದೇಹವನ್ನು ಅತಿಯಾಗಿ ಬಿಗಿಯದಂತೆ ನೋಡಿಕೊಳ್ಳಬೇಕು.

ಕಾಲುಗಳನ್ನು ಮೇಲೆತ್ತಿ: ನೀವು ರಾತ್ರಿ ಮಲಗಿದಾಗ ಕಾಲುಗಳನ್ನು ಮೇಲೆತ್ತಿ ಮಲಗಿ. ನಿಮ್ಮ ಕಾಲುಗಳು ನಿಮ್ಮ ಹೃದಯದ ಮಟ್ಟಕ್ಕಿಂತ ಎತ್ತರವಿರಬೇಕು. ನೀವು ಬೇಕಾದರೆ ನಿಮ್ಮ ಕಾಲುಗಳ ಕೆಳಗೆ ಒಂದು ದಿಂಬನ್ನು ಸಹ ಇಟ್ಟುಕೊಳ್ಳಬಹುದು. ಹಲವು ಯೋಗಾಸನಗಳಾದ ಅಂಗಾತವಾಗಿ ಮಲಗಿ ನಿಮ್ಮ ಎರಡು ಕಾಲುಗಳನ್ನು ಗೋಡೆಗೆ ವಿರುದ್ಧವಾಗಿ ಮೇಲೆತ್ತುವುದು ಕೂಡ ಸಹಕಾರಿಯಾಗಬಹುದು.

ವ್ಯಾಯಾಮ : ಒಂದೇ ಜಾಗದಲ್ಲಿ ಹೆಚ್ಚು ಕಾಲ ಕೂಡುವುದು ಅಥವಾ ನಿಂತುಕೊಳ್ಳುವುದರಿಂದ ಊತ ಹೆಚ್ಚಾಗಬಹುದು. ಹಾಗಾಗಿ ಮಧ್ಯೆ ಮಧ್ಯೆ ಕಾಲುಗಳನ್ನು ಮಡಚುವುದು ಅಥವಾ ಉದ್ದ ಮಾಡುವುದನ್ನು ಮಾಡುತ್ತಿರಿ. ಕಾಲುಗಳನ್ನು ಹಿಗ್ಗುವುದು ಅಥವಾ ಸರಿಸುವುದನ್ನು ಸಹ ಮಾಡಿ.

ತೂಕ ಇಳಿಕೆ: ದೇಹದ ತೂಕವನ್ನು ಇಳಿಸುವುದರಿಂದಲೂ ಕೂಡ ಊತವನ್ನು ಕಡಿಮೆ ಮಾಡಬಹುದು ಮತ್ತು ಇದು ಆರೋಗ್ಯಕ್ಕೆ ಕೂಡ ಒಳ್ಳೆಯದು.

ಎಪ್ಸಮ್ ಉಪ್ಪು: ಎಪ್ಸಮ್ ಉಪ್ಪು ಹಾಕಿದ ತಣ್ಣೀರಿನಲ್ಲಿ 15-20 ನಿಮಿಷಗಳ ಕಾಲ ನಿಮ್ಮ ಪಾದಗಳನ್ನು ಇಡುವುದರಿಂದ ನಿಮ್ಮ ನೋವು ಮತ್ತು ಊತವನ್ನು ಕಡಿಮೆ ಮಾಡಬಹುದು. ನಿಮಗೇನಾದರೂ ಮಧುಮೇಹದ ನರರೋಗವಿದ್ದರೆ ನೀವು ತೀವ್ರ ತಾಪಮಾನದ ಬದಲಾವಣೆಯಿಂದಾಗುವ ಸಮಸ್ಯೆಯನ್ನು ತಪ್ಪಿಸುವುದಕ್ಕೆ ಮೊದಲು ನಿಮ್ಮ ಕೈಗಳನ್ನು ಹಾಕಿ ಪರೀಕ್ಷಿಸಿಕೊಳ್ಳಿ.

ಮೆಗ್ನೀಷಿಯಂ ಪೂರಕಗಳು: ನಿಮ್ಮ ದಿನನಿತ್ಯದ ಆಹಾರಕ್ರಮಕ್ಕೆ 200 ರಿಂದ 400 ಮಿಗ್ರಾಂ ಮೆಗ್ನೀಷಿಯಂ ಪೂರಕಗಳನ್ನು ಸೇರಿಸು ವುದರಿಂದ ನಿಮ್ಮ ನೀರಿನ ಧಾರಣ ಕಡಿಮೆಯಾಗಿ ನೋವನ್ನು ಸೀಮಿತಗೊಳಿಸುತ್ತದೆ. ಆದರೆ ಈ ಪೂರಕವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ವೈದ್ಯರೊಡನೆ ಮಾತನಾಡಿ, ಏಕೆಂದರೆ ನೀವು ಮೂತ್ರಪಿಂಡ ಅಥವಾ ಹೃದಯದ ಸಮಸ್ಯೆಯನ್ನು ಹೊಂದಿದ್ದರೆ ಇದನ್ನು ಬಳಸಬಾರದು.

ನಿಮ್ಮ ಉಪ್ಪಿನ ಸೇವನೆ ಕಡಿಮೆ ಮಾಡುವುದರಿಂದ, ನಿಮ್ಮ ಕಾಲುಗಳಲ್ಲಿ ಸೇರುವ ದ್ರವದ ಶೇಖರಣೆಯು ಸಹ ಕಡಿಮೆಯಾಗುತ್ತದೆ.
ಅತ್ಯುತ್ತಮ ಪರಿಣಾಮಗಳಿಗೆ, ಒಂದು ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಚಿಕಿತ್ಸಾ ವಿಧಾನವನ್ನು ಅನುಸರಿಸಿರಿ. ಉದಾಹರಣೆಗೆ, ನೀವು ಮೊದಲು ವ್ಯಾಯಾಮ ಮಾಡಿದರೆ, ನಂತರ ಕಂಪ್ರೆಶನ್ ಸಾಕ್ಸ್ ಚಿಕಿತ್ಸೆಯನ್ನು ಬಳಸಿ. ನೀವು ಈಜುವುದಾದರೆ, ಜೊತೆಯಲ್ಲೇ ಯೋಗವನ್ನು ಸೇರಿಸಿಕೊಳ್ಳಿ.
ಪಾದ, ಕಾಲು ಮತ್ತು ಕಣಕಾಲುಗಳ ಊತವನ್ನು ತಡೆಗಟ್ಟುವುದು

ಕಾಲು, ಪಾದ ಮತ್ತು ಕಣಕಾಲುಗಳ ಊತವನ್ನು ಯಾವಾಗಲೂ ತಡೆಯುವುದು ಅಸಾಧ್ಯವಾಗಿದೆಯಾದರೂ ಕೆಲವೊಮ್ಮೆ ಕೆಲವು ಉಪಾಯಗಳನ್ನು ಮಾಡುವುದರಿಂದ ಊತವಾಗುವ ಎಷ್ಟೋ ಸಾಧ್ಯತೆಗಳನ್ನು ತಪ್ಪಿಸಬಹುದು:
ಹೆಚ್ಚು ಸಮಯ ನಿಲ್ಲುವುದು ಅಥವಾ ಕೂರುವುದು ಮಾಡಬೇಡಿ, ಆಗಾಗ್ಗೆ ಎದ್ದು ಓಡಾಡಿ ಅಥವಾ ನಡೆದಾಡಿ
ದಿನಕ್ಕೆ 8-10 ಗ್ಲಾಸ್ ನೀರು ಕುಡಿಯಿರಿ, ಕಡಿಮೆ ನೀರು ಕುಡಿಯುವುದರಿಂದ ಊತ ಹೆಚ್ಚಾಗುತ್ತದೆ.
ನಿಯಮಿತ ವ್ಯಾಯಾಮ ಮಾಡುವುದರಿಂದ ಆರೋಗ್ಯಕರ ರಕ್ತ ಸಂಚಾಲನೆಗೆ ಕಾರಣವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ , 18 ರಿಂದ 64 ರ ವಯಸ್ಸಿನ ವಯಸ್ಕರರಿಗೆ 150 ನಿಮಿಷಗಳ ಮಧ್ಯಮ ತೀವ್ರತೆಯ ವ್ಯಾಯಾಮವನ್ನು ಅಥವಾ ವಾರಕ್ಕೆ 75 ನಿಮಿಷಗಳ ತೀವ್ರ-ತೀವ್ರತೆಯ ವ್ಯಾಯಾಮವನ್ನು ಶಿಫಾರಸು ಮಾಡುತ್ತದೆ.
ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿ
ಕೆಲವು ಅಧ್ಯಯನಗಳ ಪ್ರಕಾರ ಆರೋಗ್ಯಕರ ತೈಲಗಳ ಬಳಕೆಯಿಂದಲೂ ಸಹ ಊತವನ್ನು ಕಡಿಮೆಮಾಡಬಹುದು. ಇದಕ್ಕಾಗಿ ನೀಲ್ಗಿರಿ ಎಣ್ಣೆ, ಪುದಿನ ಎಣ್ಣೆ, ಲ್ಯಾವೆಂಡರ್ ಮತ್ತು ಚಾಮೊಮೈಲ್ ನಂಥ ಎಣ್ಣೆಗಳು ಉಪಯುಕ್ತವಾಗಿದೆ.

Comments are closed.