ಕರಾವಳಿ

ದೇವರಬಾಳು ಜನರ ದೌರ್ಭಾಗ್ಯ: ಕಾಮಗಾರಿ ಮುಗಿಯೋದ್ರೊಳಗೆ ಮುರಿದುಬಿತ್ತು ಕಿರುಸೇತುವೆಯ ಸ್ಲಾಬ್! (Video)

Pinterest LinkedIn Tumblr

ಕುಂದಾಪುರ: ಅದು ಹೇಳಿಕೇಳಿ ನಕ್ಸಲ್ ಬಾಧಿತ ಹಣೆಪಟ್ಟಿ ಹೊತ್ತ ಪ್ರದೇಶ. ನಕ್ಸಲ್ ಪ್ಯಾಕೇಜ್ ಅಡಿಯಲ್ಲಿ ಒಂದಷ್ಟು ಅನುದಾನ ಬಂದ್ರೂ ಕೂಡ ಅಭಿವೃದ್ಧಿ ಮಾತ್ರ ಇಲ್ಲಿ ಮರಿಚಿಕೆ. ಹಾಗೋ ಹೀಗೋ ಯಾವುದಾದರೂ ಕಾಮಗಾರಿ ಆಯ್ತು ಅಂದ್ರು ಕೆಲವೆಡೆ ಅದು ಕೂಡ ಕಳಪೆಯಾಗಿ ಜನರನ್ನು ಮತ್ತಷ್ಟು ಹೈರಾಣಾಗಿಸಿದೆ. ದೇವರಬಾಳು ಎಂಬಲ್ಲಿ ತಿಂಗಳ ಹಿಂದೆ ನಡೆದ ಕಳಪೆ ಕಾಮಗಾರಿಯೊಂದು ಇದಕ್ಕೆ ಜ್ವಲಂತ ಸಾಕ್ಷಿ. ಈ ಕುರಿತ ಒಂದು ಸ್ಟೋರಿಯಿಲ್ಲಿದೆ ನೋಡಿ.

ಬೈಂದೂರು ವಿಧಾನಸಭಾ ಕ್ಷೇತ್ರದ ಹಳ್ಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವರಬಾಳು ಜನರ ಗೋಳಿನ ಕಥೆಯಿದು. ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ಗಡಿಭಾಗವಿದು. ಒಂದಾನೊಂದು ಕಾಲದಲ್ಲಿ ನಕ್ಸಲರ ಓಡಾಟ, ಪೊಲೀಸರ ಗುಂಡಿನ ಶಬ್ದದಿಂದ ಕಂಗಾಲದ ಜನರು ಕಳೆದೊಂದು ದಶಕದಿಂದ ಒಂದಷ್ಟು ನೆಮ್ಮದಿ ಬಾಳು ಬಾಳುತ್ತಿದ್ದರಾದರೂ ಕೂಡ ಇನ್ನೂ ಈ ಭಾಗ ಅಭಿವೃದ್ಧಿಯಿಂದ ಬಹಳಷ್ಟು ಹಿಂದೆ ಉಳಿದಿದೆ. ನಡೆದಾಡಲು ಸರಿಯಾದ ರಸ್ತೆ ಸಂಪರ್ಕವಿಲ್ಲ, ಸುಸಜ್ಜಿತ ಸೇತುವೆಗಳಂತೂ ಕೇಳೋಕೆ ಇಲ್ಲ. ಮಳೆಗಾಲ ಬಂತೆಂದರೆ ಜನರ ಎದೆಯಲ್ಲಿ ನಡುಕ ಆರಂಭವಾಗುತ್ತೆ. ಸದ್ಯ ಇಲ್ಲಿ ನಡೆದ ಒಂದು ಕಳಪೆ ಕಾಮಗಾರಿ ಜನರ ತಲೆನೋವಿಗೂ ಕಾರಣವಾಗಿ ಬಿಟ್ಟಿದೆ.

   

ಹೌದು ಸುಮಾರು 20-30 ವರ್ಷಗಳ ಬೇಡಿಕೆಯಾಗಿದ್ದ ದೇವರಬಾಳು ಮತ್ತು ರಾಮನಹಕ್ಲು ಸಂಪರ್ಕಕದ ಕಿರು ಸೇತುವೆ ನಿರ್ಮಿಸಿ ಮುಗಿಯುವಷ್ಟರಲ್ಲೇ ಮುರಿದು ಬಿದ್ದಿದೆ. ಹೌದು…. ಕಳೆದ ತಿಂಗಳು ಈ ಸೇತುವೆ ನಿರ್ಮಾಣ ಕಾರ್ಯ ನಡೆದಿದ್ದು ಜೂನ್ ಎರಡನೇ ವಾರದಲ್ಲಿ ಕಿರು ಸೇತುವೆ ಸ್ಲಾಬ್ ಕೆಳಭಾಗಕ್ಕೆ ಅಳವಡಿಸಿದ್ದ ಫೋಲ್ಸ್ ತೆಗೆದಾಗ ಸ್ಲಾಬ್ ಕುಸಿದು ಬಿದ್ದಿದ್ದು ಕಳಪೆ ಹಾಗೂ ಅವೈಜ್ಞಾನಿಕ ಕಾಮಗಾರಿಯ ಗಂಭೀರ ಆರೋಪವಿದೀಗ ಕೇಳಿಬಂದಿದೆ.

ಸಾವೆಹಕ್ಲು ಎಂಬಲ್ಲಿಂದ ಚಕ್ರಾ ನದಿಗೆ ಕೂಡುವ ಕಬ್‌ಹಿತ್ಲು ಹೊಳೆ ಮಳೆಗಾಲದಲ್ಲಿ ಈ ಭಾಗದ ಜನರಿಗೆ ಒಂದಷ್ಟು ಸಮಸ್ಯೆಯ ಕೇಂದ್ರಬಿಂಧು. ರಾಮನಹಕ್ಲು, ಕಟ್ಟಿನಾಡಿ ಭಾಗದ ಜನರು ದೇವರಬಾಳು ಸಂಪರ್ಕಿಸಲು ಈ ಹರಿಯುವ ತೊರೆಯನ್ನು ದಾಟಿಯೇ ಹೊಗಬೇಕು. ವರ್ಷಂಪ್ರತಿ ಮಳೆಗಾಲದಲ್ಲಿ ಇಲ್ಲಿನ ಜನರೇ ಹತ್ತು ಸಾವಿರಕ್ಕೂ ಅಧಿಕ ಹಣ ವ್ಯಯಿಸಿ ಅಡಿಕೆ ಮರಗಳನ್ನು ಬಳಸಿ ತಾವೇ ಕಾಲುಸಂಕ ನಿರ್ಮಿಸಿಕೊಳ್ಳುತ್ತಿದ್ದರು. ಕೃಷಿ, ಕೂಲಿ ಕಾರ್ಮಿಕರು ಸೇರಿದಂತೆ ಶಾಲಾಮಕ್ಕಳ ಸಹಿತ ನೂರಾರು ಮಂದಿ ನಿತ್ಯ ದಾರಿ ಬಳಸುತ್ತಿದ್ದು ಇಲ್ಲಿಗೊಂದು ಕಾಲು ಸಂಕ ಬಹಳಷ್ಟು ವರ್ಷದ ಬೇಡಿಕೆಯಾಗಿತ್ತು.

ಅಂತೆಯೇ ಕಳೆದ ತಿಂಗಳು ಸುಮಾರು ಮೂರೂವರೆ ಲಕ್ಷ ವೆಚ್ಚದಲ್ಲಿ ಇಲ್ಲಿಗೆ ಕಿರು ಸೇತುವೆ ನಿರ್ಮಾಣಕ್ಕೆ ಮುಂಗಡ ಕಾಮಗಾರಿ ಕೈಗೊಳ್ಳಲಾಗಿತ್ತು. ಮೂವತ್ತೈದು ಅಡಿ ಉದ್ದ ಆರು ಅಡಿ ಅಗಲದ ಕಿರು ಸೇತುವೆ ಕೂಡ ನಿರ್ಮಿಸಲಾಗಿದ್ದು ನಾಲ್ಕೈದು ದಿನಗಳ ಹಿಂದೆ ಕಾಮಗಾರಿ ನಡೆಸಿದವರು ಸ್ಲಾಬ್ ಅಡಿಭಾಗದ ಪೋಲ್ಸ್ ತೆಗೆದಾಗ ಸಂಪೂರ್ಣ ಸ್ಲಾಬ್ ಕುಸಿದುಬಿದ್ದಿದೆ. ಕುಸಿದುಬಿದ್ದ ಸ್ಲಾಬ್ ಅನ್ನು ಒಡೆದು ತೆಗೆದ ಗುತ್ತಿಗೆದಾರರು ಎರಡು ಕಡೆ ಗಾರೆ ಮಾಡಿ ಅರ್ದಂಬರ್ಧ ಕೆಲಸಕ್ಕೆ ನಿಲ್ಲಿಸಿದ್ದಾರೆ. ಈ ಬಾರಿಯಾದರೂ ಕಿರುಸೇತುವೆ ಮೇಲೆ ನೆಮ್ಮದಿಯಲ್ಲಿ ನಡೆಯಬಹುದೆಂಬ ಜನರ ಕನಸು ಕನಸಾಗಿಯೇ ಉಳಿದುಬಿಟ್ಟಿದೆ. ಗಡಿ ಸಮಸ್ಯೆ ಸೇರಿದಂತೆ ಹಲವು ಕೊರತೆಗಳನ್ನೇ ಹೊದ್ದು ಮಲಗಿದ ದೇವರಬಾಳು ಭಾಗಕ್ಕೆ ಬೈಂದೂರು ಶಾಸಕರು ಇನ್ನೂ ಕಾಲಿಟ್ಟಿಲ್ಲ, ಸಮಸ್ಯೆಗಳನ್ನು ಆಲಿಸಿಲ್ಲ ಎಂಬ ಆರೋಪವೂ ಇಲ್ಲಿನ ಜನರದ್ದು.

ಒಟ್ಟಿನಲ್ಲಿ ಓಟು ಕೇಳಲು ಬರುವ ಜನಪ್ರತಿನಿಧಿಗಳು ಆರಿಸಿ ಬಂದ ಮೇಲೆ ನಮ್ಮ ಕಷ್ಟಕ್ಕೆ ಕ್ಯಾರೆ ಅನ್ನೊಲ್ಲ ಅನ್ನೋದು ಜನರ ಅಳಲು. ಇನ್ನು ಇಲ್ಲಿನ ಕಳಪೆ ಕಾಮಗಾರಿ ಬಗ್ಗೆ ಸೂಕ್ತ ತನಿಖೆಯಾಗಬೇಕು, ಸಂಬಂದಪಟ್ಟವರು ಇತ್ತ ಗಮನಹರಿಸಬೇಕಿದೆ.

ವರದಿ- ಯೋಗೀಶ್ ಕುಂಭಾಸಿ

Comments are closed.