
ಮ್ಯಾಂಚೆಸ್ಟರ್: ಮ್ಯಾಂಚೆಸ್ಟರ್ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ನ ಹೈ ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಡಕ್ವರ್ತ್ ನಿಯಮದ ಅನ್ವಯ 89 ರನ್ಗಳ ಭರ್ಜರಿ ಜಯ ಸಾಧಿಸಿದೆ. ರೋಹಿತ್ ಶರ್ಮಾ ಅವರ ಆಕರ್ಷಕ ಶತಕ ಹಾಗೂ ಬೌಲರ್ಗಳ ಸಂಘಟಿತ ಹೋರಾಟದ ನೆರವಿನಿಂದ ಕೊಹ್ಲಿ ಪಡೆ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಅಜೇಯ ಗೆಲುವಿನ ಓಟ ಮುಂದುವರೆಸಿದೆ.
1992ರಿಂದ ಈವರೆಗೆ ವಿಶ್ವಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು 6 ಪಂದ್ಯಗಳಲ್ಲಿ ಸೆಣಸಿವೆ. 6ಕ್ಕೆ ಆರೂ ಪಂದ್ಯಗಳಲ್ಲೂ ಟೀಂ ಇಂಡಿಯಾವೇ ಭರ್ಜರಿ ಜಯ ಸಾಧಿತ್ತು. ಸದ್ಯ ಈ ಬಾರಿಯ ವಿಶ್ವಕಪ್ನಲ್ಲೂ ಭಾರತ ಗೆದ್ದಿದ್ದು, ಪಾಕ್ ಭಾರೀ ಮುಖಬಂದ ಅನುಭವಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ಪರ ಓಪನರ್ಗಳಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಬಿರುಸಿನ ಆಟ ಪ್ರದರ್ಶಿಸುತ್ತಿದರು. ಪಾಕ್ ಬೌಲರ್ಗಳ ಬೆಂಡೆತ್ತಿದ ಈ ಜೋಡಿ ಶತಕದ ಜೊತೆಯಾಟವಾಡಿತು. ಜೊತೆಗೆ ಇಬ್ಬರೂ ಅರ್ಧಶತಕ ಪೂರೈಸಿ ಮಿಂಚಿದರು.
ಆದರೆ ರಾಹುಲ್ 57 ರನ್ ಗಳಿಸಿ ಬಾಬರ್ಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ಮೂಲಕ ರೋಹಿತ್-ರಾಹುಲ್ರ 136 ರನ್ಗಳ ಅಮೋಘ ಜೊತೆಯಾಟ ಅಂತ್ಯವಾಯಿತು. ಜೊತೆಗೆ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆರಂಭದಲ್ಲಿಯೇ 100 ರನ್ ಗಳಿಸಿದ ವಿಶ್ವದ ಐದನೇ ಜೋಡಿ ಎಂಬುದು ರೋಹಿತ್-ರಾಹುಲ್ ಬರೆದಿರುವ ದಾಖಲೆಯಾಯಿತು.
ನಂತರ ರೋಹಿತ್ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದರು. ರೋಹಿತ್ ಸ್ಪೋಟಕ ಆಟಕ್ಕೆ ಮುಂದಾದರೆ, ಕೊಹ್ಲಿ ಸಾತ್ ನೀಡಿದರು. ಅದರಂತೆ ಹಿಟ್ಮ್ಯಾನ್ ಏಕದಿನ ಕ್ರಿಕೆಟ್ನಲ್ಲಿ 24ನೇ ಶತಕ ಬಾರಿಸಿದರು. ಈ ಬಾರಿ ಮತ್ತೆ ದ್ವಿಶತಕ ಬಾರಿಸುತ್ತಾರೆ ಎಂದು ಅಭಿಮಾನಿಗಳು ನಂಬಿಕೊಂಡಿದ್ದರು.
ಆದರೆ, 113 ಎಸೆತಗಳಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್ ಚಚ್ಚಿ ರೋಹಿತ್ 140 ರನ್ಗೆ ಬ್ಯಾಟ್ ಕೆಳಗಿಟ್ಟರು. ಬಳಿಕ ಕೊಹ್ಲಿ ಜೊತೆಯಾದ ಹಾರ್ದಿಕ್ ಪಾಂಡ್ಯ 19 ಎಸೆತಗಳಲ್ಲಿ 26 ರನ್ ಬಾರಿಸಿ ಔಟ್ ಆದರೆ, ಎಂ ಎಸ್ ಧೋನಿ ಕೇವಲ 1 ರನ್ಗೆ ಬ್ಯಾಟ್ ಕೆಳಗಿಟ್ಟು ನಿರಾಸೆ ಮೂಡಿಸಿದರು.
ಈ ಮಧ್ಯೆ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 51ನೇ ಅರ್ಧಶತಕ ಸಿಡಿಸಿ ದಾಖಲೆ ಬರೆದರು. ಅತಿ ವೇಗವಾಗಿ 11 ಸಾವಿರ ರನ್ಗಳ ಗಡಿ ಮುಟ್ಟಿದ ಸಾಧನೆ ಮಾಡಿದರು. ಆದರೆ 46.4 ಓವರ್ ಆಗುವ ಹೊತ್ತಿಗೆ ಪಂದ್ಯಕ್ಕೆ ಮಳೆರಾಯ ಅಡ್ಡಿ ಪಡಿಸಿದ. ಮಳೆ ನಿಂತ ಬಳಿಕ ಮತ್ತೆ ಪಂದ್ಯ ಶುರುವಾಯಿತಾದರು ಭಾರತ ಹೆಚ್ಚು ರನ್ ಗಳಿಸಲು ಸಾಧ್ಯವಾಗಿಲ್ಲ. ಅರ್ಧಶತಕ ಬಾರಿಸಿದ್ದ ಕೊಹ್ಲಿ ಕೂಡ 77 ರನ್ಗೆ ಔಟ್ ಆದರು.
ಅಂತಿಮವಾಗಿ ಭಾರತ 50 ಓವರ್ಗೆ 5 ವಿಕೆಟ್ ಕಳೆದುಕೊಂಡು 336 ರನ್ ಕಲೆಹಾಕಿತು. ಪಾಕ್ ಪರ ಮೊಹಮ್ಮದ್ ಅಮೀರ್ 3 ವಿಕೆಟ್ ಕಿತ್ತರೆ, ಹಸನ್ ಅಲಿ ಹಾಗೂ ವಹಾಬ್ ರಿಯಾಜ್ ತಲಾ 1 ವಿಕೆಟ್ ಪಡೆದರು.
ಕೊಹ್ಲಿ ಸೈನ್ಯ ನೀಡಿದ 337 ರನ್ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ಆರಂಭದಲ್ಲೇ ಆಘಾತ ಅನುಭವಿಸಿತು. ವಿಜಯ್ ಶಂಕರ್ ಬೌಲಿಂಗ್ನಲ್ಲಿ ಆರಂಭದಲ್ಲೇ ಇಮಾಮ್ ಉಲ್ ಹಖ್(7) ಎಲ್ಗಿ ಬಲೆಗೆ ಸಿಲುಕಿ ಪೆವಿಲಿಯನ್ ಸೇರಿಕೊಂಡರು.
ಐದನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಭುವನೇಶ್ವರ್ ಕುಮಾರ್ ಗಾಯಕ್ಕೊಳಗಾದ ಕಾರಣ ಮೈದಾನ ತೊರೆಯಬೇಕಾಯಿತು. ಬಳಿಕ ಓವರ್ ಪೂರ್ಣಗೊಳಿಸಲು ಬಂದ ಶಂಕರ್ ತನ್ನ ಚೊಚ್ಚಲ ವಿಶ್ವಕಪ್ನ ಮೊದಲ ಎಸೆತದಲ್ಲೇ ಪಾಕ್ನ ಮೊದಲ ವಿಕೆಟ್ ಕಿತ್ತರು.
ಬಳಿಕ 2ನೇ ವಿಕೆಟ್ಗೆ ಫಖರ್ ಜಮಾನ್ ಜೊತೆಯಾದ ಬಾಬರ್ ಅಜಂ ಉತ್ತಮ ಜೊತೆಯಾಟ ಆಡಿದರು. ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ 104 ರನ್ಗಳ ಕಾಣಿಕೆ ನೀಡಿತು. ಈ ಸಂದರ್ಭ ಕುಲ್ದೀಪ್ ಯಾದವ್ ಸ್ಪಿನ್ ಮೋಡಿಗೆ ಇಬ್ಬರು ಸೆಟ್ ಬ್ಯಾಟ್ಸ್ಮನ್ಗಳು ಬಲಿಯಾಗಿದ್ದು ಪಂದ್ಯದ ಟರ್ನಿಂಗ್ ಪಾಯಿಂಟ್ ಎಂಬಂತಾಗಿದೆ.
48 ರನ್ ಗಳಿಸಿದ್ದ ಬಾಬರ್ ಅಜಂ ಕುಲ್ದೀಪ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರೆ, ಇತ್ತ ಅರ್ಧಶತಕ ಬಾರಿಸಿ ಬ್ಯಾಟ್ ಬೀಸುತ್ತದ್ದ ಫಖರ್ ಜಮಾನ್ ಕೂಡ 68 ರನ್ ಗಳಿಸಿ ಕುಲ್ದೀಪ್ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೆ ಬೌಲಿಂಗ್ ಮಾಡಲು ಬಂದ ಹಾರ್ದಿಕ್ ಪಾಂಡ್ಯ ತನ್ನ ಕೊನೆಯ ಎರಡು ಎಸೆತದಲ್ಲಿ ಪಾಕ್ನ ಪ್ರಮುಖ ಎರಡು ವಿಕೆಟ್ ಕಿತ್ತರು. ಮೊಹಮ್ಮದ್ ಹಫೀಜ್ 9 ರನ್ಗೆ ಔಟ್ ಆದರೆ, ತನ್ನ ಮುಂದಿನ ಎಸೆತದಲ್ಲೇ ಅನುಭವಿ ಶೋಯೆಬ್ ಮಲಿಕ್ರನ್ನು ಕ್ಲೀನ್ ಬೌಲ್ಡ್ ಮಾಡಿ ಶಾಕ್ ನೀಡಿದ್ದಾರೆ.
ನಾಯಕ ಸರ್ಫರಾಜ್ ಅಹ್ಮದ್ ಕೂಡ ತಂಡಕ್ಕೆ ಆಸರೆಯಾಗದೆ 30 ಎಸೆತಗಳಲ್ಲಿ 12 ರನ್ ಗಳಿಸಿ ಶಂಕರ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಈ ಸಂದರ್ಭ 35 ಓವರ್ಗೆ ಪಾಕಿಸ್ತಾನ 6 ವಿಕೆಟ್ ಕಳೆದುಕೊಂಡು 166 ರನ್ ಕಲೆಹಾಕಿರುವಾಗ ಮಳೆರಾಯನ ಆಗಮನವಾಯಿತು. ಹೀಗಾಗಿ ಪಂದ್ಯವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಯಿತು. ಬಳಿಕ ಡಕ್ವರ್ತ್ ನಿಯಮದ ಅನ್ವಯ ಪಂದ್ಯವನ್ನು 40 ಓವರ್ಗೆ ಸೀಮಿತ ಗೊಳಿಸಲಾಯಿತು. ಇದರ ಪ್ರಕಾರ ಪಾಕ್ಗೆ ಗೆಲ್ಲಲು 5 ಓವರ್ಗಳಲ್ಲಿ 136 ರನ್ಗಳ ಟಾರ್ಗೆಟ್ ನೀಡಲಾಯಿತು.
ಆದರೆ, ಈ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟುವಲ್ಲಿ ವಿಫಲವಾದ ಪಾಕ್ 30 ಎಸೆತಗಳಲ್ಲಿ ಕೇವಲ 46 ರನ್ ಬಾರಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಗೊಂಡಿತು. ಇಮಾದ್ ವಾಸಿಮ್ 46 ರನ್ಗಳ ಹೋರಾಟ ನಡೆಸಿದರಾದರು ಉಪಯೋಗವಾಗಿಲ್ಲ. ಅಂತಿಮವಾಗಿ ಪಾಕ್ ನಿಗದಿತ 40 ಓವರ್ಗೆ 6 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತು. ಭಾರತ ಪರ ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಕಿತ್ತರು.
89 ರನ್ಗಳ ಭರ್ಜರಿ ಗೆಲುವಿನ ಮೂಲಕ ಭಾರತ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಜೊತೆಗೆ 2017ರ ಚಾಂಪಿಯನ್ಶಿಪ್ ಟ್ರೋಫಿಯಲ್ಲಿ ಭಾರತ ತಂಡ ಪಾಕ್ ವಿರುದ್ಧ ಸೋತಿತ್ತು. ಈ ಸೋಲಿಗೆ ವಿಶ್ವಕಪ್ನಲ್ಲಿ ಕೊಹ್ಲಿ ಪಡೆ ಸೇಡು ತೀರಿಸಿಕೊಂಡಿದೆ. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.
ಈ ಬಾರಿಯ ವಿಶ್ವಕಪ್ನಲ್ಲಿ ಭಾರತ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಭರ್ಜರಿ ಜಯ ಸಾಧಿಸಿದರೆ, ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೀಗಾಗಿ 7 ಅಂಕದೊಂದಿಗೆ 2ನೇ ಸ್ಥಾನಕ್ಕೇರಿದೆ. ಇತ್ತ ಪಾಕಿಸ್ತಾನ ಆಡಿರುವ 4 ಪಂದ್ಯಗಳಲ್ಲಿ ಕೇವಲ ಒಂದನ್ನು ಗೆದ್ದರೆ, ಮೂರು ಪಂದ್ಯ ಸೋಲುಂಡಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿ 3 ಅಂಕದೊಂದಿಗೆ 9ನೇ ಸ್ಥಾನದಲ್ಲಿದೆ.
Comments are closed.